ತುಮಕೂರು

ವಿಶೇಷ ವರದಿ: ರಾಕೇಶ್.ವಿ.
ರಾಜ್ಯದ ರಾಜಧಾನಿಯಲ್ಲಿ ನಿರ್ಮಾಣವಾಗಬೇಕಾದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಬೆಂಗಳೂರು ವಿಭಾಗೀಯ ಮಟ್ಟದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತುಮಕೂರಿನಲ್ಲಿ ಸ್ಥಾಪನೆಯಾಗಿದೆ. ಸುಮಾರು 3 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಈ ಆಸ್ಪತ್ರೆಗೆ ಉದ್ಘಾಟನಾ ಭಾಗ್ಯ ಕೂಡಿ ಬಂದಿಲ್ಲ.
ನಗರದ 3ನೇ ವಾರ್ಡ್‍ಗೆ ಸೇರಿದ ಅರಳಿಮರದಪಾಳ್ಯದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಬೆಂಗಳೂರು ವಿಭಾಗೀಯ ಮಟ್ಟದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡ ಸುಸಜ್ಜಿತವಾಗಿ, ಅಂದವಾಗಿ ನಿರ್ಮಾಣ ಮಾಡಲಾಗಿದೆ. ಕಳೆದ 2018 ಮಾರ್ಚ್ ತಿಂಗಳಲ್ಲಿಯೇ ಈ ಕಾಮಗಾರಿ ಪೂರ್ಣಗೊಂಡಿದೆ. ಈ ಕಾಮಗಾರಿಯನ್ನು ಗೃಹ ಮಂಡಳಿಯವರು ನೆರವೇರಿಸಿದ್ದು, ಅದು ಇನ್ನೂ ಪಶುವೈದ್ಯ ಇಲಾಖೆಗೆ ಹಸ್ತಾಂತರವಾಗಿಲ್ಲದಿರುವುದು ಇದಕ್ಕೆ ಕಾರಣ ಎನ್ನುತ್ತವೆ ಮೂಲಗಳು.
2018ರಲ್ಲಿ ವಿಧಾನಸಭಾ ಚುನಾವಣೆ ಅದಾದ ನಂತರ ಸ್ಥಳೀಯ ಸಂಸ್ಥೆಗಳ ಚುನಾವಣೆ, ಲೋಕಸಭಾ ಚುನಾವಣೆ ಹೀಗೆ ಒಂದರ ಮೇಲೊಂದು ಚುನಾವಣೆಗಳು ಬಂದು ನೀತಿ ಸಂಹಿತೆ ಇದ್ದದ್ದರಿಂದ ಕಟ್ಟಡದ ಉದ್ಘಾಟನೆ ನೆರವೇರಿಸಲಾಗಿಲ್ಲ. ಅಲ್ಲದೆ ಕಳೆದ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ಆಲೋಚನೆಯಿಂದ ಬೆಂಗಳೂರಿನಲ್ಲಿ ನಿರ್ಮಿಸಬೇಕಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ತುಮಕೂರಿನಲ್ಲಿ ನಿರ್ಮಾಣ ಮಾಡುವಂತಾಯಿತು.
ಆದರೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಒಂದೂವರೆ ವರ್ಷವಾದರೂ ಇಲ್ಲಿಯವರೆಗೆ ಅದರ ಬಗ್ಗೆ ಪಶುಇಲಾಖೆಯ ಆಯುಕ್ತಾರಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ ಗಮನ ಹರಿಸಿಲ್ಲದಿರುವುದು ಶೋಚನೀಯವಾಗಿದೆ.
2013ರಲ್ಲಿ ತುಮಕೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಜಿ.ಎಂ.ನಾಗರಾಜು ಅವರು ಸೇವೆ ಸಲ್ಲಿಸುತ್ತಿದ್ದಾಗ, ತುಮಕೂರು ಸೇರಿದಂತೆ ಈ ಭಾಗದ ಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಈ ಆಸ್ಪತ್ರೆಯನ್ನು ಇಲ್ಲಿ ನಿರ್ಮಾಣ ಮಾಡಲಾಯಿತು. ಆದರೆ ಇಂದು ಈ ಕಟ್ಟಡ ಉದ್ಘಾಟನೆಯಾಗದೆ ಧೂಳು ಆವರಿಸಿಕೊಂಡು ಬೂತಬಂಗಲೆಯಂತಾಗಿದೆ.
ಎಂಟು ಜಿಲ್ಲೆಗೆ ಒಂದು ಆಸ್ಪತ್ರೆ
ಕರ್ನಾಟಕ ರಾಜ್ಯದಲ್ಲಿ ಒಟ್ಟು ನಾಲ್ಕು ವಿಭಾಗಗಳಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗಿದೆ. ಬೆಂಗಳೂರು, ಕಲ್ಬುರ್ಗಿ, ಬೆಳಗಾವಿ ಹಾಗೂ ಮೈಸೂರು ಒಟ್ಟು ನಾಲ್ಕು ವಿಭಾಗಗಳನ್ನಾಗಿ ಮಾಡಿ ಎಂಟು ಜಿಲ್ಲೆಗೆ ಒಂದರಂತೆ ಈ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಈ ಎಂಟು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಿರ್ಮಾಣ ಮಾಡಬೇಕಿತ್ತು. ಈ ಬೆಂಗಳೂರು ವಿಭಾಗವನ್ನು ತುಮಕೂರಿಗೆ ವರ್ಗಾಯಿಸಿ ಇಲ್ಲಿ ನಿರ್ಮಾಣ ಮಾಡಲಾಗಿದೆ.
ಹಲವು ಬಾರಿ ಮನವಿ ಸಲ್ಲಿಕೆ
ನೂತನ ಕಟ್ಟಡದಲ್ಲಿ ಸೇವೆ ಆರಂಭಿಸುವ ಸಲುವಾಗಿ, ಉಪಕರಣಗಳು, ಸಲಕರಣೆಗಳು, ತಜ್ಞರು ಹಾಗೂ ಸಿಬ್ಬಂದಿ ನೇಮಕಾತಿ ಜೊತೆಗೆ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಜರುಗಿಸಲು ಬೆಂಗಳೂರಿನ ಪಶುಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಜೊತೆಗೆ ಇನ್ನಿತರ ಕ್ರಮಗಳನ್ನು ಜರುಗಿಸಿ ಸೂಕ್ತ ವೈದ್ಯರನ್ನು ಒದಗಿಸಲು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ,
ವೈದ್ಯರ ನಿಯೋಜನೆ ಮಾಡಿ ಔಷಧಿಗಳನ್ನು ಒದಗಿಸಿ
ಪರ್ಯಾಯವಾಗಿ ಕೆಲಸ ಪ್ರಾರಂಭ ಮಾಡುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ವೈದ್ಯರುಗಳನ್ನು ನಿಯೋಜಿಸಿ ಔಷಧಿಗಳನ್ನು ಪೂರೈಕೆ ಮಾಡಿ ಚಿಕಿತ್ಸಾ ಕಾರ್ಯವನ್ನು ಆರಂಭಿಸಬೇಕಿದೆ. ಈ ಕಾರ್ಯವನ್ನು ಮಾಡಿದರೆ ಆ ಕಟ್ಟಡಲ್ಲಿ ನಡೆಯುತ್ತಿರುವ ಅನೈತಿಕ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬಹುದಾಗಿದೆ ಎಂಬುದು ಕೆಲ ಹಿರಿಯರ ಸಲಹೆಯಾಗಿದೆ.
ಚಿಕಿತ್ಸೆಗಾಗಿ ಅಧ್ಯಯನ
ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕರ ಆದೇಶದಂತೆ ಮದ್ರಾಸ್ ಪಶುವೈದ್ಯಕೀಯ ಆಸ್ಪತ್ರೆ ಹಾಗೂ ಹಾಸನದ ವೈದ್ಯಕೀಯ ಆಸ್ಪತ್ರೆಗೆ ಜಿ.ಎಂ.ನಾಗರಾಜು ನೇತೃತ್ವದಲ್ಲಿ ವಿವಿಧ ವೈದ್ಯರ ಜೊತೆಯಲ್ಲಿ ತಂಡ ರಚನೆ ಮಾಡಿಕೊಂಡು ವೈದ್ಯಕೀಯ ಚಿಕಿತ್ಸೆಗಳ ಬಗ್ಗೆ ಅಧ್ಯಯನ ಮಾಡಿ ಇಲ್ಲಿನ ನೂತನ ಆಸ್ಪತ್ರೆಗೆ ಬೇಕಾಗುವಂತಹ ಸಲಕರಣೆಗಳ ಬಗ್ಗೆ ಆಯುಕ್ತರಿಗೆ ವರದಿ ಸಲ್ಲಿಸಲಾಗಿತ್ತು ಎಂದು ಇಲಾಖಾ ಮೂಲಗಳು ತಿಳಿಸಿವೆ.
ಉದ್ಘಾಟನೆಗೂ ಮುನ್ನವೇ ಬಿರುಕುಬಿಟ್ಟ ಗೋಡೆ

ಅರಳಿಮರದಪಾಳ್ಯದಲ್ಲಿ ನಿರ್ಮಾಣ ಮಾಡಲಾದ ಪಶುಇಲಾಖೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇನ್ನೂ ಉದ್ಘಾಟನೆಯೇ ಆಗಿಲ್ಲ. ಜೊತೆಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡು ಕೇವಲ ಒಂದೂವರೆ ವರ್ಷ ಆಗುವುದರೊಳಗೆ ಕಾಂಪೌಂಡ್ ಗೋಡೆ ಬಿರುಕು ಬಿಟ್ಟಿದೆ. ಇದರಿಂದ ಯಾವಗ ಈ ಗೋಡೆ ಬೀಳುತ್ತದೆ ಎಂಬ ಆತಂಕ ಸ್ಥಳೀಯರಲ್ಲಿ ಮೂಡಿದೆ.
ಸ್ಮಾರ್ಟ್ ಸಿಟಿ ಅಧಿಕಾರಿಗಳು ಸಹಕರಿಸಲಿ
ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ತುಮಕೂರು ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಸ್ಮಾರ್ಟ್ ಸಿಟಿಯಲ್ಲಿ ಜನರಿಗೆ ಅನುಕೂಲವಾಗುವಂತೆ ಸರ್ಕಾರಿ ಆಸ್ಪತ್ರೆ ಸೇರಿದಂತೆ ನಗರದ ಸ್ವಚ್ಛತೆಗಾಗಿ ಹೆಚ್ಚಿನದಾಗಿ ವೆಚ್ಚ ಮಾಡಲಾಗುತ್ತಿದೆ. ಅದರ ಜೊತೆಗೆ ಪಶು ಇಲಾಖೆಯ ಆಸ್ಪತ್ರೆಗೂ ಅನುದಾನ ಒದಗಿಸಿದರೆ ಪಶುಗಳಿಗೆ, ಸಾಕು ಪ್ರಾಣಿಗಳಿಗೆ ಅನುಕೂಲವಾಗಲಿದೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಕೊಂಚ ಗಮನಿಸಿದರೆ ಮೂಕ ಪ್ರಾಣಿಗಳಿಗೆ ಅನುಕೂಲಮಾಡಿಕೊಟ್ಟಂತಾಗುತ್ತದೆ ಎಂಬುದು ಕೆಲ ಅಧಿಕಾರಿಗಳ ಅಭಿಪ್ರಾಯವಾಗಿದೆ.
ನಗರದ ಅರಳಿಮರದಪಾಳ್ಯದಲ್ಲಿ ದೊಡ್ಡದಾದ ಆಸ್ಪತ್ರೆಯ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ಆದರೆ ಇಂದಿನವರೆಗೆ ಅದಕ್ಕೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಕಟ್ಟಡದ ಸುತ್ತಲಿನಲ್ಲಿ ಗಿಡಮರಗಳು ಬೆಳೆದಿವೆ. ಇದರಿಂದ ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಸುಳಿಯುವುದೇ ಇಲ್ಲ. ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ಬಗ್ಗೆ ಗಮನ ಹರಿಸಿ ಆದಷ್ಟು ಬೇಗ ಆಸ್ಪತ್ರೆ ಉದ್ಘಾಟನೆ ಮಾಡಿ ಅಕ್ಕಪಕ್ಕದ ಹಳ್ಳಿಯವರಿಗೆ ಅನುಕೂಲ ಮಾಡಿಕೊಡಲಿ.
ಶಿವಣ್ಣ, ಸ್ಥಳೀಯ ನಿವಾಸಿ
ನೂತನವಾದ ಆಸ್ಪತ್ರೆ ಕಟ್ಟಡ ಗೃಹಮಂಡಳಿಯವರು ನಿರ್ಮಾಣ ಮಾಡಿದ್ದು, ಅದು ನಮ್ಮ ಇಲಾಖೆಗೆ ಇನ್ನೂ ಹಸ್ತಾಂತರ ಮಾಡಿಲ್ಲ. ಅದು ಹಸ್ತಾಂತರ ಆಗುವವರೆಗೂ ಅದರ ನಿರ್ವಹಣೆ ಕೂಡ ಗೃಹ ಮಂಡಳಿಯವರ ಕಾರ್ಯವಾಗಿದೆ. ವಿವಿಧ ಚುನಾವಣೆಗಳು, ನೀತಿ ಸಂಹಿತೆ ಇದ್ದ ಕಾರಣದಿಂದ ಉದ್ಘಾಟನೆ ಮಾಡಲಾಗಿಲ್ಲ. ಈ ಆಸ್ಪತ್ರೆಗೆ ಸೂಕ್ತ ಸಲಕರಣೆಗಳನ್ನು ಒದಗಿಸಿ, ತಜ್ಞ ವೈದ್ಯರನ್ನು ನೇಮಿಸುವಂತೆ ಪಶುವೈದ್ಯ ಇಲಾಖೆಯ ಆಯುಕ್ತರಿಗೆ ಮನವಿ ಮಾಡಲಾಗಿದೆ.
ಡಾ.ಎಲ್.ಪ್ರಕಾಶ್, ಉಪನಿರ್ದೇಶಕರು, ಪಶುವೈದ್ಯ ಇಲಾಖೆ
ನಗರದ 3ನೇ ವಾರ್ಡ್‍ನಲ್ಲಿ ನಿರ್ಮಿಸಲಾದ ಪಶು ಆಸ್ಪತ್ರೆಯು ಉದ್ಘಾಟನೆ ಆಗದೆ ಇರುವುದರ ಬಗ್ಗೆ ಹಲವು ದೂರುಗಳು ಬಂದಿವೆ. ಈ ಸಂಬಂಧ ಇಲಾಖೆಯ ಉಪನಿರ್ದೇಶಕರ ಬಳಿಯೂ ಮಾತನಾಡಿದ್ದೇನೆ. ಆಸ್ಪತ್ರೆಗೆ ಸಿಬ್ಬಂದಿ ಹಾಗೂ ತಜ್ಞ ವೈದ್ಯರ ನೇಮಕಾತಿಗಾಗಿ ರಾಜ್ಯ ಆಯುಕ್ತರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಆದಷ್ಟು ಬೇಗ ಈ ಕಟ್ಟಡದ ಉದ್ಘಾಟನೆ ಮಾಡಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ.
ಲಕ್ಷ್ಮೀನರಸಿಂಹರಾಜು, ಪಾಲಿಕೆ ಸದಸ್ಯರು, 3ನೇ ವಾರ್ಡ್
