ಮೇಕೆದಾಟು ಯೋಜನೆ : ಮೈತ್ರಿ ಸರ್ಕಾರ ಹಾಗು ಡಿವಿಎಸ್ ನಡುವೆ ಜಟಾಪಟಿ..!

ಬೆಂಗಳೂರು

   ಮೇಕೆದಾಟಿನಲ್ಲಿ ಆಣೆಕಟ್ಟು ನಿರ್ಮಾಣ ಮಾಡುವ ಸಂಬಂಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ರಾಜ್ಯದ ಸಮ್ಮಿಶ್ರ ಸರ್ಕಾರದ ನಡುವೆ ಜಟಾಪಟಿ ಶುರುವಾಗಿದೆ.

    ಅಂದ ಹಾಗೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇದುವರೆಗೆ ಸಮಗ್ರ ಯೋಜನಾ ವರದಿ(ಡಿ.ಪಿ.ಆರ್) ಯನ್ನು ಕೇಂದ್ರಕ್ಕೆ ಸಲ್ಲಿಸಿಲ್ಲ ಎಂದು ದೂರಿದರು.

    ಮುಂದುವರಿದು ಮಾತನಾಡಿ,ಇನ್ನಾದರೂ ರಾಜ್ಯ ಸರ್ಕಾರ ಸಮಗ್ರ ಯೋಜನಾ ವರದಿ ಸಿದ್ಧಗೊಳಿಸಿ ಕೇಂದ್ರಕ್ಕೆ ಕಳಿಸಿಕೊಡಲಿ.ಈ ಸಂಬಂಧ ನಾನೇ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇನೆ.ರಾಜ್ಯ ಸರ್ಕಾರ ತಕ್ಷಣ ಇದನ್ನು ಕೇಂದ್ರಕ್ಕೆ ಸಲ್ಲಿಸಿದರೆ ನಾನು ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಿ ಅದಕ್ಕೆ ಒಪ್ಪಿಗೆ ಕೊಡಿಸಲು ಯತ್ನಿಸುತ್ತೇನೆ.

    ಒಂದು ವೇಳೆ ಪ್ರಧಾನಮಂತ್ರಿಗಳ ಜತೆ ಮಾತುಕತೆ ನಡೆಸುವ ಅನಿವಾರ್ಯತೆ ಬಂದರೂ ನಾನು ಮಾತನಾಡು ತ್ತೇನೆ.ಆದರೆ ಇದುವರೆಗೆ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿ ಸಲ್ಲಿಕೆ ಮಾಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

     ಆದರೆ ಪತ್ರಿಕೆಯೊಂದಿಗೆ ಮಾತನಾಡಿದ ಕುಮಾರಸ್ವಾಮಿ ಸರ್ಕಾರದ ಹಿರಿಯ ಸಚಿವರೊಬ್ಬರು:ಸದಾನಂದಗೌಡರು ಕೇಂದ್ರ ಮಂತ್ರಿಗಳಾದ ಸಂಭ್ರಮದಲ್ಲಿ ವಸ್ತುಸ್ಥಿತಿ ಏನೆಂಬುದನ್ನು ಗಮನಿಸದೆ ಮಾತನಾಡಿದ್ದಾರೆ ಎಂದರು.

   ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿಯನ್ನು ಸಿದ್ದಗೊಳಿಸಲಾಗಿದೆ.ಹಾಗೆಯೇ ಪರಿಷ್ಕøತ ಅಂದಾಜಿನ ಪ್ರಮಾಣವನ್ನು ಆರು ಸಾವಿರ ಕೋಟಿ ರೂಗಳಿಂದ ಒಂಭತ್ತು ಸಾವಿರ ಕೋಟಿ ರೂಗಳಿಗೆ ಹೆಚ್ಚಿಸಿ ಫೆಬ್ರವರಿ ತಿಂಗಳಲ್ಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

     ಹೀಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ ಸಂದರ್ಭದಲ್ಲಿ ಸಂಬಂಧಿಸಿದ ಕೇಂದ್ರ ಸಚಿವರು:ಮೇಕೆದಾಟು ಯೋಜನೆಯ ಜಾರಿಗೆ ಸಂಬಂಧಿಸಿದಂತೆ ವಿವರವಾದ ಅಧ್ಯಯನ ನಡೆಸಲು ತಜ್ಞರ ತಂಡವನ್ನು ಕರ್ನಾಟಕಕ್ಕೆ ಕಳಿಸುವುದಾಗಿ ಭರವಸೆ ನೀಡಿದ್ದರು.

       ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರದ ತಂಡವನ್ನು ಕಳಿಸಲು ವಿಳಂಬವಾಗುತ್ತದೆ ಎಂದು ಅವರು ಹೇಳಿದ್ದರು.ಆದರೆ ಲೋಕಸಭಾ ಚುನಾವಣೆ ಮುಗಿದು ಫಲಿತಾಂಶವೂ ಪ್ರಕಟವಾಗಿದೆ.ಇದುವರೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಧ್ಯಯನ ತಂಡವನ್ನು ಕಳಿಸಿಲ್ಲ.

     ಇಷ್ಟೆಲ್ಲ ಬೆಳವಣಿಗೆಗಳಾಗಿದ್ದರೂ ಕೇಂದ್ರ ಸಚಿವರಾಗಿರುವ ಡಿ.ವಿ.ಸದಾನಂದಗೌಡರಿಗೆ ವಿಷಯವೇ ತಿಳಿದಿಲ್ಲ ಎನ್ನುವುದು ಅಚ್ಚರಿ ಮೂಡಿಸುತ್ತದೆ.ಸ್ವಂತ ರಾಜ್ಯದ ಒಂದು ಯೋಜನೆಗೆ ಸಂಬಂಧಿಸಿದಂತೆ ಇಷ್ಟೆಲ್ಲ ಬೆಳವಣಿಗೆ ಗಳಾಗಿದ್ದರೂ ಅದರ ಬಗ್ಗೆ ಅರಿವೇ ಇಲ್ಲದ ಸದಾನಂದಗೌಡ,ಈಗ ರಾಜ್ಯ ಸರ್ಕಾರಕ್ಕೆ ನೀತಿ ಪಾಠ ಹೇಳಲು ಹೊರಟಿರುವುದು ವಿಪರ್ಯಾಸ.

     ಈಗಲಾದರೂ ಇವರು ದಿಲ್ಲಿಗೆ ಹೋದಾಗ ತಮ್ಮ ಸರ್ಕಾರಕ್ಕೆ ಅದಾಗಲೇ ಮೇಕೆದಾಟು ಯೋಜನೆಯ ಸಮಗ್ರ ಯೋಜನಾ ವರದಿ ಬಂದಿರುವ ಕುರಿತು ಅರಿಯಲಿ.ಅರಿತು ಕೆಲಸ ಮಾಡಿಸಲಿ.ಮೇಕೆದಾಟು ಯೋಜನೆಗೆ ಅನುಮತಿ ದಕ್ಕುವಂತೆ ಮಾಡಲಿ ಎಂದು ಈ ಸಚಿವರು ಪತ್ರಿಕೆಯ ಬಳಿ ಹೇಳಿದರು.

     ಅಂದ ಹಾಗೆ ಸಿದ್ಧರಾಮಯ್ಯ ಅವರ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲರ ಕಾಲದಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆ ಸಿದ್ಧವಾಗಿತ್ತಲ್ಲದೇ ಈ ಸಂಬಂಧ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ಜಾಗತಿಕ ಟೆಂಡರ್ ಕರೆಯಲಾಗಿತ್ತು.

     ಇದಾದ ನಂತರ ಸಮಗ್ರ ಯೋಜನಾ ವರದಿ ಸಿದ್ಧವಾಗಿದ್ದಲ್ಲದೇ ಪದೇ ಪದೇ ಪರಿಷ್ಕರಣೆ ಗೊಳಗಾಗಿತ್ತು . ಆರಂಭದಲ್ಲಿ ಐದು ಸಾವಿರದ ನಾಲ್ಕು ನೂರು ಕೋಟಿ ರೂಗಳಷ್ಟು ಅಂದಾಜು ವೆಚ್ಚದಲ್ಲಿ ಯೋಜನೆಯನ್ನು ಜಾರಿಗೊಳಿಸಬಹುದು ಎಂದು ಲೆಕ್ಕ ಹಾಕಲಾಗಿತ್ತು.

    ಆನಂತರ ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸಲು ಈ ಪ್ರಮಾಣದ ಹಣ ಸಾಲುವುದಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಆರು ಸಾವಿರಕ್ಕೂ ಹೆಚ್ಚು ಮೊತ್ತದ ಅಂದಾಜು ವೆಚ್ಚದ ಯೋಜನೆಯನ್ನು ತಯಾರಿಸಲಾಗಿತ್ತು .ತದನಂತರ ಅದು ಮತ್ತೆ ಪರಿಷ್ಕರಣೆಗೊಂಡು ಒಂಭತ್ತು ಸಾವಿರ ಕೋಟಿ ರೂಗಳಿಗೆ ಏರಿ ಕೇಂದ್ರಕ್ಕೆ ಸಲ್ಲಿಕೆಯಾಗಿತ್ತು .ಆದರೆ ಅದು ಇದುವರೆಗೂ ಕೇಂದ್ರಕ್ಕೆ ಸಲ್ಲಿಕೆಯಾಗಿಲ್ಲ ಎಂದು ಸದಾನಂದಗೌಡ ಹೇಳುತ್ತಿರುವುದು ರಾಜ್ಯ ಸರ್ಕಾರವನ್ನು ಕೆರಳಿಸಿದ್ದು ಈಗಾಗಲೇ ಸರ್ಕಾರ ತಿರುಗೇಟು ನೀಡಲು ತಯಾರಿ ನಡೆಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap