ಕುಣಿಗಲ್.
ಪಟ್ಟಣದ ದೊಡ್ಡಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕರಿಬ್ಬರು ತೆಪ್ಪ ಮುಳುಗಿ ನೀರುಪಾಲಾಗಿದ್ದು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಅಗ್ನಿಶಾಮಕ ತಂಡ ಮತ್ತು ಪೊಲೀಸರು ಹಾಗೂ ಬೆಂಗಳೂರಿನ ಬೋಟ್ ತಂಡ ಶವಗಳ ಪತ್ತೆಗಾಗಿ ಹರಸಾಹಸ ಪಡುತ್ತಿವೆ.
ಡೊಡ್ಡಕೆರೆಯಲ್ಲಿ ಮೀನು ಹಿಡಿಯಲು ಬಲೆ ಬಿಟ್ಟಿದ್ದರಂತೆ ಶನಿವಾರ ತಡರಾತ್ರಿಯಲ್ಲಿಯೇ ಬಾಗೇನಹಳ್ಳಿ ವೆಂಕಟೇಶ (28) ಮತ್ತು ಕೊತ್ತಗೆರೆಯ ಆದಿಲ್‍ಪಾಷ ಎಂಬ ಇಬ್ಬರು ಸ್ನೇಹಿತರು ತೆಪ್ಪದಲ್ಲಿ ತೆರಳಿದ್ದಾರೆ. ಕೊತ್ತಗೆರೆ ಭಾಗದಿಂದ ಹೊರಟ ಇವರು ಕೆರೆಯಲ್ಲಿ ಸುಮಾರು 20 ಕೆ.ಜಿ.ಯಷ್ಟು ಮೀನು ಹಿಡಿದು ಹೌಸಿಂಗ್‍ಬೋರ್ಡ್‍ಕಡೆಯಲ್ಲಿ ಯಾರಿಗೊ ಕೊಟ್ಟು ಪುನಃ ಆ ಕಡೆಯಿಂದ ವಾಪಸ್ ಬರುವಾಗ ತೆಪ್ಪ ಮುಳುಗಡೆಯಾಗಿರಬಹುದೆಂದು ಈ ಯುವಕರ ಸ್ನೇಹಿತರು, ಗ್ರಾಮಸ್ಥರ ಊಹೆಯಾಗಿದೆ. ಇದರಲ್ಲಿ ವೆಂಕಟೇಶ್ ಎಂಬಾತ ಚೆನ್ನಾಗಿ ಈಜು ಬಲ್ಲವನಾಗಿದ್ದರೂ ಸಹ ಹೇಗೆ ನೀರು ಪಾಲಾದರು ಎಂಬುದೇ ಆಶ್ಚರ್ಯವಾಗಿದ್ದು ಆದಿಲ್‍ಪಾಷ ಎಂಬಾತನಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ.
ಬೆಳಗ್ಗೆ ವಿಚಾರ ತಿಳಿದ ಪೋಲೀಸರು ಕೆರೆಯ ಪರಿಶೀಲನೆಗೆ ಹೋದಾಗ ತೆಪ್ಪ ನಡೆಸುವ ಎರಡು ಹುಟ್ಟು ಮತ್ತು ಒಂದು ಬ್ಯಾಟರಿ ದೊರೆತಿದೆ. ಭಾನುವಾರ ಸಂಜೆಯ ವರೆಗೆ ಅಗ್ನಿಶಾಮಕ ತಂಡ ಮತ್ತು ಪೋಲೀಸರು ಹಾಗೂ ಬೆಂಗಳೂರಿನ ಬೋಟ್ ತಂಡ ಶವಗಳ ಪತ್ತೆಗಾಗಿ ಹರಸಾಹಸ ಪಟ್ಟರೂ ಪ್ರಯೋಜನವಾಗಿಲ್ಲ. ರಾತ್ರಿ ಆಗಿದ್ದರಿಂದ ನಾಳೆ ಮುಂದಿನ ಕಾರ್ಯಾಚರಣೆ ನಡೆಸುವುದಾಗಿ ಪೋಲೀಸ್ ವೃತ್ತ ನಿರೀಕ್ಷ ನಿರಂಜನ್‍ಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
