ತುಮಕೂರು : ಚುರುಕು ಪಡೆದ ರಾಜಕೀಯ..!!

ತುಮಕೂರು:

          ತುಮಕೂರು ಕ್ಷೇತ್ರವೀಗ ಭರ್ಜರಿ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಶನಿವಾರದಂದು ತುಮಕೂರಿನಲ್ಲಿ ಬಗೆಬಗೆಯ ರಾಜಕೀಯ ಚಟುವಟಿಕೆಗಳು ನಡೆದವು. ಅಲ್ಲದೆ ಇಲ್ಲಿನ ರಾಜಕೀಯ ಚಟುವಟಿಕೆಗಳು ತೀವ್ರ ಚರ್ಚೆಗೂ ಗ್ರಾಸವಾದವು. ಇದುವರೆಗೆ ಸೈಲೆಂಟ್ ಆಗಿಯೇ ಇದ್ದ ರಾಜಕೀಯ ಚಟುವಟಿಕೆ ಇನ್ನು ಮುಂದೆ ಗಂಭೀರ ಸ್ವರೂಪ ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳೂ ಕಂಡುಬರುತ್ತಿವೆ.

       ದೇವೇಗೌಡರ ಸ್ಪರ್ಧೆ ಖಚಿತ ಎಂಬುದು ತಿಳಿಯುತ್ತಿದ್ದಂತೆಯೇ ತೀವ್ರ ಅಸಮಾಧಾನಕ್ಕೊಳಗಾಗಿರುವ ಎಸ್.ಪಿ.ಮುದ್ದಹನುಮೇಗೌಡ ಅವರು ತಮ್ಮ ಹಿತೈಷಿಗಳ ಸಭೆ ಕರೆದು ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದಾರೆ. ಸೋಮವಾರದಂದು ಕಾಂಗ್ರೆಸ್ ಪಕ್ಷದಿಂದಲೇ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ಹಿತೈಷಿಗಳ ಸಭೆಯಲ್ಲಿ, ಮಾಧ್ಯಮದವರ ಎದುರು ಮಾತನಾಡುವಾಗ ಭಾವೋದ್ವೇಗ ಕಂಡು ಬಂದಿತು. ಅವರಲ್ಲಿ ಒಂದು ರೀತಿಯ ಹತಾಶೆಯ ಭಾವನೆ ವ್ಯಕ್ತವಾಗಿದೆ. ಸಿಟ್ಟು, ಅಸಹನೆ, ಅಸಮಾಧಾನ ಎಲ್ಲವೂ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತಿತ್ತು.

      ಮುದ್ದಹನುಮೇಗೌಡರ ನಡೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರು ರಾಜ್ಯ ಹಾಗೂ ರಾಷ್ಟ್ರದ ಹಿತದೃಷ್ಟಿಯಿಂದ ಮೈತ್ರಿ ಮಾಡಿಕೊಳ್ಳಲಾಗಿದೆ. ಮೈತ್ರಿ ಧರ್ಮ ಪಾಲಿಸಬೇಕಾದುದು ಎಲ್ಲರ ಕರ್ತವ್ಯ. ಮುದ್ದಹನುಮೇಗೌಡ ಅವರೊಂದಿಗೆ ಮಾತನಾಡಲಾಗುವುದು ಎಂಬ ಸೂಕ್ಷ್ಮ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.

      ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ ಹತ್ತಿರ ಬರುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಳ್ಳುತ್ತಿವೆ. ಒಂದು ಕಡೆ ಜೆಡಿಎಸ್ ಮುಖಂಡರು ಕಾಂಗ್ರೆಸ್ ಮುಖಂಡರ ಮನೆಗೆ ತೆರಳಿ ಸಮಾಲೋಚನೆಯ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದ್ದರೆ, ಜೆಡಿಎಸ್ ವರಿಷ್ಠರು ದಾರಿ ಸುಗಮ ಮಾಡಿಕೊಳ್ಳುವ ಬಗ್ಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸೋಮವಾರ ದೇವೇಗೌಡರು ತುಮಕೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಆ ಪಕ್ಷದಲ್ಲಿ ಸಿದ್ಧತೆಗಳು ನಡೆದಿವೆ.

      ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾದ ಕ್ಷಣದಿಂದಲೂ ಆ ಪಕ್ಷದ ಯಾವ ಮುಖಂಡರೂ ತನಗೆ ಟಿಕೆಟ್ ಬೇಕೆಂದು ಒತ್ತಾಯ ಮಾಡಿಲ್ಲ. ಒಂದೆರಡು ಹೆಸರುಗಳು ಹರಿದಾಡಿದವವಾದರೂ ಅಧಿಕೃತವಾಗಿ ಯಾರೂ ಪ್ರಸ್ತಾಪ ಮಾಡಲಿಲ್ಲ. ಬದಲಿಗೆ ಇಲ್ಲಿಂದ ಸ್ಪರ್ಧಿಸುವ ಆಸಕ್ತಿಯೂ ಆ ಪಕ್ಷದ ಇತರೆ ಮುಖಂಡರಲ್ಲಿ ಕಂಡುಬರಲಿಲ್ಲ. ಇದನ್ನೆಲ್ಲ ಗಮನಿಸಿದರೆ ದೇವೇಗೌಡರು ತುಮಕೂರನ್ನೇ ಆಯ್ಕೆ ಮಾಡಿಕೊಳ್ಳಲಿದ್ದಾರೆನ್ನುವ ಸುಳಿವು ಹಲವರಲ್ಲಿತ್ತು. ಬೆಂಗಳೂರು ಉತ್ತರ ಮತ್ತು ತುಮಕೂರು ಈ ಎರಡು ಕ್ಷೇತ್ರಗಳ ತುಲನೆಯಲ್ಲಿ ತೊಡಗಿದ್ದ ದೇವೇಗೌಡರಿಗೆ ಎರಡರಲ್ಲಿ ಯಾವುದು ಸುರಕ್ಷಿತ ಎಂಬುದನ್ನು ಈಗಾಗಲೇ ಅಳೆದು ತೂಗಿದ್ದಾರೆ.

        ಈ ನಡುವೆ ಮುದ್ದಹನುಮೇಗೌಡರ ನಡೆ ಒಂದು ರೀತಿಯ ಅಚ್ಚರಿ ಮೂಡಿಸಿದೆ. ಟಿಕೆಟ್ ಬೇಕೆಂದು ಗೌಡರು ಹೈಕಮಾಂಡ್‍ವರೆಗೂ ಹೋಗಿದ್ದುಂಟು. ಟಿಕೆಟ್ ಘೋಷಣೆಯಾಗುವ ಸಂದರ್ಭದಲ್ಲಿಯೇ ಅವರು ಹೇಳಿದ್ದಂತೆ ನಾನು ಮಾಡಿರುವ ಕೆಲಸ ಕಾರ್ಯಗಳನ್ನು ನೋಡಿ ನನಗೆ ಪಕ್ಷ ಟಿಕೆಟ್ ನೀಡಲಿದೆ. ಒಂದು ವೇಳೆ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಾನು ಬದ್ಧ ಎಂದಿದ್ದರು.

      ಆದರೆ ಮುದ್ದಹನುಮೇಗೌಡರು ಅಂದುಕೊಂಡದ್ದೇ ಒಂದು ಆದದ್ದು ಮತ್ತೊಂದು. ಹೀಗಾಗಿ ಶತಾಯಗತಾಯ ಟಿಕೆಟ್ ಪಡೆಯಲೇಬೇಕೆಂದು ವಿವಿಧ ಮುಖಂಡರುಗಳನ್ನು ಭೇಟಿ ಮಾಡಿ ಬಂದ ಅವರಿಗೆ ಈಗ ಉಳಿದದ್ದು ನಾಮಪತ್ರ ಸಲ್ಲಿಸಿಯೇ ತೀರುತ್ತೇನೆ ಎಂಬ ಹಠ. ದಿಢೀರ್ ಸಭೆ ಕರೆದು ಮುದ್ದಹನುಮೇಗೌಡರು ಈ ನಿರ್ಧಾರಕ್ಕೆ ಬರಲು ಕಾರಣಗಳು ಏನೇ ಇರಬಹುದು. ಆದರೆ ತನ್ನೊಳಗಿನ ಆಕ್ರೋಶವನ್ನು ಹೊರ ಹಾಕಿದ್ದಂತೂ ಸತ್ಯ.

        ಮೈತ್ರಿ ಪಕ್ಷದಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿರುವ ಬಿಜೆಪಿ ತನ್ನ ಪಾಡಿಗೆ ತಾನು ಮುಂದಿನ ಕಾರ್ಯತಂತ್ರಗಳಲ್ಲಿ ಮಗ್ನವಾಗಿದೆ. ಈ ಪಕ್ಷದಿಂದ ಎರಡು ಮೂರು ಹೆಸರುಗಳು ಕೇಳಿಬಂದವಾದರೂ ಅಂತಿಮವಾಗಿ ಜಿ.ಎಸ್.ಬಸವರಾಜು ಅವರ ಆಯ್ಕೆ ಖಚಿತವಾಯಿತು. ಇದು ಹಿಂದೆಯೇ ತೀರ್ಮಾನವಾಗಿತ್ತು. ಆದರೂ ಬಿಜೆಪಿ ವರಿಷ್ಠರ ತೀರ್ಮಾನದತ್ತ ಎಲ್ಲರ ಕಣ್ಣು ನೆಟ್ಟಿದ್ದವು. ಅಂತೂ ಟಿಕೆಟ್ ಪಡೆಯುವಲ್ಲಿ ಜಿ.ಎಸ್.ಬಸವರಾಜು ಯಶಸ್ವಿಯಾಗಿದ್ದಾರೆ. ಪಕ್ಷದೊಳಗೆ ಇನ್ನೂ ಕೆಲವರು ಆಕಾಂಕ್ಷಿಗಳಾಗಿದ್ದರೂ ಸಹ ಅಸಮಾಧಾನ ಸ್ಪೋಟಗೊಂಡಿಲ್ಲ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link