ತುಮಕೂರು ಕ್ಷೇತ್ರ : ವಿಜಯದ ಮಾಲೆ ಗೌಡರಿಗೋ… ಜಿಎಸ್‍ಬಿಗೋ..

ತುಮಕೂರು:

     ಈ ಬಾರಿ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರ ಯಾರಿಗೆ ಒಲಿದಿದೆ ಎಂಬುದು ಇಂದು ಬಹಿರಂಗವಾಗಲಿದೆ.

      ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರು ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕಾರಣದ ಗಮನ ಇತ್ತ ಹರಿದಿದ್ದರೆ, ಈ ಬಾರಿಯೂ ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರವೇ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲಿದೆ. ಈ ಹಿನ್ನೆಲೆಯಲ್ಲಿ ಮೋದಿ ಅಲೆ ಜಿ.ಎಸ್.ಬಸವರಾಜು ಅವರನ್ನು ಲೋಕಸಭೆಗೆ ಪ್ರವೇಶಿಸುವಂತೆ ಮಾಡಲಿದೆ ಎಂಬ ವ್ಯಾಖ್ಯಾನಗಳಿಗೆ ಇಂದು ತೆರೆ ಬೀಳಲಿದೆ.

      ದೇವೇಗೌಡರ ಸ್ಪರ್ಧೆಯಿಂದಾಗಿಯೇ ತುಮಕೂರು ಕ್ಷೇತ್ರ ಹೈ ಓಲ್ಟೇಜ್ ಕ್ಷೇತ್ರವಾಗಿ ಪರಿಗಣಿತವಾಗಿದೆ. ಇಲ್ಲಿ ದೇವೇಗೌಡರು ಗೆದ್ದರೆ ಏನಾಗಬಹುದು? ಜಿ.ಎಸ್. ಬಸವರಾಜು ಗೆದ್ದರೆ ಏನಾಗಬಹುದು? ತುಮಕೂರಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಲೀಡ್ ಪಡೆಯುವವರು ಯಾರು? ಎಂಬೆಲ್ಲಾ ವಾದ-ವಿವಾದಗಳಿಗೆ ಇಂದು ಉತ್ತರ ಸಿಗಲಿದೆ. ತುಮಕೂರು ಕ್ಷೇತ್ರದಲ್ಲಿ ನಮ್ಮದೇ ಗೆಲುವು ಎಂದು ಮತದಾನದ ದಿನವೇ ಸ್ವತಃ ಅಭ್ಯರ್ಥಿ ದೇವೇಗೌಡರು ಹಾಗೂ ಡಾ.ಜಿ.ಪರಮೇಶ್ವರ್ ಘೋಷಿಸಿದ್ದರು. ಇದಾದ ನಂತರ ಜಿ.ಎಸ್.ಬಸವರಾಜು ಹಾಗೂ ಪಕ್ಷದ ವಿವಿಧ ಮುಖಂಡರುಗಳು ಅವರದ್ದೇ ಆದ ಲೆಕ್ಕಾಚಾರಗಳಲ್ಲಿ ತುಮಕೂರು ಕ್ಷೇತ್ರ ಈ ಬಾರಿ ಬಿಜೆಪಿಗೆ ಒಲಿಯಲಿದೆ ಎಂಬ ವಾದವನ್ನು ಮುಂದಿಟ್ಟಿದ್ದರು.

      ಹಾಸನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟ ನಂತರ ದೇವೇಗೌಡರಿಗೆ ಕ್ಷೇತ್ರ ಇಲ್ಲವಾಯಿತು. ಮೈತ್ರಿ ಧರ್ಮ ಪಾಲನೆಯಲ್ಲಿ ತುಮಕೂರು ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡಲಾಯಿತು. ಬಹಳಷ್ಟು ದಿನ ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳನ್ನು ಅಳೆದು ತೂಗಿ ನೋಡಿದ ನಂತರವೇ ದೇವೇಗೌಡರು ಕೊನೆಯ ದಿನದಂದು ಆಗಮಿಸಿ ನಾಮಪತ್ರ ಸಲ್ಲಿಸಿದರು. ಕಳೆದ ಬಾರಿಯ ಲೋಕಸಭಾ ಚುನಾವಣಾ ಸಂದರ್ಭದಲ್ಲಿಯೇ ದೇವೇಗೌಡರು ಇದು ನನ್ನ ಕೊನೆಯ ಚುನಾವಣೆ ಎಂದಿದ್ದರು. ಆದರೆ ಪಕ್ಷದ ಇತರೆ ಮುಖಂಡರು ಮತ್ತು ಕಾರ್ಯಕರ್ತರ ಸಲಹೆಯ ಮೇರೆಗೆ ಮತ್ತೆ ಸ್ಪರ್ಧಿಸಬೇಕಾಗಿ ಬಂದ ಅಗತ್ಯತೆಯನ್ನು ದೇವೇಗೌಡರೇ ಹೇಳಿಕೊಂಡಿದ್ದರು.

      ಮತ್ತೊಂದು ಮುಖ್ಯ ಸಂಗತಿ ಎಂದರೆ, ತುಮಕೂರಿನಲ್ಲಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ದೆಹಲಿಯಲ್ಲಿ ನನ್ನ ಅಗತ್ಯ ಎಷ್ಟಿದೆ ಎಂಬುದನ್ನು ನೋಡಿಕೊಂಡು ಸ್ಪರ್ಧೆಗೆ ಇಳಿಯುವುದಾಗಿಯೂ ಘೋಷಿಸಿದ್ದರು. ದೇವೇಗೌಡರ ಈ ಹೇಳಿಕೆಯ ಹಿನ್ನೆಲೆ ಅತ್ಯಂತ ಸೂಕ್ಷ್ಮ ಎನ್ನಬಹುದು. ಇದಾದ ನಂತರದ ದಿನಗಳಲ್ಲಿ ಹಾಗೂ ಇತ್ತೀಚೆಗೆ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿದರೆ ಒಂದು ವೇಳೆ ಎನ್.ಡಿ.ಎ. ಅಧಿಕಾರಕ್ಕೆ ಬಾರದೆ ಹೋದರೆ ಆಗ ಯುಪಿಎ ಅಥವಾ ಇತರೆ ಪಕ್ಷಗಳ ಮೈತ್ರಿಕೂಟ ಅಧಿಕಾರ ಹಿಡಿಯುವ ಬಗ್ಗೆಯೂ ಆಲೋಚನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ದೇವೇಗೌಡರ ಪಾತ್ರವೂ ಮುಖ್ಯವಾಗಲಿದೆ ಎಂಬ ಒಳ ಸುಳಿವುಗಳು ಆ ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ.

     ಇನ್ನು ಕೇಂದ್ರದಲ್ಲಿ ಈ ಬಾರಿಯೂ ನರೇಂದ್ರ ಮೋದಿ ನೇತೃತ್ವವ ಎನ್.ಡಿ.ಎ. ಅಧಿಕಾರಕ್ಕೆ ಬರಲಿದೆ ಎಂಬ ಸಮೀಕ್ಷೆಗಳ ವರದಿಯಿಂದಾಗಿ ಆ ಪಕ್ಷದ ಮುಖಂಡರು ಅತ್ಯಂತ ಸಂಭ್ರಮದಲ್ಲಿದ್ದಾರೆ. ಜಿ.ಎಸ್.ಬಸವರಾಜು ತುಮಕೂರು ಜಿಲ್ಲೆಯಲ್ಲಿ ಹಳೆಯ ಹುಲಿ. ಈಗಾಗಲೇ ನಾಲ್ಕು ಬಾರಿ ಸಂಸದ್ ಪ್ರವೇಶಿಸಿದ್ದಾರೆ. ಮೂರು ಬಾರಿ ಕಾಂಗ್ರೆಸ್‍ನಿಂದ, ಒಂದು ಬಾರಿ ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿ ಸಾಕಷ್ಟು ಅನುಭವ ಹೊಂದಿದ್ದಾರೆ. ಕೇಂದ್ರದಲ್ಲಿ ಎನ್.ಡಿ.ಎ. ಅಧಿಕಾರಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿಯೂ ಈ ಬಾರಿ ಬಿಜೆಪಿಯೇ ಜಯ ಗಳಿಸಲಿದೆ ಎಂಬ ಆತ್ಮವಿಶ್ವಾಸ ಆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಮೂಡಿದೆ.

      ತುಮಕೂರು ಕ್ಷೇತ್ರದ ಸಮೀಕ್ಷೆಗಳನ್ನು ಗಮನಿಸಿದರೆ ಇವರೇ ಗೆಲ್ಲುತ್ತಾರೆಂದು ಸ್ಪಷ್ಟವಾಗಿ ಹೇಳಿರುವ ವರದಿಗಳು ಕಡಿಮೆಯೇ. ಒಂದೊಂದು ಸಮೀಕ್ಷೆಯೂ ಒಂದೊಂದು ವರದಿಯನ್ನು ನೀಡಿದೆ. ಆದರೆ ವಿವಿಧ ಸಮೀಕ್ಷೆಗಳ ಸಾರಾಂಶ ಗಮನಿಸಿದರೆ ಇಲ್ಲಿ 50-50 ಕಂಡುಬರುತ್ತಿದೆ. ಕೆಲವೇ ಸಾವಿರ ಮತಗಳ ಅಂತರದಲ್ಲಿ ಯಾರಾದರೊಬ್ಬರು ಗೆಲುವು ಸಾಧಿಸಬಹುದು ಎಂಬ ವರದಿಗಳೂ ಇವೆ. ಬಿಜೆಪಿ ವಲಯದಲ್ಲಿ ಜಿ.ಎಸ್.ಬಸವರಾಜು ಪರ, ಜೆಡಿಎಸ್ ವಲಯದಲ್ಲಿ ದೇವೇಗೌಡರ ಪರ ಬ್ಯಾಟಿಂಗ್ ನಡೆಯುತ್ತಲೇ ಬಂದಿದೆ. ಬೆಟ್ಟಿಂಗ್ ಭರಾಟೆಗಳು ಸಹ ಅಲ್ಲಲ್ಲಿ ಕಾಣಿಸಿಕೊಂಡಿವೆ.

        2014 ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಜಿ.ಎಸ್.ಬಸವರಾಜು ಬಿಜೆಪಿಯಿಂದಲೇ ಸ್ಪರ್ಧಿಸಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಸ್.ಪಿ.ಮುದ್ದಹನುಮೇಗೌಡ ಸ್ಪರ್ಧಿಸಿದ್ದರು. ಆಗ ರಾಷ್ಟ್ರಾದ್ಯಂತ ಮೋದಿ ಅಲೆ ಇತ್ತು. ಆದರೂ ತುಮಕೂರು ಕ್ಷೇತ್ರದ ರಾಜಕಾರಣ ವಿಭಿನ್ನ ತೀರ್ಪಿಗೆ ತಲೆಬಾಗಿತು. 74041 ಮತಗಳ ಅಂತರದಿಂದ ಎಸ್.ಪಿ.ಮುದ್ದಹನುಮೇಗೌಡ ಜಯ ಗಳಿಸಿದ್ದರು. ಈ ಬಾರಿ ಮುದ್ದಹನುಮೇಗೌಡರಿಗೆ ಟಿಕೆಟ್ ಲಭಿಸಲಿಲ್ಲ. ಮೈತ್ರಿ ಧರ್ಮ ಪಾಲನೆಯಲ್ಲಿ ಅವರು ಕಣದಿಂದ ದೂರವೇ ಉಳಿಯುವಂತಾಯಿತು. ಮುದ್ದಹನುಮೇಗೌಡರು ವಿದಾಯ ಹೇಳುತ್ತಿರುವ ಈ ಕುರ್ಚಿಗೆ ಬರುವವರು ಯಾರು? ಯಾರನ್ನು ಈ ಕ್ಷೇತ್ರದ ಮತದಾರ ಹಾರೈಸಲಿದ್ದಾನೆ?, 17ನೇ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ದೆಹಲಿಯ ಲೋಕಸಭೆಯನ್ನು ಪ್ರವೇಶಿಸುವವರು ಯಾರು ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

          2014ರ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಎಸ್.ಪಿ.ಮುದ್ದಹನುಮೇಗೌಡ, ಬಿಜೆಪಿಯಿಂದ ಜಿ.ಎಸ್. ಬಸವರಾಜು, ಜೆಡಿಎಸ್‍ನಿಂದ ಎ.ಕೃಷ್ಣಪ್ಪ ಸ್ಪರ್ಧಿಸಿದ್ದರು. ಆಗ ತುಮಕೂರು ಕ್ಷೇತ್ರದಲ್ಲಿ ಒಟ್ಟು 1518144 ಒಟ್ಟು ಮತದಾರರಿದ್ದು, 1100617 ಮತಗಳು ಚಲಾವಣೆಯಾಗಿದ್ದವು. ಜಿ.ಎಸ್.ಬಿ.ಗೆ 355827 ಮತಗಳು, ಎಸ್.ಪಿ.ಎಂ.ಗೆ 429868 ಮತಗಳು, ಎ.ಕೃಷ್ಣಪ್ಪ ಅವರಿಗೆ 258683 ಮತಗಳು ಲಭಿಸಿದ್ದವು. ಫಲಿತಾಂಶಕ್ಕೂ ಮುನ್ನವೇ ಜೆಡಿಎಸ್‍ನ ಅಭ್ಯರ್ಥಿ ಎ.ಕೃಷ್ಣಪ್ಪ ಹೃದಯಾಘಾತದಿಂದ ನಿಧನರಾಗಿದ್ದರು. ಈ ಬಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಾಗಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿ ಕಣದಲ್ಲಿಲ್ಲ. ಎರಡೂ ಪಕ್ಷಗಳ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ, ಮಾಜಿ ಪ್ರಧಾನಿಯೂ ಆಗಿರುವ ಹೆಚ್.ಡಿ.ದೇವೇಗೌಡರ ಸ್ಪರ್ಧೆ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap