ಪಾಲಿಕೆಗೆ ಸುಪ್ರೀಂ ಆಯುಕ್ತಾರಾ, ನಾನಾ ?- ಮೇಯರ್

ತುಮಕೂರು

   ತುಮಕೂರು ಮಹಾನಗರಕ್ಕೆ ಸಂಬಂಧಿಸಿದಂತೆ ಆಡಳಿತ ನಡೆಸುವುದು ನಾನು. ಇಲ್ಲಿ ಸುಪ್ರೀಂ ನಾನಾ ಅಥವಾ ಆಯುಕ್ತರಾ ಎಂದು ಮಹಾನಗರ ಪಾಲಿಕೆ ಮಹಾಪೌರರಾದ ಲಲಿತಾ ರವೀಶ್ ಆಕ್ರೋಶ ವ್ಯಕ್ತ ಪಡಿಸಿದರು.

   ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ 35 ವಾರ್ಡ್‍ಗಳಿಗೆ ಸರಬರಾಜು ಆಗುವ ಬುಗುಡನಹಳ್ಳಿ ಕೆರೆಯ ನೀರು ಒಂಡಾಗಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಬುಗುಡನಹಳ್ಳಿ ಕೆರೆ ವೀಕ್ಷಣೆಗೆ ಭೇಟಿ ನೀಡಿದ್ದೆವು. ಆಗ ಅಲ್ಲಿ ನರಸಾಪುರದ ಕೃಷ್ಣಮೂರ್ತಿ ಎಂಬುವವರು ಯಾವುದೇ ದಾಖಲೆಗಳಿಲ್ಲದೆ, ಕೆರೆಯಲ್ಲಿ ಮೀನು ಹಿಡಿಯುತ್ತಿದ್ದರು.

     ಈ ಬಗ್ಗೆ ಕರೆ ಮಾಡಿದಾಗ ಲಭ್ಯವಾಗಿರಲಿಲ್ಲ. ಈ ಸಂಬಂಧ ಮಾತನಾಡಲು ಪಾಲಿಕೆ ಆಯುಕ್ತರನ್ನು ಮೇಯರ್ ಕೋಣೆಗೆ ಕರೆದರೆ ಬರುವುದೇ ಇಲ್ಲ. ನಮ್ಮ ಮಾತಿಗೆ ಬೆಲೆ ಇಲ್ಲ. ಅವರು ನನ್ನ ಪಿಎ ಇದ್ದಹಾಗೆ, ನಾನು ಯಾವಾಗ ಕರೆದರೆ ಆವಾಗ ಬರಬೇಕು ಎಂದು ಉದ್ರೇಕಗೊಂಡು ಮಾತಿನ ಭರದಲ್ಲಿ ನುಡಿದರು.

      ಪಾಲಿಕೆ ವ್ಯಾಪ್ತಿಯಡಿ ಬುಗುಡನಹಳ್ಳಿ ಕೆರೆಯಲ್ಲಿ ಮೀನು ಹಿಡಿಯಲು ಯಾವುದೇ ರೀತಿಯ ಅನುಮತಿ ನೀಡಿಲ್ಲ. ಆದರೂ ಅಲ್ಲಿ ಓರ್ವ ವ್ಯಕ್ತಿ ತನ್ನ ಆಳುಗಳಿಂದ ಮೀನು ಹಿಡಿಯುವ ಕೆಲಸ ಮಾಡಿಸುತ್ತಿದ್ದಾರೆ. ಇದರಲ್ಲಿ ಪಾಲಿಕೆಯ ಎಂಜಿನಿಯರ್ ಹಾಗೂ ಕೆರೆಯ ಉಸ್ತುವಾರಿ ವಸಂತ್ ಎಂಬುವವರಿಗೆ 1 ಲಕ್ಷ ಹಣ ನೀಡಲಾಗಿದೆ. ನಾವು ಕೆರೆಯ ವೀಕ್ಷಣೆಗೆ ಭೇಟಿ ನೀಡಲು ಹೊರಟಾಗ ಅವರೇ ಕೃಷ್ಣಮೂರ್ತಿಯವರಿಗೆ ಕರೆ ಮಾಡಿ ಮೇಯರ್ ಬರ್ತಾ ಇದ್ದಾರೆ. ಈಗ ಮೀನು ಹಿಡಿಯಬೇಡಿ. ನಾಳೆ ಹಿಡಿಯಿರಿ ಎಂಬುದಾಗಿ ಹೇಳಿದ್ದರಂತೆ ಎಂದು ಮೇಯರ್ ಲಲಿತಾರವೀಶ್ ಆರೋಪಿಸಿದರು.

     ಈ ಬಗ್ಗೆ ಸಭೆಯಲ್ಲಿದ್ದ ಇತರೆ ಪಾಲಿಕೆ ಸದಸ್ಯರ ತೀರ್ಮಾನದಂತೆ ಪಾಲಿಕೆ ಎಂಜಿನಿಯರ್ ವಸಂತ್ ಹಾಗೂ ಮೀನು ಹಿಡಿಯುತ್ತಿದ್ದ ಕೃಷ್ಣಮೂರ್ತಿ ಅವರ ಮೇಲೆ ತನಿಖೆ ಮಾಡಲು ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನಯಾಜ್ ಅಹಮ್ಮದ್ ಮಾತನಾಡಿ, ಬುಗುಡನಹಳ್ಳಿ ಕೆರೆಯಲ್ಲಿ ನೀರು ಸ್ವಚ್ಛವಾಗಿರಬೇಕು ಎಂಬ ಕಾರಣಕ್ಕೆ 2 ಲಕ್ಷ ಮೀನಿನ ಮರಿಗಳನ್ನು ಬಿಡಲಾಗಿತ್ತು.

       ಅಂದಿನಿಂದ ಕೆರೆಯಲ್ಲಿ ಬಟ್ಟೆ ತೊಳೆಯಲು ಸಹ ಅನುಮತಿ ನೀಡಿರಲಿಲ್ಲ. ಕೆರೆಗೆ ಯಾರು ಇಳಿಯದಂತೆ ಸೂಚನೆ ನೀಡಲಾಗಿದೆ. ಆದರೂ ನಾವು ಭೇಟಿ ನೀಡಿದ ಸಂದರ್ಭದಲ್ಲಿ ಮೀನು ಹಿಡಿಯುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪಾಲಿಕೆಯ ಯಾವೊಬ್ಬ ಸದಸ್ಯರಿಗೂ ಮಾಹಿತಿ ಇಲ್ಲ. ಈ ಬಗ್ಗೆ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

       ಮೇಯರ್ ಕೋಣೆಗೆ ಕರೆದರೂ ಆಗಮಿಸುವುದಿಲ್ಲ ಎಂಬ ಮೇಯರ್ ಆರೋಪಕ್ಕೆ ಸಂಬಂಧಿಸಿದಂತೆ ದೂರವಾಣಿ ಮೂಲಕ ಆಯುಕ್ತರನ್ನು ಮಾತನಾಡಿಸಿದಾಗ ಅದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತರು, ಕೋಣೆಯಲ್ಲಿ ಮೇಯರ್ ಒಬ್ಬರೇ ಇದ್ದಾಗ ಕರೆಯಲಿ ಹೋಗುತ್ತೇವೆ. ಅಥವಾ ಪಾಲಿಕೆ ಸದಸ್ಯರು ಇದ್ದಾಗ ಕರೆಯಲಿ ಹೋಗುತ್ತೇವೆ.

    ಆದರೆ ತಮ್ಮ ಪತಿ, ಅವರ ಸಂಬಂಧಿಕರು, ಇನ್ನಿತರ ಸದಸ್ಯರ ಬಂಧು ಬಳಗದವರು ಇದ್ದಾಗ ಕರೆದು ಅವಮಾನ ಆಗುವಂತೆ ಮಾತನಾಡುತ್ತಾರೆ. ಹಾಗಾಗಿ ನಾನು ಮೇಯರ್ ಕೋಣೆಗೆ ಬರುವುದಿಲ್ಲ ಎಂದು ಹೇಳಿದ್ದೇನೆ ಸ್ಪಷ್ಟೀಕರಣ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಉಪಮಹಾಪೌರರು ರೂಪಶ್ರೀ ಶೆಟ್ಟಾಳಯ್ಯ, ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗಿರಿಜಾಧನಿಯಾಕುಮಾರ್, ವಿರೋಧ ಪಕ್ಷದ ನಾಯಕ ರಮೇಶ್ ಸೇರಿದಂತೆ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link
Powered by Social Snap