ಮಧುಗಿರಿಗೆ ಎ ಗ್ರೇಡ್ ಹೆಗ್ಗಳಿಕೆ, ಬಿ ಗೇಡ್‍ಗೆ ತುಮಕೂರು ತೃಪ್ತಿ

ತುಮಕೂರು

    ಜಿಲ್ಲೆಯಲ್ಲಿ ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸಂಭ್ರಮ ತರದಿದ್ದರೂ ನಿರಾಶೆ ಮೂಡಿಸಿಲ್ಲ. ಕಳೆದ ವರ್ಷ ರಾಜ್ಯದಲ್ಲಿ 11ನೇ ಸ್ಥಾನದಲ್ಲಿದ್ದ ಮಧುಗಿರಿ ಶೈಕ್ಷಣಿಕ ಜಿಲ್ಲೆ ಈ ಬಾರಿ 3ನೇ ಸ್ಥಾನಕ್ಕೆ ಏರಿ ಎ ಗ್ರೇಡ್ ಪಡೆದಿದೆ. ಕಳೆದ ಬಾರಿ 18ನೇ ಸ್ಥಾನದಲ್ಲಿದ್ದ ತುಮಕೂರು ಶೈಕ್ಷಣಿಕ ಜಿಲ್ಲೆ ಈ ಬಾರಿ 14ಕ್ಕೇ ಸ್ಥಾನ ಪಡೆದು ಫಲಿತಾಂಶ ಉತ್ತಮಪಡಿಸಿಕೊಂಡು ಬಿ ಗ್ರೇಡ್ ಗಳಿಸಿದೆ.

    ಕುಣಿಗಲ್‍ನ ಜ್ಞಾನ ಭಾರತಿ ಇಂಗ್ಲೀಷ್ ಪ್ರೌಢ ಶಾಲೆಯ ವಿದ್ಯಾರ್ಥಿ ಜಿ.ಎಂ.ಮಹೇಶ್ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕ ಪಡೆದು ಜಿಲ್ಲೆಗೆ ಪ್ರಥಮರಾಗಿದ್ದಾರೆ. ಇವರಲ್ಲದೆ, ತುರುವೇಕೆರೆಯ ಮೊರಾರ್ಜಿ ವಸತಿ ಶಾಲೆಯ ಡಿ.ಸಿಂಚನ 618, ತಿಪಟೂರಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹೆಚ್.ಸಿ.ದೀಪಿಕಾ 617, ಕುಣಿಗಲ್ ತಾಲ್ಲೂಕು ಹುಲಿಯೂರು ದುರ್ಗದ ಕರ್ನಾಟಕ ಪಬ್ಲಿಕ್ ಶಾಲೆಯ ಕೆ.ಎಸ್.ಶಾಲಿನಿ 616 ಅಂಕ ಪಡೆದು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಾಗಿದ್ದಾರೆ.
ತುಮಕೂರು ಶೈಕ್ಷಣಿಕ ಜಿಲ್ಲೆಯ ಆರು ತಾಲ್ಲೂಕುಗಳ 458 ಶಾಲೆಗಳ 23,783 ವಿದ್ಯಾರ್ಥಿಗಳು ಈ ಬಾರಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 13,205 ಬಾಲಕರು, 10,508 ಬಾಲಕಿಯರು ಸೇರಿದ್ದಾರೆ.

    ಪಡೆದ ಅಂಕಗಳ ಶೇಕಡವಾರು ಫಲಿತಾಂಶ ಆಧರಿಸಿ ಈ ಬಾರಿ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಗೆ ಇಲಾಖೆ ಗ್ರೇಡ್ ನೀಡುವ ಪದ್ದತಿ ಜಾರಿಗೆ ತಂದಿದೆ. ಶೇಕಡ 85ಕ್ಕೂ ಹೆಚ್ಚು ಫಲಿತಾಂಶ ಪಡೆದರೆ ಎ ಗ್ರೇಡ್, ಶೇಕಡ 60ರಿಂದ 85ರವರೆಗಿನ ಫಲಿತಾಂಶಕ್ಕೆ ಬಿ ಗ್ರೇಡ್, ಶೇಕಡ 60ಕ್ಕಿಂತಾ ಕಡಿಮೆ ಅಂಕ ಅಥವಾ ಫಲಿತಾಂಶ ಪಡೆಯುವ ಶಾಲೆ ಅಥವಾ ವಿದ್ಯಾರ್ಥಿಗೆ ಸಿ ಗ್ರೇಡ್ ನೀಡಲಾಗಿದೆ.

    ಇದರ ಆಧಾರದಲ್ಲಿ ಮಧುಗಿರಿ ಜಿಲ್ಲೆ ಎ ಗ್ರೇಡ್, ತುಮಕೂರು ಜಿಲ್ಲೆ ಬಿ ಗ್ರೇಡ್ ಪಡೆದಿವೆ. ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿಗೆ ಮಾತ್ರವೇ ಈ ಬಾರಿ ಎ ಗ್ರೇಡ್ ದೊರಕಿದೆ, ಉಳಿದಂತೆ ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ತಿಪಟೂರು, ತುರುವೇಕೆರೆ ತಾಲ್ಲೂಕುಗಳು ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಬಿ ಗ್ರೇಡ್ ಪಡೆದಿವೆ.

    ತುಮಕೂರು ಶೈಕ್ಷಣಿಕ ಜಿಲ್ಲೆಯ 458 ಶಾಲೆಗಳ ಪೈಕಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ 14 ಶಾಲೆಗಳು ಎ ಗ್ರೇಡ್, 28 ಶಾಲೆ ಬಿ ಗ್ರೇಡ್, 19 ಶಾಲೆ ಸಿ ಗ್ರೇಡ್ ಪಡೆದಿವೆ. ಗುಬ್ಬಿ ತಾಲ್ಲೂಕಿನಲ್ಲಿ 37, 20 ಹಾಗೂ 11 ಶಾಲೆಗಳು ಕ್ರಮವಾಗಿ ಎ, ಬಿ, ಸಿ ಗ್ರೇಡ್ ಗಳಿಸಿವೆ. ಕುಣಿಗಲ್ ತಾಲ್ಲೂಕಿನಲ್ಲಿ 21, 28 ಹಾಗೂ 19, ತಿಪಟೂರು ತಾಲ್ಲೂಕಿನಲ್ಲಿ 8, 26, 17 ಶಾಲೆಗಳು, ತುಮಕೂರು ತಾಲ್ಲೂಕಿನ 92, 42 ಹಾಗೂ 21 ಶಾಲೆಗಳು, ತುರುವೇಕೆರೆ ತಾಲ್ಲೂಕಿನ 18, 23 ಹಾಗೂ 14 ಶಾಲೆಗಳು ಕ್ರಮವಾಗಿ ಎ, ಬಿ ಹಾಗೂ ಸಿ ಗ್ರೇಡ್ ಗಳಿಸಿವೆ. ತುಮಕೂರು ಜಿಲ್ಲೆಯಲ್ಲಿ ಒಟ್ಟು 190 ಶಾಲೆಗಳು ಎ ಗ್ರೇಡ್, 167 ಶಾಲೆಗಳು ಬಿ ಗ್ರೇಡ್, 101 ಶಾಲೆಗಳು ಸಿ ಗ್ರೇಡ್ ಪಡೆದುಕೊಂಡಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link