ತುಮಕೂರು

ತುಮಕೂರು ನಗರದ ನಾಗರಿಕರ ಮೇಲೆ ಇನ್ನುಮುಂದೆ ಇನ್ನೊಂದು ಹೊಸ ತೆರಿಗೆಯ ಹೊರೆ ಬೀಳಲಿದೆ. ಅದು ಈ ಬಾರಿ ಮಹಾನಗರ ಪಾಲಿಕೆಯಿಂದ ಆಗಲಿದೆ. ನಾಗರಿಕರ ಮೇಲೆ ವಾಹನ ತೆರಿಗೆಯ ಹೊಸ ಧರ ಬೀಳಲಿದೆ.
ಪಾಲಿಕೆಗೂ ವಾಹನ ತೆರಿಗೆಗೂ ಏನು ಸಂಬಂಧ ಎನ್ನದಿರಿ.. ಅಂತಹುದೊಂದು ಕರ ವಸೂಲಿಯ ಹೊಣೆಯನ್ನು ಸರ್ಕಾರವು ಮಹಾನಗರ ಪಾಲಿಕೆಗಳಿಗೆ ನೀಡಿದೆ. ಆ ಸೂಚನೆಯಂತೆ ಇದೀಗ ತುಮಕೂರು ಮಹಾನಗರ ಪಾಲಿಕೆಯು ಸಹ ಶೇ.1 ರಷ್ಟು ಮೋಟಾರ್ ವಾಹನಗಳ ಸೆಸ್ (ಉಪ ಕರ) ಸಂಗ್ರಹಿಸಲು ಮುಂದಾಗಿದೆ.
ಮಹಾನಗರ ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನರಸಿಂಹರಾಜು (3 ನೇ ವಾರ್ಡ್) ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸ್ಥಾಯಿ ಸಮಿತಿ ಸಭೆ ನಡೆದಿದ್ದು, ಆ ಸಭೆಯಲ್ಲಿ ಈ ವಿಷಯವೂ (ಸಂಖ್ಯೆ: 7) ಮಂಡನೆಗೊಂಡಿದೆ. ಅಂತಿಮವಾಗಿ ಇದಕ್ಕೆ ಅನುಮೋದನೆ ನೀಡಲಾಗಿದೆ. ಸಭೆಯಲ್ಲಿ ಈ ಸ್ಥಾಯಿ ಸಮಿತಿಯ ಸದಸ್ಯರುಗಳಾದ ವಿಷ್ಣುವರ್ಧನ್(30 ನೇ ವಾರ್ಡ್), ಶಿವರಾಮ್ (24 ನೇ ವಾರ್ಡ್), ಧರಣೇಂದ್ರ ಕುಮಾರ್ (28 ನೇ ವಾರ್ಡ್), ಶಕೀಲ್ ಅಹಮದ್ ಷರೀï (12 ನೇ ವಾರ್ಡ್), ಎ.ಶ್ರೀನಿವಾಸ್ (20 ನೇ ವಾರ್ಡ್) ಮತ್ತು ಬಿ.ಎಸ್.ಮಂಜುನಾಥ್(17 ನೇ ವಾರ್ಡ್) ಪಾಲ್ಗೊಂಡಿದ್ದರು.
ವಿವರಣೆಯೇ ಇಲ್ಲ!
ತೆರಿಗೆ ವಿಧಿಸುವ ಇಂತಹುದೊಂದು ಪ್ರಮುಖ ವಿಷಯವು ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚೆಗೆ ಬಂದಿದ್ದರೂ, ಸಭೆಗೆ ಮಂಡಿಸಿದ ಟಿಪ್ಪಣಿಯಲ್ಲಾಗಲೀ, ಅಂತಿಮವಾಗಿ ಕೈಗೊಂಡ ತೀರ್ಮಾನದಲ್ಲಾಗಲೀ ಈ ಬಗ್ಗೆ ಯಾವುದೇ ವಿವರಣೆ, ಸ್ಪಷ್ಟನೆ ಏನೊಂದೂ ಇಲ್ಲದಿರುವುದು ಗೊಂದಲವನ್ನು ಉಂಟು ಮಾಡಿದೆ.
“ಮೋಟಾರ್ ವಾಹನಗಳ ಮೇಲೆ ಮೂಲ ಸೌಕರ್ಯ ಉಪಕರ ಸಂಗ್ರಹಿಸುವ ಬಗ್ಗೆ” ಎಂದಷ್ಟೇ ವಿಷಯವನ್ನು ಸಭೆಗೆ ಮಂಡಿಸಲಾಗಿದೆ. “ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಓಡಾಡುವ ಮೋಟಾರ್ ವಾಹನಗಳ ಮೇಲೆ ಮೂಲಸೌಕರ್ಯ ಉಪಕರ ಸಂಗ್ರಹಿಸುವ ಕುರಿತು ಸಭೆಯ ಮುಂದೆ ಟಿಪ್ಪಣಿಯನ್ನು ಮಂಡಿಸಿದೆ” ಎಂಬ ಟಿಪ್ಪಣಿ ಇದೆ. ಬಳಿಕ “ಈ ಕುರಿತು ಚರ್ಚಿಸಲಾಗಿ ಶೇ. 1 ಸೆಸ್ ವಸೂಲಿ ಮಾಡಲು ಅನುಮೋದಿಸಲಾಯಿತು” ಎಂಬ ತೀರ್ಮಾನ ಇದೆ. ಮಿಕ್ಕಾವುದೇ ವಿವರಣೆ ಇದರಲ್ಲಿಲ್ಲ.
ನಿರ್ದೇಶನಾಲಯ ಪತ್ರ
ಪಾಲಿಕೆಗೆ ಕಳೆದ ಮಾರ್ಚಿ ತಿಂಗಳಿನಲ್ಲೇ ಪೌರಾಡಳಿತ ನಿರ್ದೇಶನಾಲಯದಿಂದ ಒಂದು ಪತ್ರ ಬಂದಿದೆ. “ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಮೋಟಾರು ವಾಹನಗಳ ಮೇಲೆ ಮೂಲ ಸೌಕರ್ಯ ಉಪಕರವನ್ನು ವಿಧಿಸಿರುವ ಬಗ್ಗೆ” ಮಾಹಿತಿ ಸಲ್ಲಿಸುವಂತೆ ಆ ಪತ್ರದಲ್ಲಿ ಸೂಚಿಸಲಾಗಿತ್ತು.
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ನೋಂದಣಿಯಾಗಿರುವ ವಾಹನಗಳಿಗೆ ಕಳೆದ ಮೂರು ವರ್ಷಗಳಿಂದ ವಸೂಲಿಯಾಗಿರುವ ಉಪಕರ ಎಷ್ಟು? ನೂತನವಾಗಿ ನೋಂದಣಿಯಾಗುವ ವಾಹನಗಳಿಗೆ ಸಂಬಂಧಿಸಿದಂತೆ ವಸೂಲಾತಿ ಮಾಡುತ್ತಿರುವ ಉಪಕರದ ವಿವರಗಳೇನು? ಸದರಿ ಉಪಕರವನ್ನು ವಸೂಲಾತಿ ಮಾಡಲು ಅನುಸರಿಸುತ್ತಿರುವ ಕ್ರಮಗಳೇನು? ಎಂಬಂತಹ ವಿವರಣೆಯನ್ನು ಒದಗಿಸುವಂತೆ ನಿರ್ದೇಶನಾಲಯ ಕೋರಿತ್ತು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ತರಾತುರಿಯಲ್ಲಿ ಸ್ಥಾಯಿ ಸಮಿತಿಗೆ ವಿಷಯ ಮಂಡಿಸಿದ್ದಾರೆ. ಅಲ್ಲಿ ಅದಕ್ಕೆ ಅನುಮೋದನೆ ದೊರೆತಿದೆ.
ಲಭ್ಯ ಮಾಹಿತಿಗಳ ಪ್ರಕಾರ, ಪ್ರಸ್ತುತ ನಗರದಲ್ಲಿ ಆಸ್ತಿದಾರರಿಂದ ಆಸ್ತಿ ತೆರಿಗೆಯನ್ನು ಪಾಲಿಕೆಯು ಪ್ರತಿ ವರ್ಷ ಸಂಗ್ರಹಿಸುತ್ತಿದೆ. ಸುಮಾರು 20 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಸಂಗ್ರಹವಾಗುತ್ತದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಶೇ. 1 ರಷ್ಟು ಮೋಟಾರು ವಾಹನ ಸೆಸ್ ವಿಧಿಸಿದರೆ, ಆಗ 20 ಲಕ್ಷ ರೂ. ಸೆಸ್ ಸಂಗ್ರಹವಾಗುತ್ತದೆ ಎಂದು ಲೆಕ್ಕಾಚಾರ ಮಾಡಲಾಗುತ್ತಿದೆ. ಈ ಮೊತ್ತವನ್ನು ಪಾಲಿಕೆಯು ಸಂಬಂಧಿಸಿದ ಇಲಾಖೆಗೆ ವರ್ಗಾಯಿಸಬೇಕಾಗುತ್ತದೆ ಎಂದೂ ಹೇಳಲಾಗುತ್ತಿದೆ.
ಪಾಲಿಕೆಯು ಹಾಲಿ ಇರುವ ಆಸ್ತಿ ತೆರಿಗೆಗೆ ಶೇ. 1 ರಷ್ಟು ಈ ಮೋಟಾರ್ ವಾಹನ ಸೆಸ್ ಅನ್ನು ಸೇರ್ಪಡೆಗೊಳಿಸಲು ಉದ್ದೇಶಿಸಿದೆ. ಬಹುತೇಕ ಎಲ್ಲರ ಮನೆಯಲ್ಲೂ ವಾಹನ ಇರುತ್ತದೆಂಬ ಅಂದಾಜಿನಲ್ಲಿ ಈ ನಿಲುವಿಗೆ ಬಂದಿದೆ. ಬಾಡಿಗೆ ಮನೆ ಇದ್ದರೆ, ಸದರಿ ಬಾಡಿಗೆ ಮನೆಯ ಆಸ್ತಿ ತೆರಿಗೆಯಲ್ಲಿ ಶೇ. 1 ರಷ್ಟು ಹೆಚ್ಚಳವಾಗಲಿದೆ. ಆ ಮೂಲಕ ಖಾತೆ ಇರುವ ನಗರದ ಎಲ್ಲ ನಿವಾಸಿಗಳಿಂದ ಈ ಸೆಸ್ ಸಂಗ್ರಹಿಸುವ ಆಲೋಚನೆಯಲ್ಲಿದೆ.
ಒಂದಾನೊಂದು ಕಾಲದಲ್ಲಿ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳು ಆಕ್ಟ್ರಾಯಿ ಸುಂಕ ವಸೂಲು ಮಾಡುತ್ತಿದ್ದವು. ಅದಕ್ಕಾಗಿ ತುಮಕೂರು ನಗರದ ಕೋತಿತೋಪು, ಬೆಂಗಳೂರು ಗೇಟ್, ಕುಣಿಗಲ್ ಗೇಟ್, ಶಿರಾಗೇಟ್,ಗುಬ್ಬಿ ಗೇಟ್‍ಗಳಲ್ಲಿ ಸುಂಕ ವಸೂಲಿ ಮಾಡಲಾಗುತ್ತಿತ್ತು. ಆದರೆ 1977 ರಲ್ಲಿ ಆಕ್ಟ್ರಾಯಿ ಪದ್ಧತಿ ರದ್ದಾಗಿದ್ದು, ಅಂದಿನಿಂದ ಇವೆಲ್ಲವೂ ಸ್ಥಗಿತವಾದವು. ಆದರೆ ಇದೀಗ ಹಳೆಯ ಆ ಪದ್ಧತಿಯೇ ಹೊಸ ರೂಪದಲ್ಲಿ ಬರುತ್ತಿದೆಯೆಂದು ಹೇಳಲಾಗುತ್ತಿದೆ. ಯಾವ ರೀತಿ ಸೆಸ್ ಸಂಗ್ರಹಿಸಬೇಕು? ಯಾವ ವಾಹನಕ್ಕೆ ಎಷ್ಟು ಮೊತ್ತ? ಎಂಬಿತ್ಯಾದಿ ವಿವರಗಳು ಇನ್ನೂ ಅಸ್ಪಷ್ಟವಾಗಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
