ಚಿತ್ರದುರ್ಗ:
ನೇತ್ರದಾನ ಮತ್ತು ರಕ್ತದಾನ ಇವೆರಡು ಅತ್ಯಂತ ಅಮೂಲ್ಯವಾದುದು. ಹಾಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಬೇಕಾಗಿದೆ. ಅದೇ ರೀತಿ ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಬೇಕೆಂದು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ತಿಳಿಸಿದರು.
ಈಶ್ವರ ಫೌಂಡೇಶನ್ ಭೀಮಸಮುದ್ರ ಹಾಗೂ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಶಾಖೆ, ಬಸವೇಶ್ವರ ರಕ್ತನಿಧಿ ಕೇಂದ್ರ ಇವರುಗಳ ಸಹಯೋಗದೊಂದಿಗೆ ಭೀಮಸಮುದ್ರದಲ್ಲಿ ಶನಿವಾರ ದಿವಂಗತ ಡಾ.ಈಶ್ವರಪ್ಪನವರ ಸ್ವಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ಶಸ್ತ್ರಚಿಕಿತ್ಸೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಯಾರಾದರೂ ಮರಣ ಹೊಂದಿದಾಗ ಕಣ್ಣನ್ನು ಮಣ್ಣು ಪಾಲು ಮಾಡುವ ಬದಲು ದಾನ ಮಾಡಿದರೆ ಅಂಧರಿಗೆ ಬೆಳಕು ನೀಡಿದಂತಾಗುತ್ತದೆ. ಅಪಘಾತ, ಹೆರಿಗೆ, ಆಪರೇಷನ್ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆಯಿರುವುದರಿಂದ ಪ್ರತಿಯೊಬ್ಬ ಆರೋಗ್ಯವಂತರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರೆ ಸಾವು-ಬದುಕಿನ ನಡುವೆ ಹೋರಾಟ ಮಾಡುವವರ ಜೀವ ಉಳಿಸಿದಂತಾಗುತ್ತದೆ ಎಂದು ಹೇಳಿದರು.
ಹದಿನೆಂಟರಿಂದ ಅರವತ್ತು ವರ್ಷ ವಯೋಮಿತಿಯುಳ್ಳ ಪುರುಷ ಮತ್ತು ಮಹಿಳೆ ಯಾರು ಬೇಕಾದರು ರಕ್ತದಾನ ಮಾಡಬಹುದು. ರಕ್ತದಲ್ಲಿ ಹಿಮೋಗ್ಲೋಬಿನ್ ಪರ್ಸೆಂಟ್ 12 ಗ್ರಾಂನಷ್ಟಿರಬೇಕು. ದೇಹದ ತೂಕ 45 ಕೆ.ಜಿ.ಗೂ ಹೆಚ್ಚಿರಬೇಕು ಎಂದು ಹೇಳಿದ ಸಂಸದರು ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆ ಕಡಿಮೆಯಾಗುತ್ತದೆ.
ಜ್ಞಾಪಕಶಕ್ತಿ ವೃದ್ದಿಯಾಗಿ ಮನೋಲ್ಲಾಸದಿಂದಿರಬಹುದು. ಒಬ್ಬರ ರಕ್ತದಿಂದ ನಾಲ್ವರ ಪ್ರಾಣ ಉಳಿಸಲು ಸಾಧ್ಯ. ರಕ್ತದಾನದಿಂದ ನಿಶ್ಯಕ್ತಿಯಾಗುತ್ತದೆ ಎಂಬ ತಪ್ಪು ಕಲ್ಪನೆ ಬೇಡ. ದೇಹದಲ್ಲಿ ಹೊಸ ರಕ್ತ ಕಣ ಉತ್ಪತ್ತಿಯಾಗಿ ಇನ್ನು ಚೈತನ್ಯವಾಗಿರಲು ಸಹಕಾರಿಯಾಗಲಿದೆ. ಹಾಗಾಗಿ ರಕ್ತದಾನದಿಂದ ಮನಷ್ಯನಿಗೆ ಅನುಕೂಲವೇ ಹೆಚ್ಚು ಎಂದರು.
ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಚೇರ್ಮನ್ ವೈ.ಬಿ.ಮಹೇಂದ್ರನಾಥ್ ಮಾತನಾಡಿ ಉಚಿತ ನೇತ್ರ ತಪಾಸಣೆ ಮತ್ತು ನೇತ್ರ ಶಸ್ತ್ರ ಚಿಕಿತ್ಸೆ ಶಿಬಿರದಿಂದ ಗ್ರಾಮೀಣ ಪ್ರದೇಶದ ಹಿಂದುಳಿದ ಬಡವರಿಗೆ ಹೆಚ್ಚು ಪ್ರಯೋಜನವಾಗಲಿದೆ. ಚಿಕ್ಕ ಮಕ್ಕಳು ಮತ್ತು ದೊಡ್ಡವರು ಹೀಗೆ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಕಣ್ಣಿನ ದೃಷ್ಟಿಯಲ್ಲಿ ತೊಂದರೆ ಇರುವುದು ಸಹಜ. ನಿರ್ಲಕ್ಷೆ ವಹಿಸಬೇಡಿ. ಕೊಂಡ್ಲಹಳ್ಳಿಯ ನೇತ್ರ ತಜ್ಞ ನಾಗರಾಜ್ ಮತ್ತು ತಂಡದವರು ಉಚಿತವಾಗಿ ತಪಾಸಣೆ ನಡೆಸಿ ಶಸ್ತ್ರಚಿಕಿತ್ಸೆ ಮಾಡುವರು ಇದರ ಅನಕೂಲ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಗಾಯತ್ರಿ ಸಿದ್ದೇಶ್ವರ, ಜಗದೀಶ್, ವಿನಯ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಮಜರುಲ್ಲಾ, ಖಜಾಂಚಿ ಅರುಣ್‍ಕುಮಾರ್, ನಿರ್ದೇಶಕ ಮಳಲಿ ಶ್ರೀನಿವಾಸ್, ಶಿವರಾಂ, ಬಿ.ಸಿ.ಸರಸ್ವತಿ, ಕಾಂಗ್ರೆಸ್ ಮುಖಂಡರಾದ ಭೀಮಸಮುದ್ರದ ಜಿ.ಎಸ್.ಮಂಜುನಾಥ್, ಬಿ.ಟಿ.ಪುಟ್ಟಪ್ಪ, ದಾವಣಗೆರೆ ಜಿ.ಪಂ.ಅಧ್ಯಕ್ಷೆ ಶೈಲಜಾ ಇನ್ನು ಮುಂತಾದವರು ಶಿಬಿರದಲ್ಲಿ ಭಾಗವಹಿಸಿದ್ದರು.
ನೂರಕ್ಕು ಹೆಚ್ಚು ಮಂದಿಗೆ ನೇತ್ರ ತಪಾಸಣೆ ನಡೆಸಲಾಯಿತು. ಅರವತ್ತರಿಂದ ಎಪ್ಪತ್ತು ಮಂದಿ ರಕ್ತದಾನ ಮಾಡಿದರು.