ತುಮಕೂರು ನಗರದಲ್ಲೇ ಕಳಪೆ ಮತದಾನ

ತುಮಕೂರು:

     ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳನ್ನು ಅವಲೋಕಿಸಿದರೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ತುಮಕೂರು ನಗರದ ಶೇಕಡಾವಾರು ಮತದಾನ ಉಳಿದೆಲ್ಲ ಕ್ಷೇತ್ರಗಳಿಗಿಂತ ಕಡಿಮೆ ಮತ್ತು ಕಳಪೆಯಾಗಿ ಕಾಣುತ್ತಿದೆ.

      ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ 65.42 ರಷ್ಟು ಮತದಾನವಾಗಿದ್ದು, ಕಳೆದ ಬಾರಿ (2014) 63.11 ರಷ್ಟು ಮತದಾನವಾಗಿತ್ತು. ಶೇ.2ರಷ್ಟು ಮಾತ್ರವೇ ಮತದಾನದಲ್ಲಿ ಹೆಚ್ಚಳ ಕಂಡುಬಂದಿದ್ದು, ತುಮಕೂರು ನಗರದ ಮತದಾರ ಇನ್ನೂ ಎಚ್ಚೆತ್ತುಕೊಂಡಂತೆ ಕಂಡುಬರುತ್ತಿಲ್ಲ. ಇದಕ್ಕೆ ಕಾರಣಗಳೇನು ಎಂಬ ಪ್ರಶ್ನೆಗಳು ಕಳೆದ ಬಾರಿಯ ಲೋಕಸಭಾ ಚುನಾವಣೆ ಹಾಗೂ 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲೂ ಮೂಡುತ್ತಲೇ ಇವೆ.

      ಗ್ರಾಮೀಣ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ವಿವಿಧ ತಾಲ್ಲೂಕುಗಳ ಮತದಾನದ ಪ್ರಮಾಣ ಈ ಬಾರಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. 2014 ರಲ್ಲಿ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ 72.59 ರಷ್ಟು ಮತದಾನ ನಡೆದಿದ್ದರೆ, ಈ ಬಾರಿ 78.12 ರಷ್ಟು ಮತದಾನವಾಗಿದೆ. ತಿಪಟೂರಿನಲ್ಲಿ 2014 ರಲ್ಲಿ 74.18 ರಷ್ಟು ಮತದಾನವಾಗಿದ್ದರೆ, ಈ ಬಾರಿ 80.27 ರಷ್ಟು ಮತದಾನವಾಗಿದೆ.

      ತುರುವೇಕೆರೆಯಲ್ಲಿ 70.28 ರಷ್ಟು ಮತದಾನವಾಗಿತ್ತು. ಈ ಬಾರಿ 80 ರಷ್ಟು ಮತದಾನವಾಗಿದೆ. ತುಮಕೂರು ಗ್ರಾಮಾಂತರದಲ್ಲಿ 78.07 ರಷ್ಟು ಮತದಾನವಾಗಿದ್ದರೆ, ಈ ಬಾರಿ 81.87ಕ್ಕೆ ಜಿಗಿದಿದೆ. ಕೊರಟಗೆರೆಯಲ್ಲಿ ಕಳೆದ ಬಾರಿ 76.89 ರಷ್ಟಿದ್ದರೆ, ಈ ಬಾರಿ 79.67 ರಷ್ಟಿದೆ. ಗುಬ್ಬಿಯಲ್ಲಿ ಕಳೆದ ಬಾರಿ 77.30 ರಷ್ಟಿದ್ದು, ಈ ಬಾರಿ 80.29 ರಷ್ಟು ಮತದಾನವಾಗಿದೆ. ಮಧುಗಿರಿಯಲ್ಲಿ 79.59 ರಿಂದ 74.38ಕ್ಕೆ ಜಿಗಿದಿದೆ.

     ಮೇಲ್ಕಂಡ ಅಂಕಿ ಅಂಶಗಳನ್ನು ಗಮನಿಸಿದಾಗ ಮತದಾನದ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದ್ದರೂ ತುಮಕೂರು ನಗರದಲ್ಲಿ ಹೇಳಿಕೊಳ್ಳುವಂತಹ ಮತದಾನವಾಗಿಲ್ಲ. ಹಾಗೆ ನೋಡಿದರೆ ತುಮಕೂರು ನಗರದಲ್ಲೇ ಅತೀ ಹೆಚ್ಚು ಮತದಾನ ಜಾಗೃತಿ ಕಾರ್ಯಕ್ರಮಗಳು ನಡೆದವು. ಸರ್ಕಾರದ ಸ್ವೀಪ್ ಸಮಿತಿಯಿಂದ ಹಿಡಿದು ವಿವಿಧ ಸಂಘ ಸಂಸ್ಥೆಗಳು ಮತದಾನದ ಬಗ್ಗೆ ಪ್ರತಿದಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದವು.

     ಇಷ್ಟಾದರೂ ಮತದಾನದ ಪ್ರಮಾಣ ಶೇ.70 ರಷ್ಟು ದಾಟದೇ ಇರುವುದು ಹಲವರಿಗೆ ಸೋಜಿಗವನ್ನುಂಟು ಮಾಡಿದೆ. ತುಮಕೂರು ನಗರದಲ್ಲಿ ಅತಿ ಕಡಿಮೆ ಮತದಾನವಾಗುತ್ತಿರುವುದು ಇದೇ ಹೊಸದೇನಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಇದೇ ರೀತಿಯಾಗಿತ್ತು. 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದಲ್ಲಿ ಶೇ.65.02ರಷ್ಟು ಮಾತ್ರವೇ ಮತ ಚಲಾವಣೆಯಾಗಿತ್ತು. ಉಳಿದ 10 ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.80ಕ್ಕೂ ಹೆಚ್ಚಿನ ಪ್ರಮಾಣದ ಮತದಾನವಾಗಿತ್ತು.

     ನಗರ ಪ್ರದೇಶದಲ್ಲಿರುವವರಿಗೆ ಎಲ್ಲ ಸೌಲಭ್ಯಗಳೂ ಇವೆ. ಸುದ್ದಿ ಮಾಧ್ಯಮಗಳ ಸೌಲಭ್ಯ, ವಾಟ್ಸ್‍ಫ್, ಫೇಸ್‍ಬುಕ್ ಮಾತ್ರವಲ್ಲದೆ, ದಿನನಿತ್ಯದ ಪರಿಚಯ, ಮತ ಹಾಕಲೇಬೇಕೆಂಬ ವರದಿಗಳು ಇವೆಲ್ಲ ಇದ್ದರೂ ಮತದಾನದ ಪ್ರಮಾಣ ಮಾತ್ರ ಕುಸಿಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

       ತುಮಕೂರು ಮಾತ್ರವಲ್ಲ, ಬೆಂಗಳೂರು ಸೇರಿದಂತೆ ಯಾವುದೇ ಪ್ರದೇಶಕ್ಕೆ ಹೋದರೂ ನಗರಗಳಲ್ಲಿ ಮತದಾನದ ಪ್ರಮಾಣ ಶೇ.70ಕ್ಕಿಂತ ಹೆಚ್ಚು ದಾಟಿ ಹೋಗುವುದು ಕಡಿಮೆಯೇ. ಮತದಾನ ಕಡಿಮೆಯಾಗುತ್ತಿರುವುದಕ್ಕೆ ಕೆಲವರು ಹಲವು ರೀತಿಯ ವ್ಯಾಖ್ಯಾನಗಳನ್ನು ನೀಡುತ್ತಾರೆ. ಕೆಲವೊಂದನ್ನು ಒಪ್ಪ ಬಹುದಾದರೂ ಮತ್ತೆ ಕೆಲವುಗಳನ್ನು ನಿರಾಕರಿಸಲೂಬಹುದು. ಅವರವರವ ಭಾವಕ್ಕೆ ತಕ್ಕಂತೆ ವ್ಯಾಖ್ಯಾನಗಳು ನಡೆಯುತ್ತಿವೆ.

      ಈ ಬಾರಿ ಚುನಾವಣಾ ಸಂದರ್ಭದಲ್ಲಿ ಸಾಲು ಸಾಲು ರಜೆಗಳು ಎದುರಾದವು. ಕೆಲವರು ರಜೆಗಳನ್ನು ಹಾಕಿ ಊರಿನತ್ತ ಹೊರಟರು. ಇನ್ನು ಕೆಲವರು ಸರ್ಕಾರದಿಂದ ಎಲ್ಲ ಸೌಲಭ್ಯಗಳನ್ನು ಪಡೆದು ಮತದಾನವೊಂದು ಪವಿತ್ರ ಕರ್ತವ್ಯ ಎಂದು ತಿಳಿದಿದ್ದರೂ ಮತದಾನದಿಂದ ನನಗೇನು ಪ್ರಯೋಜನ ಎಂಬ ಸ್ವಾರ್ಥದ ಬುದ್ಧಿವಂತಿಕೆಯ ಜನರೂ ನಮ್ಮೊಳಗಿದ್ದಾರೆಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಣಕಿಸುವಂತಿದೆ.

     ಇನ್ನು ಕೆಲವರು ಹೇಳುವ ಪ್ರಕಾರ ಯಾರೂ ಇಷ್ಟವಿಲ್ಲ. ಅದಕ್ಕಾಗಿಯೇ ನಾನು ಮತಗಟ್ಟೆ ಬಳಿ ತೆರಳಲು ಹೋಗುತ್ತಿಲ್ಲ ಎನ್ನುತ್ತಾರೆ. ಇಂತಹವರಿಗಾಗಿಯೇ ಚುನಾವಣಾ ಆಯೋಗ `ನೋಟಾ’ ಬಳಕೆ ತಂದಿದೆ. ಅದನ್ನಾದರೂ ಉಪಯೋಗಿಸಹುದು. ಅಂದರೆ, ಕೊನೆಯ ಅಸ್ತ್ರವಾಗಿ ಮಾತ್ರವೇ ಇದನ್ನು ಬಳಸಬೇಕು. ಅದನ್ನಾದರೂ ಬಳಸಬಹುದಿತ್ತಲ್ಲವೇ ಎಂಬುದು ಪ್ರಜ್ಞಾವಂತರ ವಾದ. ಇನ್ನು ಕೆಲವರು ಮನೆಯಲ್ಲಿ ಟಿವಿಗಳ ಮುಂದೆ ಕುಳಿತುಕೊಳ್ಳುವವರು ಮೇಲೆ ಏಳುವುದಿಲ್ಲ. ಹೊರಗೆ ಹೋಗಿ ಬರುವುದೇ ಅವರಿಗೊಂದು ಕಷ್ಟದ ಕೆಲಸ.

       ಹೇಗೋ ರಜೆ ಇದೆ, ಮನೆಯಲ್ಲಿಯೇ ಕಳೆದರಾಯಿತು ಎಂಬ ಧೋರಣೆ. ಮತ್ತೊಂದು ವಿಚಿತ್ರ ಎಂದರೆ ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ಬಾಡಿಗೆ ಮನೆಯ ನಿವಾಸಿಗಳು ಮನೆ ಬದಲಾಯಿಸಿರುತ್ತಾರೆ. ಇಂತಹವರನ್ನು ಯಾರೂ ಸಂಪರ್ಕಿಸಿರುವುದಿಲ್ಲ. ನನ್ನನ್ನು ಯಾರೂ ಮಾತನಾಡಿಸಿಲ್ಲ. ಮತ ಏಕೆ ಹಾಕಬೇಕು ಎಂಬ ಧೋರಣೆಯೂ ಕೆಲವರಲ್ಲಿದೆ.

      ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ಅಥವಾ ಕಾರ್ಯಕರ್ತರು ಪ್ರತಿ ಮನೆ ಮನೆಯನ್ನು ಸಂಪರ್ಕಿಸಲು ಸಾಧ್ಯವಾಗದು. ಇವೆಲ್ಲವೂ ಮತದಾರನ ನಿರ್ಲಿಪ್ತತೆಗೆ ಕಾರಣವಾಗುತ್ತಿವೆ. ನಿಜವಾದ ಸಕಾರಣಗಳು ಇಲ್ಲದೆ ಮತದಾನದಿಂದ ದೂರ ಉಳಿಯುವವರ ಬಗ್ಗೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯ ಎನ್ನತ್ತಾರೆ ಕೆಲವರು.

      ನಗರ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಅರಿವಿನ ಕೊರತೆ ಇದೆ. ಅಂದರೆ, ಪ್ರಜಾಪ್ರಭುತ್ವದ ದೂರದೃಷ್ಟಿತ್ವ ಇವರಲ್ಲಿ ಕಂಡುಬರುತ್ತಿಲ್ಲ. ಯಾರಿಗೇನಾದರೂ ನನಗೇನು ಎಂಬಂತೆ ಇರುತ್ತಾರೆ. ನಾನು ನನ್ನ ಕುಟುಂಬ ಎಂಬುದಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಈ ಬಾರಿ ಚುನಾವಣೆ ಸಂದರ್ಭದಲ್ಲಿ ನಿರಂತರ ರಜೆಗಳು ಬಂದ ಕಾರಣ ಇರುವ ರಜೆಯನ್ನು ಕುಟುಂಬದ ಜೊತೆ ಅಥವಾ ತಮ್ಮ ಊರುಗಳಿಗೆ ಹೋಗಿ ಬರಲು ಕೆಲವರು ಬಳಸಿಕೊಂಡಿರಲೂಬಹುದು. ಹೀಗಾಗಿ ಮತದಾನದ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.

       ಗ್ರಾಮೀಣ ಪ್ರದೇಶಗಳಲ್ಲಿ ನಿತ್ಯ ಪಂಚಾಯತಿಯೊಂದಿಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಎಲ್ಲದಕ್ಕೂ ಪಂಚಾಯತಿಗಳನ್ನು ಅವಲಂಬಿಸಬೇಕು. ಅಲ್ಲಿನ ಸದಸ್ಯರೊಂದಿಗೆ ನಿತ್ಯ ಸಂಪರ್ಕ ಹೊಂದಿರುತ್ತಾರೆ. ಅನುಕೂಲಗಳು ಅಲ್ಲಿಂದಲೇ ಆಗಬೇಕು. ಇದರ ಜೊತೆಗೆ ಗ್ರಾಮೀಣ ಸಂಬಂಧಗಳು ಪರಿಣಾಮಕಾರಿಯಾಗಿ ಇರುತ್ತವೆ. ಇದಕ್ಕಿಂತಲೂ ಹೆಚ್ಚಾಗಿ ಅಲ್ಲಿ ರಾಜಕೀಯ ಗುಂಪುಗಳು ಮತ್ತು ಜಿದ್ದಾಜಿದ್ದಿ ಹೆಚ್ಚಾಗಿರುತ್ತದೆ. ಹೀಗಾಗಿ ಮತ ಹಾಕಲೇಬೇಕಾದ ಅನಿವಾರ್ಯತೆ ಅವರಲ್ಲಿರುತ್ತದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ನಿಕಟಪೂರ್ವ ಅಧ್ಯಕ್ಷರು ಹಾಗೂ ಪ್ರಾಂಶುಪಾಲರಾದ ಡಾ.ಎಚ್.ಎಸ್.ನಿರಂಜನಾರಾಧ್ಯ.

       ನಗರ ಪ್ರದೇಶಗಳಲ್ಲಿ ಬಹಳಷ್ಟು ಜನ ಖಾಸಗಿ ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುತ್ತಾರೆ. ಸರ್ಕಾರಕ್ಕೂ ಇವರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಹೀಗಾಗಿ ಕೆಲವರು ನಿರ್ಲಿಪ್ತರಾಗಿಯೇ ಉಳಿಯುವ ಸಂದರ್ಭಗಳೂ ಹೆಚ್ಚು. ನಗರಗಳಲ್ಲಿ ವಾಸವಿರುವ ಕೆಲವರು ತಮ್ಮ ಹುಟ್ಟೂರಲ್ಲೂ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುತ್ತಾರೆ. ಅಂತಹವರು ಸಾಮಾನ್ಯವಾಗಿ ತಮ್ಮ ಊರಿಗೆ ಹೋಗಿ ಮತ ಚಲಾಯಿಸುತ್ತಾರೆ.

      ಇನ್ನು ನಗರ ಪ್ರದೇಶಗಳಲ್ಲಿ ಕೆಲವು ಕಡೆ ಮತಪಟ್ಟಿಯಲ್ಲೇ ದೋಷವಿರುತ್ತದೆ. ಪಟ್ಟಿಯಲ್ಲಿ ತನ್ನ ಹೆಸರು ಸಿಗದೆ, ಅದನ್ನು ಹುಡುಕುವ ತಾಪತ್ರಯ ತೆಗೆದುಕೊಳ್ಳದೆ ಅಲ್ಲಿಂದ ಕಾಲ್ಕೀಳುತ್ತಾರೆ. ಗ್ರಾಮೀಣ ಭಾಗದಲ್ಲಿ ಮತದಾನ ಮಾಡದಿದ್ದರೆ ಸುತ್ತಮುತ್ತ ಇರುವ ಎಲ್ಲರಿಗೂ ಬಯಲಾಗುತ್ತದೆ. ನಗರ ಪ್ರದೇಶಗಳಲ್ಲಿ ಇಂತಹ ಯಾವುದೇ ಭಯ ಅಥವಾ ಎಚ್ಚರಿಕೆ ಯಾವುದೂ ಇರುವುದಿಲ್ಲ. ತಾನಾಯಿತು ತನ್ನ ಪಾಡಾಯಿತು ಎಂಬಂತೆ ಇರುತ್ತಾರೆ.

        ಸರ್ಕಾರದ ಸೌಲಭ್ಯಗಳನ್ನು ಹೆಚ್ಚಾಗಿ ಪಡೆಯುವವರೇ ನಗರಗಳಲ್ಲಿ ವಾಸಿಸುವವರು. ಆದರೆ ಸರ್ಕಾರದ ನಿಯಮಗಳನ್ನು ಪಾಲಿಸದೆ ಮತದಾನದಿಂದ ದೂರ ಉಳಿಯುವವರು ನಗರ ಪ್ರದೇಶಗಳಲ್ಲಿರುವವರೇ. ಇಂತಹವರಿಗೆ ಮತದಾನ ಜಾಗೃತಿಯ ಅರಿವು ಮೂಡಿಸಿದರೆ ಪ್ರಯೋಜನವಾದರೂ ಏನು? ಸರ್ಕಾರಗಳು ಚಿಂತಿಸಬೇಕಾದುದು ಮತ್ತು ಎಚ್ಚರಿಕೆ ವಹಿಸಬೇಕಾದುದು ಇಂತಹ ವರ್ಗದವರ ಅಪ್ರಾಮಾಣಿಕತೆಯ ಬಗ್ಗೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap