ತುಮಕೂರು
ತುಮಕೂರು ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದೆ. ತಾಲ್ಲೂಕಿನ 78 ಗ್ರಾಮಗಳಲ್ಲಿ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ 28 ಗ್ರಾಮಗಳಿಗೆ ಅತಿ ತುರ್ತಾಗಿ ಕೊಳವೆ ಬಾವಿ ಕೊರೆಸಬೇಕಾದ ಪರಿಸ್ಥಿತಿ ತಲೆದೋರಿದೆ ಎಂಬ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಕೆಲವೆಡೆ 1200 ಅಡಿಗಳಷ್ಟು ಆಳಕ್ಕೆ ಕೊಳವೆಬಾವಿ ಕೊರೆದರೂ ನೀರು ಲಭಿಸುತ್ತಿಲ್ಲವೆಂಬುದು ಸಹಜವಾಗಿಯೇ ಎಲ್ಲರ ಆತಂಕವನ್ನು ಅಧಿಕಗೊಳಿಸುತ್ತಿದೆ.
ಅಂಕಿಅಂಶಗಳ ಪ್ರಕಾರ, 41 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯುಳ್ಳ ತುಮಕೂರು ತಾಲ್ಲೂಕಿನಲ್ಲಿ ಪ್ರಸ್ತುತ 450 ಕಿರುನೀರು ಸರಬರಾಜು ಯೋಜನೆಗಳಿವೆ. 225 ಓವರ್‍ಹೆಡ್ ಟ್ಯಾಂಕ್‍ಗಳ ಮೂಲಕ ನೀರು ಸರಬರಾಜಾಗುತ್ತಿದೆ. 11 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿವೆ. ಇಷ್ಟಾಗಿಯೂ ಈ ವರ್ಷದ ಮಳೆಯ ಅಭಾವದಿಂದ ಎಲ್ಲೆಲ್ಲೂ ನೀರಿನ ಸಮಸ್ಯೆ ಕಾಡತೊಡಗಿದೆ.
ಬಹುಗ್ರಾಮ ಕುಡಿವ ನೀರಿನ :ಯೋಜನೆಗೂ ಆತಂಕ
ತಾಲ್ಲೂಕಿನಲ್ಲಿ ಒಟ್ಟು 11 “ಬಹುಗ್ರಾಮ ಕುಡಿಯುವ ನೀರಿನ ಯೋಜನೆ”ಗಳು ಇವೆಯಾದರೂ, ಒಳಕಲ್ಲು, ಹೊನ್ನುಡಿಕೆ, ದೊಡ್ಡನಾರ ವಂಗಲ, ಬೆಳ್ಳಾವಿ, ಮೈದಾಳ – ಈ ಐದು ಗ್ರಾಮಗಳ ಯೋಜನೆಗಳು ಮಾತ್ರ ಈಗ ಚಾಲನೆಯಲ್ಲಿವೆ. ಇಲ್ಲೂ ಸಹ ದಿನೇ ದಿನೇ ನೀರು ಕಡಿಮೆಯಾಗುತ್ತಿದ್ದು ಇನ್ನೊಂದು ತಿಂಗಳು ಮಾತ್ರ ಇವುಗಳು ಚಾಲನೆಯಲ್ಲಿರುತ್ತವೆ. ಆ ಬಳಿಕ ಈ ಐದು ಯೋಜನೆಗಳೂ ಸ್ಥಗಿತವಾಗುತ್ತದೆಂಬ ಆತಂಕ ಎದುರಾಗಿದೆ.
ಗೂಳೂರು, ನಾಗವಲ್ಲಿ, ಹೆಬ್ಬೂರು, ಬಳ್ಳಗೆರೆ, ಊರ್ಡಿಗೆರೆ, ಕಣಕುಪ್ಪೆ – ಈ ಆರು ಸ್ಥಳಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ನೀರಿಲ್ಲದೆ ಈಗಾಗಲೇ ಸ್ಥಗಿತಗೊಂಡಿವೆ ಹಾಗೂ ಸ್ಥಗಿತಗೊಳ್ಳುವ ಸ್ಥಿತಿಯಲ್ಲಿವೆ ಎಂಬುದೂ ಆತಂಕವನ್ನು ಹೆಚ್ಚಿಸುತ್ತಿದೆ.
ದಿನೇ ದಿನೇ ಹೆಚ್ಚಿರುವ ಸಮಸ್ಯೆ
“ಪ್ರಜಾಪ್ರಗತಿ”ಯೊಡನೆ ಮಾತನಾಡುತ್ತ ತಾಲ್ಲೂಕಿನ ನೀರಿನ ಸಮಸ್ಯೆ ಬಗ್ಗೆ ವಿವರಿಸಿದ ತುಮಕೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ (ಸ್ವಾಂದೇನಹಳ್ಳಿ ಕ್ಷೇತ್ರ- ಬಿಜೆಪಿ) ಅವರು, “ನಮ್ಮ ತುಮಕೂರು ತಾಲ್ಲೂಕಿನಾದ್ಯಂತ ಈಗ ಕುಡಿಯುವ ನೀರಿನ ಪರಿಸ್ಥಿತಿ ಗಂಭೀರವಾಗಿದೆ” ಎಂದರು.
“ಮಳೆ ಇಲ್ಲದಿರುವುದೇ ಇಂದಿನ ಈ ಪರಿಸ್ಥಿತಿಗೆ ಮೂಲ ಕಾರಣ. ಎಲ್ಲೆಡೆ ದಿನೇ ದಿನೇ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ಚಾಲನೆಯಲ್ಲಿ ಇರುವ ಕೊಳವೆ ಬಾವಿಗಳು 24 ಗಂಟೆಗಳ ಕಾಲ ಬಳಕೆಯಲ್ಲಿದ್ದರೂ, ಅವುಗಳಿಂದ ನೀರು ಲಭಿಸುತ್ತಿರುವುದು ಕಡಿಮೆಯಾಗುತ್ತಿದೆ. ಅಂತರ್ಜಲದ ಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ದೊರಕುವುದೂ ಇಳಿಮುಖವಾಗುತ್ತಿದೆ” ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಬೆಳಗುಂಬ, ಸ್ವಾಂದೇನಹಳ್ಳಿ, ಬೀರನಕಲ್ಲು, ಊರ್ಡಿಗೆರೆ, ಯಲ್ಲಾಪುರಗಳನ್ನು ಉದಾಹರಿಸಿದ ಅವರು, “ಇಲ್ಲೆಲ್ಲ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ” ಎಂದರು.
ಬೆಳಗುಂಬದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ
“ಬೆಳಗುಂಬ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಗ್ರಾಮಸ್ಥರು ನೀರಿಗಾಗಿ ಪ್ರತಿಭಟಿಸುತ್ತಿದ್ದಾರೆ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಗ್ರಾಮಗಳಿಗೆ ಈಗ 5 ಟ್ಯಾಂಕರ್‍ಗಳ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಪ್ರತಿ ಟ್ಯಾಂಕರ್ ದಿನವೂ ಐದರಿಂದ ಏಳು ಟ್ರಿಪ್ ನೀರು ಪೂರೈಕೆ ಮಾಡುತ್ತಿವೆ. ಈ ಟ್ಯಾಂಕರ್‍ನವರು ಬೇರೆಡೆಯಿಂದ ನೀರನ್ನು ತುಂಬಿಕೊಂಡು ಬಂದು ಇಲ್ಲಿ ವಿತರಣೆ ಮಾಡುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿರುವಂತೆ ಈ ಟ್ಯಾಂಕರ್‍ಗಳಿಗೆ ಪ್ರತಿ ಟ್ರಿಪ್‍ಗೆ 500 ರೂ. ದರವನ್ನು ಪಾವತಿ ಮಾಡಲಾಗುತ್ತಿದೆ” ಎಂದು ಗಂಗಾಂಜನೇಯ ಅವರು ತಿಳಿಸಿದರು.
ಮತ್ತೆ ಪ್ರತಿಭಟನೆ
ಈ ಮಧ್ಯ ತುಮಕೂರು ತಾಲ್ಲೂಕು ಬೆಳಗುಂಬ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸ್ಥರು ಮತ್ತೆ ಬುಧವಾರ ಬೆಳಗ್ಗೆ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಕಳೆದ ವಾರ ಇಲ್ಲಿ ಗ್ರಾಮಸ್ಥರು ಆಕ್ರೋಶದಿಂದ ಗ್ರಾ.ಪಂ. ಕಚೇರಿಗೆ ಬೀಗ ಹಾಕಿ ಪ್ರತಿಭಟಿಸಿದ್ದುದನ್ನು ಇಲ್ಲಿ ಸ್ಮರಿಸಬಹುದು.