ತುಮಕೂರು
ತುಮಕೂರು ವಿಶ್ವವಿದ್ಯಾನಿಲಯಕ್ಕೆ 2010-11 ನೇ ಸಾಲಿನಿಂದ 2018-19 ನೇ ಸಾಲಿನವರೆಗೆ ಒಟ್ಟು 9 ವರ್ಷಗಳ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಶೀರ್ಷಿಕೆಗಳಡಿಯಲ್ಲಿ ಒಟ್ಟು 18585.59 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ.
ನಗರದ ಆರ್.ಟಿ.ಐ. ಕಾರ್ಯಕರ್ತ ಇಮ್ರಾನ್ ಪಾಷ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ತುಮಕೂರು ವಿಶ್ವ ವಿದ್ಯಾನಿಲಯದ ಹಣಕಾಸು ಅಧಿಕಾರಿಗಳು ನೀಡಿರುವ ಮಾಹಿತಿ (ಸಂಖ್ಯೆ: ತುವಿ:ಹವಿ:ಮಾಹಿತಿ ಹಕ್ಕು 2019-20, ದಿನಾಂಕ: 01-02-2020)ಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
1)2010-11 ನೇ ಸಾಲಿನಲ್ಲಿ 1941.64 ಲಕ್ಷ ರೂ.; 2) 2011-12 ನೇ ಸಾಲಿನಲ್ಲಿ 1520.47 ಲಕ್ಷ ರೂ.; 3) 2012-13 ನೇ ಸಾಲಿನಲ್ಲಿ 1879.56 ಲಕ್ಷ ರೂ.; 4) 2013-14 ನೇ ಸಾಲಿನಲ್ಲಿ 2452.96 ಲಕ್ಷ ರೂ.; 5) 2014-15 ನೇ ಸಾಲಿನಲ್ಲಿ 2562.47 ಲಕ್ಷ ರೂ.; 6) 2015-16 ನೇ ಸಾಲಿನಲ್ಲಿ 2721.93 ಲಕ್ಷ ರೂ.; 7) 2016-17 ನೇ ಸಾಲಿನಲ್ಲಿ 421.73 ಲಕ್ಷ ರೂ.; 8) 2017-18 ನೇ ಸಾಲಿನಲ್ಲಿ 3068.83 ಲಕ್ಷ ರೂ.; 9) 2018-19 ನೇ ಸಾಲಿನಲ್ಲಿ 2016.00 ಲಕ್ಷ ರೂ. ಬಿಡುಗಡೆ ಆಗಿದೆ.
ಈ 9 ವರ್ಷಗಳ ಅವಧಿಯಲ್ಲಿ 2017-18 ನೇ ಸಾಲಿನಲ್ಲಿ ಮಾತ್ರ ಅತ್ಯಧಿಕ ಅಂದರೆ 30 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ. ಅಚ್ಚರಿಯೆಂಬಂತೆ 2016-17 ನೇ ಸಾಲಿನಲ್ಲಿ ಕೇವಲ 4 ಕೋಟಿ ರೂ. ಮಾತ್ರ ಬಿಡುಗಡೆ ಆಗಿದೆ.
ಕೇಂದ್ರದ ಅನುದಾನ
2010-11 ನೇ ಸಾಲಿನಲ್ಲಿ ಕೇಂದ್ರದಿಂದ 1 ಕೋಟಿ ರೂ. ಅನುದಾನ ಬಂದಿದ್ದರೆ, 2011-12 ಮತ್ತು 2012-13 ನೇ ಸಾಲುಗಳಲ್ಲಿ ಕೇಂದ್ರದ ಯಾವುದೇ ಅನುದಾನ ಲಭಿಸಿಲ್ಲ. 2013-14 ನೇ ಸಾಲಿನಲ್ಲಿ ಕೇಂದ್ರದಿಂದ ಅಂದರೆ ಯುಜಿಸಿ 11 ನೇ ಯೋಜನೆಯಡಿ 2 ಕೋಟಿ ಮತ್ತು ಯುಜಿಸಿ 12 ನೇ ಯೋಜನೆಯಡಿ 2 ಕೋಟಿ 80 ಲಕ್ಷ ರೂ. ಅನುದಾನ ದೊರೆತಿದೆ. 2014-15 ರಲ್ಲಿ ಕೇಂದ್ರ ಸರ್ಕಾರದಿಂದ ಯುಜಿಸಿ 6 ನೇ ವೇತನ ಶ್ರೇಣಿಯ ಹಿಂಬಾಕಿ ಪಾವತಿಗಾಗಿ 15 ಲಕ್ಷ 94 ಸಾವಿರ ರೂ. ಹಾಗೂ ಯುಜಿಸಿ 6 ನೇ ವೇತನ ಶ್ರೇಣಿಯ ಹಿಂಬಾಕಿ ಪಾವತಿಗಾಗಿ 41.53 ಲಕ್ಷ ರೂ.
ಬಿಡುಗಡೆ ಆಗಿದೆ. 2015-16 ನೇ ಸಾಲಿನಲ್ಲಿ ಯುಜಿಸಿ ಬಾಕಿ ವೇತನಕ್ಕಾಗಿ 59.50 ಲಕ್ಷ ರೂ., ಸಿಇ ಎಫ್.ಐ.ಪಿ.ಆರ್.ಎ. ಸಂಶೋಧನಾ ಕಾರ್ಯಕ್ರಮಕ್ಕಾಗಿ 36.29 ಲಕ್ಷ ರೂ., ಯುಜಿಸಿ ಸಂಶೋಧನೆಗಾಗಿ 1.71 ಲಕ್ಷ ರೂ., ವಿ.ಜಿ.ಎಸ್.ಟಿ. 4 ಲಕ್ಷ ರೂ., ಯುಜಿಸಿಯಿಂದ 14.43 ಲಕ್ಷ ರೂ. ಬಿಡುಗಡೆ ಆಗಿದೆ. 2016-17 ನೇ ಸಾಲಿನಲ್ಲಿ ಕೇಂದ್ರದಿಂದ ಹಣ ಬಿಡುಗಡೆ ಆಗಿಲ್ಲ. 2017-18 ನೇ ಸಾಲಿನಲ್ಲಿ ಕೇಂದ್ರದಿಂದ ಅರ್ಥಾತ್ ರೂಸಾದಿಂದ 865.42 ಲಕ್ಷ ರೂ., ಸಂಶೋಧನಾ ಕಾರ್ಯಕ್ರಮಗಳಿಗೆ 2 ಲಕ್ಷ ರೂ., ಐಸಿಎಸ್‍ಎಸ್‍ಆರ್ ಯೋಜನೆಗಳಿಗೆ 2.10 ಲಕ್ಷ ರೂ., ಎಸ್.ಇ.ಆರ್.ಬಿ. ಯೋಜನೆಗಳಿಗೆ 42.50 ಲಕ್ಷ ರೂ., ಐ.ಎಫ್.ಸಿ.ಪಿ.ಎ.ಆರ್. ಗೆ 4.56 ಲಕ್ಷ ರೂ., ಯು.ಜಿ.ಸಿ.ಯಲ್ಲಿ 1.69 ಲಕ್ಷ ರೂ., ನವದೆಹಲಿಯ ಮಹಿಳಾ ಅಧ್ಯಯನ ಕೇಂದ್ರದಿಂದ 6.96 ಲಕ್ಷ ರೂ. ಅನುದಾನ ಲಭಿಸಿದೆ. 2018-19 ನೇ ಸಾಲಿನಲ್ಲಿ ಕೇಂದ್ರದಿಂದ ಅನುದಾನ ಲಭಿಸಿಲ್ಲ.
ಮಿಕ್ಕ ಹಣವೆಲ್ಲ ರಾಜ್ಯದ್ದು
ಕೇಂದ್ರದ ಇಷ್ಟು ಹಣ ಬಿಟ್ಟರೆ ಈ 9 ವರ್ಷಗಳ ಅವಧಿಯಲ್ಲಿ ಲಭಿಸಿರುವ ಮಿಕ್ಕೆಲ್ಲ ಅನುದಾನವೂ ರಾಜ್ಯ ಸರ್ಕಾರದ್ದೇ ಆಗಿದೆ ಎಂಬ ಸಂಗತಿ ಈ ಮಾಹಿತಿಯಲ್ಲಿ ಬಹಿರಂಗವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ