ಪಾಲಿಕೆ: ಟಿ.ವಿ.ಸಿ. ಸದಸ್ಯ ಸ್ಥಾನಕ್ಕೆ ಬಿರುಸಿನ ಚುನಾವಣೆ

ತುಮಕೂರು
    ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರದ ಸೂಚನಾನುಸಾರ ಅಸ್ತಿತ್ವಕ್ಕೆ ಬರಲಿರುವ ಪಟ್ಟಣ ವ್ಯಾಪಾರಿಗಳ ಸಮಿತಿ (ಟೌನ್ ವೆಂಡರ್ಸ್ ಕಮಿಟಿ)ಗೆ ಸಂಬಂಧಿಸಿದಂತೆ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಮಿಕ್ಕ ಒಂದು ಸ್ಥಾನಕ್ಕಾಗಿ ಗುರುವಾರ ಬೆಳಗ್ಗೆ ಬಿರುಸಿನ ಚುನಾವಣೆ ನಡೆಯಿತು.
 
    ಐದು ವರ್ಷಗಳ ಅವಧಿಯ ಈ ಸಮಿತಿಯು ಒಟ್ಟು 10 ಸದಸ್ಯ ಬಲವನ್ನು ಹೊಂದಿದೆ. ಈ ಸಮಿತಿಗೆ ಈಗಾಗಲೇ 9 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಲ್ಪಸಂಖ್ಯಾತ ಕೋಟಾದಡಿ ಇರುವ ಒಂದು ಸ್ಥಾನಕ್ಕೆ ಬಾಬಾ, ಮಹಮದ್ ರಫೀಕ್, ಮೊಹಮದ್ ಸೌದ್ ಅಹಮದ್ ಮತ್ತು ವಸೀಂ ಅಕ್ರಂ ಎಂಬ ನಾಲ್ವರು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ಅನಿವಾರ್ಯವಾಯಿತು. ತುಮಕೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಚುನಾವಣಾಧಿಕಾರಿಗಳಾದ ತುಮಕೂರು ತಾಲ್ಲೂಕು ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ನಡೆಯಿತು. ತಿಲಕ್‍ಪಾರ್ಕ್ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ನವೀನ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನಗರ ಜೀವನೋಪಾಯ ಕೇಂದ್ರ(ನಲ್ಮ್)ದ ಸಿ.ಎ.ಓ. ರಾಮಾಂಜನಪ್ಪ ಮತ್ತು ಸಿಬ್ಬಂದಿ ವರ್ಗದವರು ಚುನಾವಣಾ ವ್ಯವಸ್ಥೆ ಮಾಡಿದ್ದರು. 
    ನಗರದ 2,224 ಬೀದಿಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆಯು ಗುರುತಿನ ಚೀಟಿ ನೀಡಿದ್ದು, ಅವರೆಲ್ಲರೂ ಈ ಚುನಾವಣೆಯ ಮತದಾರರಾಗಿದ್ದಾರೆ. ಪಾಲಿಕೆ ಕಚೇರಿಯಲ್ಲಿ ತೆರೆಯಲಾಗಿದ್ದ ಮೂರು ಮತಗಟ್ಟೆಗಳಲ್ಲಿ ಇವರೆಲ್ಲರೂ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸುತ್ತಿದ್ದುದು ಕಂಡುಬಂದಿತು. ಗುರುವಾರ ಮಧ್ಯಾಹ್ನ 12-30 ರ ಹೊತ್ತಿಗೆ ಈ ಮೂರೂ ಮತಗಟ್ಟೆಗಳಲ್ಲಿ ಒಟ್ಟಾರೆ 279 ಮತದಾರರು ಮತ ಚಲಾಯಿಸಿದ್ದುದು ಕಂಡುಬಂದಿತು.
ಅವಿರೋಧವಾಗಿ ಆಯ್ಕೆ
    ಪಟ್ಟಣ ವ್ಯಾಪಾರಿಗಳ ಸಮಿತಿಗೆ ಈಗಾಗಲೇ ಎನ್.ಮುತ್ತುರಾಜ್ (ಪರಿಶಿಷ್ಟ ಜಾತಿ), ಎಚ್.ಕೆ.ರವಿಕುಮಾರ್ (ಪರಿಶಿಷ್ಟ ಪಂಗಡ), ಎಂ.ಜಗದೀಶ್ (ಸಾಮಾನ್ಯ), ಟಿ.ಎಸ್.ರಾಜಶೇಖರ್ (ಸಾಮಾನ್ಯ), ಜಿ.ಜಗದೀಶ್ (ಹಿಂದುಳಿದ ವರ್ಗ), ಪಾರ್ವತಮ್ಮ (ಮಹಿಳಾ ಮೀಸಲು), ರಾಧಾ (ಮಹಿಳಾ ಮೀಸಲು), ಲಕ್ಷ್ಮೀ (ಮಹಿಳಾ ಮೀಸಲು) ಮತ್ತು ಅಂಬಿಕಾ (ವಿಕಲಚೇತನರು) ಅವರುಗಳು ಮೀಸಲು ಅನ್ವಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಲ್ಪಸಂಖ್ಯಾತರ ಮೀಸಲಿಗೆ ಸಂಬಂಧಿಸಿದಂತೆ ಈ ಚುನಾವಣೆ ನಡೆಯಿತು.

Recent Articles

spot_img

Related Stories

Share via
Copy link