ತುಮಕೂರು ನಗರ: ಇನ್ನೂ ಒಗ್ಗದ ಅಪಾರ್ಟ್‍ಮೆಂಟ್ ಸಂಸ್ಕೃತಿ

ತುಮಕೂರು

ವಿಶೇಷ ಲೇಖನ: ಆರ್.ಎಸ್.ಅಯ್ಯರ್

     ತುಮಕೂರು ನಗರ ಕ್ಷಿಪ್ರಗತಿಯ ಬೆಳವಣಿಗೆ ಕಾಣುತ್ತಿದ್ದರೂ, ಪಕ್ಕದ ರಾಜಧಾನಿ ಬೆಂಗಳೂರಿನಲ್ಲಿರುವಂತೆ ಗಗನಚುಂಬಿ ಅಪಾರ್ಟ್‍ಮೆಂಟ್‍ಗಳು ಇನ್ನೂ ತುಮಕೂರು ನಗರದಲ್ಲಿ ಏಕೆ ತಲೆಯೆತ್ತುತ್ತಿಲ್ಲ ಎಂಬ ಪ್ರಶ್ನೆ ಹಲವರ ಮನವನ್ನು ಕೊರೆಯುತ್ತಿದ್ದರೂ, ಅತ್ತ ನಗರಕ್ಕೆ ನಗರವೂ ಅಲ್ಲದ, ಇತ್ತ ಹಳ್ಳಿಗೆ ಹಳ್ಳಿಯೂ ಅಲ್ಲದ ಅತಂತ್ರ ಸ್ಥಿತಿಯಲ್ಲಿ ತೊಳಲಾಡುತ್ತಿರುವ ತುಮಕೂರು ನಗರದಲ್ಲಿ, ಈ ಅಪಾರ್ಟ್‍ಮೆಂಟ್ ಸಂಸ್ಕೃತಿ ಸದ್ಯಕ್ಕೆ ಒಗ್ಗುತ್ತಿಲ್ಲವೆಂಬುದು ಕಟು ವಾಸ್ತವ ಸಂಗತಿಯಾಗಿದೆ.

     ನಗರ ಬೆಳೆಯುತ್ತಿದೆ ಜನವಸತಿ ಹೆಚ್ಚುತ್ತಿದೆ. ಮಹಾನಗರ ಪಾಲಿಕೆ ಪ್ರದೇಶವೇ ಒಂದು ವಿಧಾನಸಭಾ ಕ್ಷೇತ್ರವೂ ಆಗಿದೆ. ಜಿಲ್ಲಾ ಕೇಂದ್ರವಷ್ಟೇ ಅಲ್ಲದೆ, ಈಗ ಸ್ಮಾರ್ಟ್‍ಸಿಟಿಯೂ ಆಗುತ್ತಿದೆ. ನಗರಕ್ಕೆ ಹೊಂದಿಕೊಂಡ ವಸಂತನರಸಾಪುರ ಪ್ರದೇಶವು ಇಡೀ ಏಷ್ಯಾದಲ್ಲೇ ದೊಡ್ಡದೆನಿಸುವ ಕೈಗಾರಿಕಾ ಪ್ರದೇಶವಾಗಿ ಹೊರಹೊಮ್ಮಿದೆ. ದೇಶ-ವಿದೇಶಗಳ ಕಾರ್ಖಾನೆಗಳು ಇಲ್ಲಿ ತಲೆಯೆತ್ತಲಿವೆ. ಈಗಾಗಲೇ ಕೆಲವು ಕಾರ್ಖಾನೆಗಳು ಆರಂಭಗೊಂಡಿವೆ. ಉದ್ಯೋಗಾರ್ಥವಾಗಿ ಹೊರ ಜಿಲ್ಲೆ, ಹೊರ ರಾಜ್ಯಗಳವರು ತುಮಕೂರಿಗೆ ಬರುತ್ತಿದ್ದಾರೆ. ಇನ್ನೂ ದೊಡ್ಡ ಸಂಖ್ಯೆಯಲ್ಲಿ ಬರುವ ಎಲ್ಲ ಲಕ್ಷಣಗಳಿವೆ.

     ಶೈಕ್ಷಣಿಕ ಕ್ಷೇತ್ರದಲ್ಲಿ ಈಗಾಗಲೇ ರಾಷ್ಟ್ರೀಯ- ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ತುಮಕೂರು ನಗರವು, ಕೈಗಾರಿಕಾ ವಲಯದಲ್ಲೂ ಜಾಗತಿಕ ಮಟ್ಟದ ನಕ್ಷೆಯಲ್ಲಿ ಕಾಣಿಸಿಕೊಳ್ಳಲಿದೆ. ಇಷ್ಟಾಗಿಯೂ ಇನ್ನೂ ನಗರದಲ್ಲಿ ಆಧುನಿಕ ಜನವಸತಿಯ ಸ್ವರೂಪವಾದ ಅಪಾರ್ಟ್‍ಮೆಂಟ್‍ಗಳು ತಲೆಯೆತ್ತಿಲ್ಲ. ಬದಲಾದ ಕಾಲಘಟ್ಟದಲ್ಲಿ ಕಡಿಮೆ ಭೂಪ್ರದೇಶದಲ್ಲಿ ಅಧಿಕ ವಸತಿ ಕಲ್ಪಿಸುವುದು ಅನಿವಾರ್ಯವಾಗುತ್ತಿದ್ದರೂ, ತುಮಕೂರು ನಗರದೊಳಗೆ ಮಾತ್ರ ಇದು ಇನ್ನೂ ಜನಾಕರ್ಷಣೆಯೆನಿಸಿಲ್ಲ.

     ಹಿಂದಿನ ಜನಗಣತಿ ಪ್ರಕಾರ ನಗರದ ಜನಸಂಖ್ಯೆ 3 ಲಕ್ಷ ದಾಟಿದೆ. ಆದರೆ ಈಗ ಅದು ಸರಿಸುಮಾರು 5 ಲಕ್ಷ ಇರಬಹುದೆಂಬುದು ಒಂದು ಅಂದಾಜು. ಸುಮಾರು ಒಂದೂವರೆ ಲಕ್ಷ ಕುಟುಂಬಗಳು ಇಲ್ಲಿ ವಾಸಿಸುತ್ತಿದೆಯೆಂಬುದು ಮತ್ತೊಂದು ಲೆಕ್ಕಾಚಾರ. 1983ರಲ್ಲಿ ತುಮಕೂರು ನಗರ ಯೋಜನಾ ಪ್ರಾಧಿಕಾರ (ಈಗ ಅದು ಟೂಡಾ ಆಗಿ ಪರಿವರ್ತಿತವಾಗಿದೆ) ಅಸ್ತಿತ್ವಕ್ಕೆ ಬಂದ ಸಂದರ್ಭದಿಂದ ಈವರೆಗೆ ನಗರದಲ್ಲಿ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ನಿವೇಶನಗಳು ಟೂಡಾದಿಂದ ಅನುಮೋದಿಸಲ್ಪಟ್ಟಿದೆಯೆಂಬುದು ಇನ್ನೊಂದು ಅಂದಾಜು.

     ನಗರದಲ್ಲಿ ವಾಸಿಸುತ್ತಿರುವ ಬಹುತೇಕ ಕುಟುಂಬಗಳು ಕನಿಷ್ಟ ಒಂದು ಚಿಕ್ಕ ನಿವೇಶನವನ್ನಾದರೂ ಹೊಂದಿರುತ್ತದೆಂಬುದು ಒಂದು ಅನಿಸಿಕೆ. ಮಿಗಿಲಾಗಿ ಈ ಹೊತ್ತಿಗೂ ನಗರದ ಹೊರವಲಯದಲ್ಲಿ ಕನಿಷ್ಟ ಬೆಲೆಗೆ ಒಂದು ನಿವೇಶನ ಸಿಗುವ ಅವಕಾಶಗಳು ವಿಪುಲವಾಗಿರುವುದರಿಂದ, ತನ್ನದೇ ಒಂದು ನಿವೇಶನ ಹೊಂದುವುದು ಹಾಗೂ ಅದರಲ್ಲಿ ಯಾರ ಹಂಗೂ ಇಲ್ಲದೆ ಸ್ವತಂತ್ರವಾದ ತನ್ನದೇ ಸ್ವಂತ ಒಂದು ಮನೆ ಕಟ್ಟಿಕೊಳ್ಳುವ ಕನಸು ಹಾಗೂ ಮಹತ್ವಾಕಾಂಕ್ಷೆಯನ್ನು ಹೊಂದಿರುವವರೇ ಅಧಿಕವಾಗಿರುತ್ತಾರೆ; ಜೊತೆಗೆ ಅಪಾರ್ಟ್‍ಮೆಂಟ್‍ನಲ್ಲಿ ಮನೆ ಹೊಂದಿದರೆ ಅಂತಹ ಸ್ವಾತಂತ್ರ್ಯ ಇರದು ಹಾಗೂ ಪ್ರತಿ ತಿಂಗಳೂ ನಿರ್ವಹಣಾ ವೆಚ್ಚ ಭರಿಸಬೇಕಾಗುತ್ತದೆಂಬುದೂ ಮತ್ತೊಂದು ಅನಿಸಿಕೆ. ಇವೆಲ್ಲ ಕಾರಣಗಳಿಂದ ಸದ್ಯಕ್ಕೆ ತುಮಕೂರು ನಗರದಲ್ಲಿ ಅಪಾರ್ಟ್‍ಮೆಂಟ್ ಸಂಸ್ಕೃತಿಯತ್ತ ಒಲವು ವ್ಯಕ್ತವಾಗುತ್ತಿಲ್ಲ ಎಂದು ಒಟ್ಟಾರೆ ಸನ್ನಿವೇಶವನ್ನು ಪರಾಮರ್ಶಿಸಲಾಗುತ್ತಿದೆ.

ಕಾನೂನಿನ ಪ್ರಕಾರ ನಿರ್ಮಾಣಕ್ಕೆ ನಿರ್ಬಂಧವಿಲ್ಲ

      ತುಮಕೂರು ನಗರದೊಳಗೆ ಕಾನೂನು/ನಿಯಮಾವಳಿಗಳ ಪ್ರಕಾರ ಬಹುಮಹಡಿಯ ಅಪಾರ್ಟ್‍ಮೆಂಟ್ ನಿರ್ಮಾಣ ಮಾಡಲು ಯಾವುದೇ ನಿರ್ಬಂಧ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ ತುಮಕೂರು ಮಹಾನಗರ ಪಾಲಿಕೆಯ ನಗರ ಯೋಜನಾಧಿಕಾರಿ ಎಂ.ಬಿ.ಚನ್ನಬಸಪ್ಪ.

     ಸಣ್ಣದೊಂದು 30/40 ನಿವೇಶನದಲ್ಲಿ ಮನೆ ನಿರ್ಮಿಸಲು ಯಾವ ಕಾನೂನು-ನಿಯಮಗಳು ಅನ್ವಯಿಸುವುವೋ, ಬಹುಮಹಡಿಗಳ ಅಪಾರ್ಟ್‍ಮೆಂಟ್ ನಿರ್ಮಾಣಕ್ಕೂ ಅಂತಹುದೇ ಕಾನೂನು-ನಿಯಮಗಳು ಅನ್ವಯವಾಗುತ್ತವೆ. ಅವುಗಳನ್ನು ಪಾಲಿಸುವುದಾದರೆ, ಕಾನೂನಿನಲ್ಲಿ ಯಾವ ಅಡೆತಡೆಗಳೂ ಇರುವುದಿಲ್ಲ ಎಂದು ಅವರು ಸ್ಪಷ್ಟ ಶಬ್ದಗಳಲ್ಲಿ ಹೇಳುತ್ತಾರೆ. ಕೈಗಾರಿಕೆ ಹೊರತಾಗಿ ಉಳಿದ ಕಟ್ಟಡ ನಿರ್ಮಿಸಲು ಸರ್ಕಾರ ಸೆಟ್‍ಬ್ಯಾಕ್ ನಿಯಮಾವಳಿ, ಕಟ್ಟಡದ ಎತ್ತರಕ್ಕೆ ಅನುಗುಣವಾಗಿ ಸುತ್ತಲೂ ಬಿಡಬೇಕಾದ ಖಾಲಿ ಸ್ಥಳ, ಪಾರ್ಕಿಂಗ್ ಸ್ಥಳ ಮೊದಲಾದುವನ್ನು ಈಗಾಗಲೇ ನಿಗದಿಪಡಿಸಿದೆ. ಅದರ ಬಗ್ಗೆ ನಿರ್ಮಾಣಗಾರರಿಗೆಲ್ಲ ತಿಳಿದೇ ಇರುತ್ತದೆ. ಹೀಗಾಗಿ ಬಹುಮಹಡಿ ಅಪಾರ್ಟ್‍ಮೆಂಟ್ ನಿರ್ಮಿಸಲು ತುಮಕೂರು ನಗರದಲ್ಲಿ ಮುಕ್ತ ಅವಕಾಶಗಳಿವೆ ಎನ್ನುತ್ತಾರೆ.

     ಮುಕ್ತ ಅವಕಾಶವಿದ್ದರೂ ತುಮಕೂರು ನಗರದಲ್ಲಿ ಇನ್ನೂ ಅಪಾರ್ಟ್‍ಮೆಂಟ್‍ಗಳು ನಿರ್ಮಾಣವಾಗದಿರಲು ಕಾರಣವೇನಿರಬಹುದು ಎಂಬ ಪ್ರಶ್ನೆಗೆ, ತುಮಕೂರು ನಗರದ ಸುತ್ತಲೂ ಹೊರವಲಯದಲ್ಲಿ ಈಗಲೂ ಖಾಲಿ ನಿವೇಶನಗಳು ಯಥೇಚ್ಛವಾಗಿವೆ. ಒಂದೇ ಕುಟುಂಬದ ನಾಲ್ಕಾರು ನಿವೇಶನಗಳೂ ಇರುವ ಸಾಧ್ಯತೆಗಳಿರುತ್ತವೆ. ಇಂತಹ ನಿವೇಶನಗಳು ಈಗ ಖರೀದಿಯಾದವುಗಳಲ್ಲ. ಈ ಹಿಂದೆಯೇ ಖರೀದಿಗೊಂಡಿರುವಂಥವು. ಇಂದು ಆ ನಿವೇಶನಗಳ ಮಾಲೀಕರು ನಾನಾ ಕಾರಣಗಳಿಂದ ಅವುಗಳನ್ನು ಹಾಗೆಯೇ ಇರಿಸಿಕೊಂಡಿರುತ್ತಾರಷ್ಟೇ.

     ಒಳ್ಳೆಯ ಬೆಲೆ ಸಿಕ್ಕಾಗ ಅದನ್ನು ಮಾರಾಟ ಮಾಡುತ್ತಾರೆ. ಹೀಗೆ ನಗರದೊಳಗೇ ನಿವೇಶನಗಳು ಸಿಗುವುದರಿಂದ ಅಪಾರ್ಟ್‍ಮೆಂಟ್ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಕೆಲವು ಬಿಲ್ಡರ್‍ಗಳು ಅಪಾರ್ಟ್‍ಮೆಂಟ್ ನಿರ್ಮಿಸುವ ಸಾಹಸ ಮಾಡಿದರಾದರೂ, ಜನರಿಂದ ಸ್ಪಂದನೆ ಸಿಗದೆ ಆ ಯೋಜನೆಗಳು ಪೂರ್ಣವಾಗಲಿಲ್ಲ. ಅಂದರೆ ಸ್ಥಳೀಯ ಜನರಿಗೆ ತಕ್ಷಣದಲ್ಲಿ ಅಪಾರ್ಟ್‍ಮೆಂಟ್ ಅನಿವಾರ್ಯವೆನಿಸುತ್ತಿಲ್ಲ. ನಗರದ ಸುತ್ತ ಚಿಕ್ಕ-ಪುಟ್ಟ ಲೇಔಟ್‍ಗಳಾಗುತ್ತಿವೆಯೇ ವಿನಃ ಅತ್ಯಧಿಕ ಸಂಖ್ಯೆಯ ನಿವೇಶನಗಳುಳ್ಳ ಬೃಹತ್ ಲೇಔಟ್ ನಿರ್ಮಾಣವಾಗಿಲ್ಲ. ಹೀಗಾಗಿ ದೊಡ್ಡ ಸಂಪರ್ಕ ರಸ್ತೆಗಳು, ದೊಡ್ಡ ನಿವೇಶನಗಳು ಇಲ್ಲವಾಗಿವೆ. ನಗರದೊಳಗೆ ಅಪಾರ್ಟ್‍ಮೆಂಟ್ ನಿರ್ಮಾಣವಾಗದಿರಲು ಇಂತಹ ತಾಂತ್ರಿಕ ಕಾರಣಗಳೂ ಇರುತ್ತವೆ ಎಂದು ಅವರು ವಿಶ್ಲೇಷಿಸುತ್ತಾರೆ.

   ಇಷ್ಟಾಗಿಯೂ, ಮುಂದೊಂದು ದಿನ ತುಮಕೂರು ನಗರದಲ್ಲಿ ಅಪಾರ್ಟ್‍ಮೆಂಟ್ ಅನಿವಾರ್ಯವಾಗಲಿದೆ. ಏಕೆಂದರೆ ವಸಂತನರಸಾಪುರ ಕೈಗಾರಿಕಾ ಪ್ರದೇಶ ಬೆಳೆದಂತೆಲ್ಲ, ಹೊರ ರಾಜ್ಯದವರು ಉದ್ಯೋಗಾರ್ಥಿಗಳಾಗಿ ಬರತೊಡಗಿದಾಗ ಇದಕ್ಕೆ ಬೇಡಿಕೆ ಆರಂಭವಾಗುತ್ತದೆ. ಮುಂದಿನ 10 ವರ್ಷಗಳ ಬಳಿಕ ಇಲ್ಲೂ ಅಪಾರ್ಟ್‍ಮೆಂಟ್‍ಗಳು ತಲೆಯೆತ್ತಲಿವೆ ಎಂಬುದು ಚನ್ನಬಸಪ್ಪ ಅವರ ಸ್ಪಷ್ಟ ಅಭಿಪ್ರಾಯ.

ಅಪಾರ್ಟ್‍ಮೆಂಟ್ ಸಂಸ್ಕೃತಿ  ಇನ್ನೂ ಆಕರ್ಷಿಸಿಲ್ಲ

     ತುಮಕೂರಿನ ಪ್ರಮುಖ ಬಿಲ್ದರ್ ಚಿದಾನಂದ್ ಅವರೂ ಇಂತಹುದೇ ಅನಿಸಿಕೆ ವ್ಯಕ್ತಪಡಿಸುತ್ತಾರೆ. ತುಮಕೂರು ನಗರದಲ್ಲಿ ಇನ್ನೂ ಸಹ ಅಪಾರ್ಟ್‍ಮೆಂಟ್ ಸಂಸ್ಕೃತಿ ಜನರನ್ನು ಆಕರ್ಷಿಸಿಲ್ಲ ಎನ್ನುವ ಅವರು, ಈ ನಿಟ್ಟಿನಲ್ಲಿ ತಮಗಾದ ಸ್ವಾನುಭವವನ್ನು ಮೆಲುಕು ಹಾಕುತ್ತಾರೆ. ನಗರದಲ್ಲಿ ಅಪಾರ್ಟ್‍ಮೆಂಟ್ ನಿರ್ಮಿಸಲು ತೊಡಗಿದಾಗ, ಸಾರ್ವಜನಿಕರಿಂದ ನಿರುತ್ಸಾಹದ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಕೈಬಿಡಬೇಕಾದುದನ್ನು ಉಲ್ಲೇಖಿಸುತ್ತಾರೆ.

   ಆದರೆ ಅವರೂ ಸಹ ವಸಂತನರಸಾಪುರ ಕೈಗಾರಿಕಾ ಪ್ರದೇಶದತ್ತ ಬೊಟ್ಟು ಮಾಡುತ್ತ, ಮುಂದಿನ ವರ್ಷಗಳಲ್ಲಿ ಅಲ್ಲಿಗೆ ಹೊರರಾಜ್ಯದವರು ಉದ್ಯೋಗಾರ್ಥ ಬರತೊಡಗಿದಾಗ ವಸತಿಗಾಗಿ ಅಪಾರ್ಟ್‍ಮೆಂಟ್‍ಗಳು ಅನಿವಾರ್ಯವಾಗುತ್ತವೆ. ಆಗ ಬೇಡಿಕೆ ಬರುತ್ತದೆ. ನಗರದೊಳಗಿನ ಅನೇಕ ಬಡಾವಣೆಗಳಲ್ಲಿ ದೊಡ್ಡ ದೊಡ್ಡ ಹಳೆಯ ಮನೆಗಳಿದ್ದು, ಅಂತಹವನ್ನು ಮಾಲೀಕರು ಮಾರಾಟ ಮಾಡಿದಾಗ ಅದನ್ನು ಖರೀದಿಸಿ, ಒಂದು ಮನೆ ಇದ್ದ ಸ್ಥಳದಲ್ಲಿ 25-30 ಮನೆಗಳುಳ್ಳ ಅಪಾರ್ಟ್‍ಮೆಂಟ್‍ಗಳು ತಲೆಯೆತ್ತುವ ಎಲ್ಲ ಸಾಧ್ಯತೆಗಳಿರುತ್ತವೆ ಎಂದು ಅವರು ವಿಶ್ಲೇಷಿಸುತ್ತಾರೆ.

    ನಗರದ ಹೊರವಲಯದಲ್ಲಿ ಈಗಲೂ ಸರಿಸುಮಾರು 20 ಲಕ್ಷ ರೂ.ಗಳಿಗೆ ಒಂದು ನಿವೇಶನ ಲಭಿಸುವ ಅವಕಾಶಗಳಿರುವುದರಿಂದ ಜನಸಾಮಾನ್ಯರು ಸಹಜವಾಗಿ ನಿವೇಶನ ಖರೀದಿಸುತ್ತಾರೆ ಹಾಗೂ ಹೇಗೋ ಕಷ್ಟಪಟ್ಟು ಅಲ್ಲೊಂದು ಸ್ವಂತ ಮನೆ ನಿರ್ಮಿಸಿಕೊಳ್ಳುತ್ತಾರೆ. ಇದೇ ರೀತಿ ಕಟ್ಟಿದ ಮನೆಗಳೂ ಲಭಿಸುತ್ತಿವೆ. ಅದರತ್ತಲೇ ಜನರು ಆಕರ್ಷಿತರಾಗುತ್ತಿದ್ದಾರೆ. ಇಂತಹ ಮನೋಧರ್ಮದವರೇ ಅಧಿಕವಾಗಿರುವುದರಿಂದ ಈಗ ಅಪಾರ್ಟ್‍ಮೆಂಟ್ ಸಂಸ್ಕøತಿ ಮುನ್ನೆಲೆಗೆ ಬಂದಿಲ್ಲ ಎಂದು ಹೇಳುತ್ತಾರೆ.

    ನಗರ ಬೆಳೆಯುತ್ತಿದೆ. ಜೊತೆಗೆ ವಸಂತನರಸಾಪುರ ಕೈಗಾರಿಕಾ ಪ್ರದೇಶ ಸಹ ಬೆಳೆಯುತ್ತಿದೆ. ಕೈಗಾರಿಕಾ ಪ್ರದೇಶಕ್ಕೆ ಪೂರಕವಾಗಿ ಬೆಂಗಳೂರಿನ ಮೆಟ್ರೋರೈಲು ಇಲ್ಲಿಯವರೆಗೆ ವಿಸ್ತರಣೆಗೊಳ್ಳುವ ಅವಕಾಶಗಳು ಹೇರಳವಾಗಿವೆ. ಜೊತೆಗೆ ಬೆಂಗಳೂರು-ತುಮಕೂರು ನಡುವೆ ಸಬ್-ಅರ್ಬನ್ ರೈಲು ಸಂಚಾರವೂ ಆಗಲಿದೆ. ಹೀಗಾದಲ್ಲಿ ಬೆಂಗಳೂರು ಪಕ್ಕದ ಉಪನಗರವಾಗಿ ತುಮಕೂರು ಪ್ರಮುಖ ಸ್ಥಾನ ಗಳಿಸಲಿದೆ. ಆಗ ಹೊರಗಿನವರು ಇಲ್ಲಿಗೆ ಬರುವುದು ಅನಿವಾರ್ಯವಾಗುತ್ತದೆ. ಬೆಂಗಳೂರಿಗಿಂತ ತುಮಕೂರಿನಲ್ಲೇ ವಸತಿಯು ಸುಲಭ ಹಾಗೂ ಕೈಗೆಟುಕುವಂತಾಗುತ್ತದೆಂದು ಎಲ್ಲರೂ ಇಲ್ಲೇ ಉಳಿದುಕೊಳ್ಳಲು ಇಚ್ಛಿಸುತ್ತಾರೆ. ಆಗ ಅನಿವಾರ್ಯವಾಗಿ ಅಪಾರ್ಟ್‍ಮೆಂಟ್‍ಗಳ ಮೊರೆ ಹೋಗಲೇಬೇಕಾಗುತ್ತದೆ ಎಂಬುದು ಚಿದಾನಂದ್ ಅವರ ಖಚಿತ ಅಭಿಪ್ರಾಯ.

ಹೊರವಲಯದಲ್ಲಿ ಯತ್ನ

    ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಿಂದ ಹೊರಕ್ಕೆ ಅಂದರೆ ತುಮಕೂರು ನಗರಕ್ಕೆ ಹೊಂದಿಕೊಂಡಂತೆ ಗ್ರಾಮೀಣ ಪ್ರದೇಶದ ಎರಡು ಕಡೆಗಳಲ್ಲಿ ಬೆಂಗಳೂರು ಮೂಲದ ಬಿಲ್ಡರ್‍ಗಳು ವಸಂತನರಸಾಪುರ ಕೈಗಾರಿಕಾ ಪ್ರದೇಶವನ್ನೇ ಗುರಿಯನ್ನಾಗಿಟ್ಟುಕೊಂಡು ಪ್ರಸ್ತುತ ಅಪಾರ್ಟ್‍ಮೆಂಟ್ ನಿರ್ಮಾಣದಲ್ಲಿ ತೊಡಗಿರುವುದನ್ನು ಚಿದಾನಂದ್ ಅವರು ಇದೇ ಸಂದರ್ಭದಲ್ಲಿ ಉದಾಹರಿಸುತ್ತಾರೆ.

    ಅಂತರಸನಹಳ್ಳಿ ಸಮೀಪ ನಾಲ್ಕು ಮಹಡಿಗಳಲ್ಲಿ ಸಿಂಗಲ್ ಬೆಡ್ ರೂಂ ಇರುವ ಒಟ್ಟು 193 ಮನೆಗಳ ಅಪಾರ್ಟ್‍ಮೆಂಟನ್ನು ನಿರ್ಮಿಸಲಾಗಿದೆ. ಒಂದು ಮನೆಗೆ 11 ಲಕ್ಷ ರೂ. ನಿಗದಿಪಡಿಸಿದ್ದು, ಬಹುತೇಕ ಮಾರಾಟಗೊಂಡಿವೆ. ಪ್ರಧಾನಮಂತ್ರಿಗಳ ಸರ್ವರಿಗೂ ಸೂರು ಯೋಜನೆಯಡಿ 2,50,000 ರೂ. ಸಬ್ಸಿಡಿ ಲಭಿಸಲಿದ್ದು, ಕೇವಲ 8,50,000 ರೂಗಳಿಗೆಲ್ಲ ಒಂದು ಮನೆ ದೊರೆತಂತಾಗಿದ್ದು, ಈಗಾಗಲೇ ಅಲ್ಲಿ ಕೆಲವರು ವಾಸಕ್ಕೆ ಬಂದಿದ್ದಾರೆ.

     ಇದೇ ರೀತಿ ಶಿರಾ ಕಡೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿ.ಆರ್.ಎಲ್. ಹೋಟೆಲ್ ಎದುರು ಬದಿಯಲ್ಲೂ ಬೃಹತ್ ಅಪಾರ್ಟ್‍ಮೆಂಟ್ ನಿರ್ಮಿಸಲ್ಪಡುತ್ತಿದೆ. ವಸಂತನರಸಾಪುರ ಕೈಗಾರಿಕಾ ಪ್ರದೇಶವನ್ನೇ ಇಲ್ಲೂ ಸಹ ಗುರಿಯನ್ನಾಗಿರಿಸಿಕೊಂಡಿದ್ದು, 14 ಅಂತಸ್ತಿನ ಬೃಹತ್ ಕಟ್ಟಡ ತಲೆಯೆತ್ತಲಿದೆ. ಡಬಲ್ ಬೆಡ್ ರೂಂನ ಒಟ್ಟು 940 ಮನೆಗಳು ಇಲ್ಲಿ ಸಿದ್ಧಗೊಳ್ಳಲಿವೆ. ಒಂದು ಮನೆಗೆ 15,50,000 ರೂ. ನಿಗದಿಪಡಿಸಿದ್ದು, ಇಲ್ಲೂ ಸಹ 2,50,000 ರೂ. ಸಬ್ಸಿಡಿ ಲಭಿಸಿ, ಒಂದು ಮನೆಯು 13,00,000 ರೂ.ಗಳಿಗೆ ದೊರಕಲಿದೆ. ಹೀಗಾಗಿ ಇಲ್ಲೂ ಈಗಾಗಲೇ 450 ಕ್ಕೂ ಅಧಿಕ ಮನೆಗಳು ಈಗಾಗಲೇ ಬುಕ್ ಆಗಿವೆ ಎಂದು ಚಿದಾನಂದ್ ಅವರು ವಿವರಿಸುತ್ತಾರೆ.

    ಇವೆಲ್ಲ ಬೆಳವಣಿಗೆಗಳನ್ನು ಗಮನಿಸಿದರೆ, ತುಮಕೂರು ನಗರದ ಹೊರವಲಯವು ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ನಗರದ ಸ್ವರೂಪವೇ ಬದಲಾಗಲಿದೆಯೆಂಬುದು ಖಚಿತವಾಗುತ್ತದೆ. ಹೊಸ-ಹೊಸ ಕಾರ್ಖಾನೆಗಳು ತಲೆಯೆತ್ತಿ, ಹೊರ ಜಿಲ್ಲೆ-ರಾಜ್ಯಗಳ ಕಾರ್ಮಿಕರು ಇಲ್ಲಿಗೆ ಬಂದಂತೆಲ್ಲ ಅಂತಹವರ ವಸತಿಗಾಗಿ ಹೊರವಲಯದಲ್ಲಿ ಅಪಾರ್ಟ್‍ಮೆಂಟ್‍ಗಳು ತಲೆಯೆತ್ತಲಿವೆ ಎಂಬ ಮುನ್ಸೂಚನೆ ಸಿಗುತ್ತಿದೆ. ಅದೇ ರೀತಿ ಬೆಂಗಳೂರು ಮಹಾನಗರವು ಈಗಾಗಲೇ ವಿಪರೀತ ಬೆಳವಣಿಗೆ ಹೊಂದಿರುವುದರಿಂದ ಪಕ್ಕದಲ್ಲೇ ಇರುವ ತುಮಕೂರನ್ನು ಅಲ್ಲಿನ ಉದ್ಯೋಗಾರ್ಥಿಗಳು ಅವಲಂಬಿಸುವ ಸಂದರ್ಭಗಳು ಅಧಿಕವಾಗಿದ್ದು, ಆಗಲೂ ಅಂಥವರಿಗೆ ಅಪಾರ್ಟ್‍ಮೆಂಟ್‍ಗಳೇ ಆಸರೆಯಾಗಬಹುದು. ಮುಂದಿನ ದಿನಗಳಲ್ಲಿ ನಗರದೊಳಗಿನ ಹಳೆಯ ಖಾಸಗಿ ಕಟ್ಟಡಗಳು ಕಣ್ಮರೆಯಾಗಿ, ಅಲ್ಲೆಲ್ಲ ಬಹು ಸಂಖ್ಯೆಯ ಮನೆಗಳುಳ್ಳ ಅಪಾರ್ಟ್‍ಮೆಂಟ್‍ಗಳು ತಲೆಯೆತಬಹುದೆಂಬುದನ್ನು ಯಾರೂ ಅಲ್ಲಗಳೆಯಲಾರರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap