ತುಮಕೂರು
ಹೇಮಾವತಿ ನೀರು ತಪ್ಪಿಸಿದರು, ಗೆದ್ದ ಮೇಲೆ ಇತ್ತ ಬರುವುದೇ ಇಲ್ಲ ಎಂದೆಲ್ಲಾ ಎದುರಾಳಿಗಳು ತಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಈ ದೇವೇಗೌಡ ಹುಟ್ಟು ಹೋರಾಟಗಾರ, ಹೇಮಾವತಿ ಡ್ಯಾಂ, ಆಲಮಟ್ಟಿ ಡ್ಯಾಂ ನಿರ್ಮಾಣಕ್ಕೆ ಅಗತ್ಯ ಹಣ ನೀಡಲಿಲ್ಲ ಎಂದು ನೀರಾವರಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನೀಡ ಹೊರಬಂದೆ, ತುಮಕೂರಿನ ಋಣ ತೀರಿಸಿಯೇ ರಾಜಕೀಯ ನಿವೃತ್ತಿಯಾಗುತ್ತೇನೆ, ಯಾವತ್ತೂ ದ್ರೋಹ ಮಾಡುವುದಿಲ್ಲ, ಅಪಪ್ರಚಾರಗಳಿಗೆ ಕಿವಿಗೊಡದೆ ಕ್ಷೇತ್ರದ ಜನ ಚುನಾವಣೆಯಲ್ಲಿ ತಮ್ಮ ಕೈ ಹಿಡಿಯಬೇಕು ಎಂದು ಮಾಜಿ ಪ್ರಧಾನಿ, ಮೈತ್ರಿ ಅಭ್ಯರ್ಥಿ ದೇವೇಗೌಡರು ಮನವಿ ಮಾಡಿದರು.
ನಗರದಲ್ಲಿ ಜಿಲ್ಲಾ ಮಡಿವಾಳರ ಸಂಘದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಸಣ್ಣಪುಟ್ಟ ಜಾತಿಗಳ 10 ಲಕ್ಷ ಜನರಿದ್ದಾರೆ, ಸಣ್ಣ ಸಮಾಜಗಳ ಸಮಸ್ಯೆ ಅರ್ಥ ಮಾಡಿಕೊಂಡಿದ್ದೇನೆ, ಅವರು ಆರ್ಥಿಕವಾಗಿ ಸಬಲರಾಗಲು ಅವರ ಧ್ವನಿಯಾಗಿ ನಿಲ್ಲುತ್ತೇನೆ. ಈ ವರ್ಗದವರೆಲ್ಲಾ ನನ್ನ ಕೈಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಹಿಂದುಳಿದ ವರ್ಗಗಳು ಹಾಗೂ ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಿ, ಅವರು ರಾಜಕೀಯ ಸ್ಥಾನಮಾನ ಪಡೆಯಲು ಈ ದೇವೇಗೌಡ ಕಾರಣ ಎಂಬುದು ಎಲ್ಲರಿಗೂ ತಿಳಿದೇ ಇದೆ, ಅದರ ಫಲವಾಗಿ ಅಲೆಮಾರಿ ಜನಾಂಗದ ಹೆಣ್ಣು ಮಗಳು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಲು ಸಾಧ್ಯವಾಯಿತು. ಸಣ್ಣ ಸಮಾಜದ ವ್ಯಕ್ತಿ ಕೂಡಾ ಗ್ರಾಮ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗಳಲ್ಲಿ ರಾಜಕೀಯ ಸ್ಥಾನ ಪಡೆದು ಸ್ವಾಭಿಮಾನ ಮೆರೆಯುವಂತಾಯಿತು, ಅದಕ್ಕೆ ಈ ದೇವೇಗೌಡ ಕಾರಣ ಎಂದು ಈ ವರ್ಗದ ಜನೆ ನೆನಪು ಮಾಡಿಕೊಳ್ಳಬೇಕು ಎಂದು ಹೇಳಿದರು.
ಚುನಾವಣೆಗೆ ನಿಲ್ಲಲೇಬಾರದು ಎಂದು ತೀರ್ಮಾನಿಸಿದ್ದೆ. ದೇಶದ ಕೆಟ್ಟ ಆಡಳಿತ ವ್ಯವಸ್ಥೆ ಕೊನೆಗಾಣಿಸಬೇಕು ಎನ್ನುವ ಕಾರಣಕ್ಕೆ ಹಲವು ಪಕ್ಷಗಳ ನಾಯಕರು ಸ್ಪರ್ಧೆ ಮಾಡುವಂತೆ ಕೇಳಿಕೊಂಡರು. ಅದರ ಪರಿಣಾಮ ವಿಧಿ ನನ್ನನ್ನು ತುಮಕೂರಿಗೆ ಕರೆದುಕೊಂಡು ಬಂದಿತು. ಈ ಹೋರಾಟದಲ್ಲಿ ಸಿದ್ದರಾಮಯ್ಯ ನನ್ನ ಜೊತೆಯಾಗಿದ್ದಾರೆ, ಇಬ್ಬರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಮತ್ತೆ ನಿಲ್ಲುವುದಿಲ್ಲ
ಇದು ನನ್ನ ಕಡೇ ಚುನಾವಣೆ ಮತ್ತೆ ನಿಲ್ಲುವುದಿಲ್ಲ. ನನಗೀಗ 86 ವರ್ಷ ವಯಸ್ಸು, ತಿಂಗಳು ಕಳೆದರೆ 87 ಆಗುತ್ತದೆ. ಇನ್ನೈದು ವರ್ಷಕ್ಕೆ 92 ವರ್ಷ. ಆಗ ಮತ್ತೊಂದು ಚುನಾವಣೆಯಲ್ಲಿ ಸ್ಪರ್ಧಿಸಲು ದೈಹಿಕವಾಗಿ ಶಕ್ತಿ ಇರುವುದಿಲ್ಲ. ತುಮಕೂರಿನಲ್ಲಿ ಗೆದ್ದು, ಜನರ ಋಣ ತೀರಿಸಿ ರಾಜಕೀಯ ನಿವೃತ್ತಿಯಾಗುತ್ತೇನೆ.
ಈ ವಯಸ್ಸಿನಲ್ಲೂ ಓಡಾಟ ನಿಲ್ಲಿಸಿಲ್ಲ, ಕ್ಷೇತ್ರಗಳನ್ನು ಸುತ್ತುತ್ತಿದ್ದೇನೆ, ಈ ಕಾರ್ಯಕ್ರಮ ಮುಗಿಸಿ ಚಿಕ್ಕಮಗಳೂರು, ಕೊಡಗಿಗೆ ಹೋಗುತ್ತೇನೆ, 16, 17ರಂದು ತುಮಕೂರಿನಲ್ಲೇ ಇರುತ್ತೇನೆ, 18ರಂದು ನಮ್ಮೂರಿಗೆ ಹೋಗಿ ಮತ ಚಲಾಯಿಸಿ ತುಮಕೂರಿಗೆ ಬರುತ್ತೇನೆ, ತುಮಕೂರು ಬಿಡುವುದಿಲ್ಲ ಎಂದು ದೇವೇಗೌಡರು ಹೇಳಿದರು.
ಸಚಿವ ಎಸ್ ಆರ್ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಚೌಡರೆಡ್ಡಿ, ಮಾಜಿ ಶಾಸಕರಾದ ಹೆಚ್ ನಿಂಗಪ್ಪ, ರಮೇಶ್ ಬಾಬು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಲತಾರವಿಕುಮಾರ್, ಮುಖಂಡರಾದ ಗೋವಿಂದರಾಜು, ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮುದಿಮಡು ರಂಗಶಾಮಯ್ಯ, ಮುಖಂಡರಾದ ಆರ್ ಕಾಮರಾಜ್, ಶ್ರೀನಿವಾಸಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
