ಚಿತ್ರದುರ್ಗ
ತುಂಗಾಭದ್ರಾ ಹಿನ್ನೀರಿನ ಯೋಜನೆಯಿಂದ ಜಿಲ್ಲೆಯ ಮೊಳಕಾಲ್ಮೂರು, ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿ ಮತ್ತು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿಗೆ ಕುಡಿಯುವ ನೀರು ಒದಗಿಸುವ ತುಂಗಾಭದ್ರಾ ಹಿನ್ನೀರು ಯೋಜನೆ ಕಾಮಗಾರಿ 2022 ರ ಮಾರ್ಚ್ ತಿಂಗಳಾಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.
ನಗರದ ಭದ್ರಾ ಮೇಲ್ದಂಡೆ ಯೋಜನೆಯ ಕಚೇರಿಯಲ್ಲಿ ಬುಧವಾರ ತುಂಗಾಭದ್ರಾ ಹಿನ್ನೀರಿನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಚಿತ್ರದುರ್ಗ, ಬಳ್ಳಾರಿ, ತುಮಕೂರು ಜಿಲ್ಲೆಗಳಿಗೆ ತುಂಗಭದ್ರಾ ಜಲಾಶಯದ ಹಿನ್ನೀರಿನಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ರೂ.2340 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, 2021 ರೊಳಗೆ ಈ ಯೋಜನೆ ಮುಕ್ತಾಯವಾಗಬೇಕಿತ್ತು. ಕೋವಿಡ್-19 ಸೋಂಕು ಕಾರಣದಿಂದ ಉಂಟಾದ ಲಾಕ್‍ಡೌನ್ ಮುಂತಾದ ಕಾರಣಗಳಿಗಾಗಿ ವಿಳಂಬವಾಗುತ್ತಿದೆ.
ಈಗಾಗಲೇ ಈ ಯೋಜನೆಯಡಿಯಲ್ಲಿ ಜಾಕ್‍ವೆಲ್ ಶೇ 30 ರಷ್ಟು ಮುಕ್ತಾಯವಾಗಿದೆ. ಯೋಜನೆಯ ವ್ಯಾಪ್ತಿಯೊಳಗೆ ಒಟ್ಟು 2300 ಕಿ.ಮೀ ಪೈಪ್‍ಲೈನ್ ಕಾಮಗಾರಿಯಲ್ಲಿ ಸುಮಾರು 1600 ಕಿ.ಮೀ ಪೈಪ್‍ಲೈನ್ ಕಾಮಗಾರಿ ಮುಕ್ತಾಯವಾಗಿದೆ. ಎಂ.ಎಸ್.ಪೈಪ್‍ಲೈನ್ ಇದು ಮೇಜರ್ ಪೈಪ್‍ಲೈನ್ ಆಗಿದ್ದು, ಇದು 321 ಕಿ.ಮೀ ಆಗಬೇಕಿದೆ. ಇದರಲ್ಲಿ ಶೇ 25 ರಷ್ಟು ಕಾಮಗಾರಿ ಮುಗಿದಿದೆ ಎಂದು ಹೇಳಿದರು.
ಕೂಡ್ಲಿಗಿ ಸಮೀಪ ವಾಟರ್ ಟ್ರೀಟ್‍ಮೆಂಟ್ ಪ್ಲಾಂಟ್ ಕಾಮಗಾರಿ ಶೇ 70 ರಷ್ಟು ಮುಗಿದಿದೆ. ಕುಡಿಯುವ ನೀರಿನ ಟ್ರೀಟ್‍ಮೆಂಟ್ ಪ್ಲಾಂಟ್ ಮುಖ್ಯವಾಗಿದ್ದು, ಟ್ರೀಂಟ್ ಪ್ಲಾಂಟ್ ಮಾಡಿ ನಂತರ ಹಳ್ಳಿಗಳಿಗೆ ನೀರು ಕಳಿಸಲಾಗುವುದು ಎಂದು ಹೇಳಿದರು. ತುಂಗಾಭದ್ರಾ ಡ್ಯಾಂ ಬೋರ್ಡ್ ಅಧ್ಯಕ್ಷರು, ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಎನ್‍ಒಸಿ (ನಿರಾಪೇಕ್ಷಣ ಪ್ರಮಾಣ ಪತ್ರ) ನೀಡಿಲ್ಲ. ಹಾಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಸಂಬಂಧಪಟ್ಟ ತಹಶೀಲ್ದಾರ್‍ಗಳು, ಅರಣ್ಯ ಇಲಾಖೆ ಅಧಿಕಾರಿಗಳು, ರಾಷ್ಟೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಎನ್‍ಒಸಿ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ಸಮಸ್ಯೆ ಇರುವ ಕಡೆ ಖುದ್ದು ಪರಿಶೀಲನೆ ನಡೆಸಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಗ್ರಾಮೀಣ ಕುಡಿಯುವ ನೈರ್ಮಲ್ಯ ಯೋಜನೆ ಚಿತ್ರದುರ್ಗ ಉಪವಿಭಾಗದ ಎಇಇ ದಯಾನಂದಸ್ವಾಮಿ, ಮೊಳಕಾಲ್ಮೂರು ಸೆಕ್ಷನ್ ಅಫೀಸರ್ ಪವನ್, ಚಳ್ಳಕೆರೆ ಉಪವಿಭಾಗದ ಎಇಇ ಕಾವ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ