ಕಾರ್ಮಿಕರಿಗೆ ಸರ್ಕಾರಿ ಯೋಜನೆ ತಲುಪಿಸಲು ಕ್ರಮ

ದಾವಣಗೆರೆ

       ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಸೇರಿದಂತೆ ವಿವಿಧ ಯೋಜನೆಗಳನ್ನು ಕಾರ್ಮಿಕರಿಗೆ ತಲುಪಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕರ ವಿಭಾಗದ ಮುಂದಾಗಿದೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ಅಧ್ಯಕ್ಷ ಎಸ್.ಎಸ್.ಪ್ರಕಾಸಂ ತಿಳಿಸಿದರು.

       ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವು ಬೀದಿ ವ್ಯಾಪಾರಿಗಳಿಗಾಗಿ 10 ಸಾವಿರ ರೂ. ಬಡ್ಡಿರಹಿತ ಸಾಲ ನೀಡುವ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ ಜಾರಿಗೊಳಿಸಿದ್ದು, ಮಾ.1ರ ಅಸಂಘಟಿತ ಕಾರ್ಮಿಕರ ದಿನಾಚರಣೆಯಂದು ಫಲಾನುಭವಿಗಳಿಗೆ ಯೋಜನೆಯ ಸ್ಮಾರ್ಟ್ ಕಾರ್ಡ್ ವಿತರಿಸಲಾಗುವುದು ಎಂದು ಹೇಳಿದರು.

       ಈ ಯೋಜನೆಯ ಸೌಲಭ್ಯ ಪಡೆಯುವವರು ಆಧಾರ್ ಕಾರ್ಡ್, 3 ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು. ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 5 ಸಾವಿರ ಬೀದಿ ವ್ಯಾಪಾರಿಗಳನ್ನು ಯೋಜನೆಗೆ ನೋಂದಾಯಿಸಲಾಗುವುದು. ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆಗೆ ಮನೆಗೆಲಸದವರು, ಹಮಾಲರು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕಂಬಾರರು, ಭಟ್ಟಿ ಕಾರ್ಮಿಕರು, ಕ್ಷೌರಿಕರು ಸೇರಿದಂತೆ 11 ವರ್ಗದ ಕಾರ್ಮಿಕರು ಒಳಪಡುತ್ತಾರೆ ಎಂದರು.

       ಸಿದ್ದರಾಮಯ್ಯ ನೇತೃತ್ವದ ಹಿಂದಿನ ಸರ್ಕಾರವು ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿ ಯೋಜನೆಗೆ 380 ಕೋಟಿ ರೂ. ಅನುದಾನ ಮೀಸಲಿಟ್ಟಿತ್ತು. ಈ ಯೋಜನೆಯಡಿ ಕಾರ್ಮಿಕರು 100 ರೂ. ಪಾವತಿಸಿದರೆ, ಸರ್ಕಾರ 200 ರೂ. ಪಾವತಿಸಲಿದ್ದು, 20ರಿಂದ 40 ವರ್ಷ ವಯೋಮಾನದ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯ ಸಿಗಲಿದೆ. 18ರಿಂದ 60 ವಯೋಮಾನದವರು ಯೋಜನೆಗೆ ಅರ್ಹರಾಗಿದ್ದು, ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

        ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಸುಮಾರು 7 ಸಾವಿರ ಕೋಟಿ ರೂ. ಹಣವಿದ್ದು, ಇದರಲ್ಲಿ 300 ಕೋಟಿ ಮಾತ್ರ ಖರ್ಚಾಗುತ್ತಿದೆ. ಹಣ ಸದ್ಬಳಕೆಯಾಗುವ ನಿಟ್ಟಿನಲ್ಲಿ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ, ಸೌಲಭ್ಯ ಒದಗಿಸಲು ಕಾಂಗ್ರೆಸ್ ಕಾರ್ಮಿಕ ವಿಭಾಗ ಮುಂದಾಗಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಪ್ರಶಾಂತ್, ಪಕ್ಷದ ಮುಖಂಡರಾದ ಕೆ.ಸಿ.ಲಿಂಗರಾಜು, ರಾಜಶೇಖರಗೌಡ್ರು, ಅಲ್ಲಾವುಲೀ ಗಾಜಿಖಾನ್, ಲಿಯಾಖತ್ ಅಲಿ, ಅಬ್ದುಲ್ ಜಬ್ಬಾರ್, ಕೆ.ಎಲ್.ಹರೀಶ, ಡಿ.ಶಿವಕುಮಾರ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ