ತುಮಕೂರು
ನಗರದ ಕೋಡಿ ವೃತ್ತದಲ್ಲಿ ನಾಲ್ಕು ತಿಂಗಳಿನಿಂದ ನಡೆದಿರುವ ಒಳಚರಂಡಿ ಕಾಮಗಾರಿ ಮುಗಿಯಲು ಇನ್ನೂ ಒಂದು ತಿಂಗಳು ಬೇಕು. ಅಲ್ಲಿಯವರೆಗೂ ವಾಹನ ಸವಾರರು ಕಿರಿಕಿರಿ ಅನುಭವಿಸಬೇಕಾಗಿದೆ. ಇಲ್ಲಿ ಬಂಡೆ ಮೇಲೆ ರಸ್ತೆ ನಿಮಾಣ ಮಾಡಿದ್ದು, ಪೈಪ್‍ಲೈನ್ ಅಳವಡಿಸಲು ಬೃಹತ್ ಬಂಡೆ ಒಡೆಯಬೇಕಾದ ಕಾರಣಕ್ಕೆ ಕಾಮಗಾರಿ ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋತಿ ತೋಪು ಭಾಗದಿಂದ ಕೋಡಿ ವೃತ್ತ, ಗಾರ್ಡನ್ ರಸ್ತೆ, ಬಿ ಹೆಚ್ ರಸ್ತೆವರೆಗೆ ಹೊಸದಾಗಿ ಒಳಚರಂಡಿಯ ಪೈಪ್‍ಲೈನ್ ಅಳವಡಿಕೆ ಕಾಮಗಾರಿ ಆಮೆಗತಿಯಲ್ಲಿ ಮುಂದುವರೆದಿದೆ. ಯಾವುದೂ ಪೂರ್ಣಗೊಂಡಿಲ್ಲ. ಕೋಡಿ ವೃತ್ತದಲ್ಲಿ ರಸ್ತೆ ಕತ್ತರಿಸಿ ಪೈಪ್ ಅಳವಡಿಸಲಾಗುತ್ತಿದೆ. ಕಾಮಗಾರಿಗಾಗಿ ಸುಮಾರು ಮೂರು ತಿಂಗಳಿನಿಂದ ಶಿರಾ ಗೇಟ್ ರಸ್ತೆಯನ್ನು ಬಂದ್ ಮಾಡಿ ಈ ಮಾರ್ಗದ ವಾಹನಗಳು ಕೆರೆಯ ಮೇಲ್ಸೇತುವೆ ಮೇಲೆ ಸಾಗಲು ಅವಕಾಶ ಮಾಡಲಾಗಿದೆ. ಕಿರಿದಾದ ಈ ರಸ್ತೆಯಲ್ಲಿ ವಾಹನ ಸಂಚಾರ ಕಿರಿಕಿರಿ ತಪ್ಪಿದ್ದಲ್ಲ. ಕಾಮಗಾರಿ ವಿಳಂಬಕ್ಕೆ ಪೈಪ್‍ಲೈನ್ ಮಾರ್ಗದಲ್ಲಿ ದೊಡ್ಡ ಬಂಡೆ ಅಡ್ಡವಾಗಿರುವುದು ಕಾರಣ. ಈ ಬಂಡೆ ಸೀಳಿ ಪೈಪ್ ಅಳವಡಿಸಲಾಗುತ್ತಿದೆ.
ಡೈನಮೆಂಟ್ ಇಟ್ಟು ಬಂಡೆಯನ್ನು ಒಮ್ಮೆಗೆ ಬ್ಲಾಸ್ಟ್ ಮಾಡಬಹುದಿತ್ತು. ಇದರಿಂದ ಪಕ್ಕದಲ್ಲಿರುವ ಬೃಹದೆತ್ತರದ ಆಂಜನೇಯ ಮೂರ್ತಿ, ಆಂಜನೇಯ ದೇವಸ್ಥಾನ, ಕೋಡಿ ಬಸವೇಶ್ವರ ಸ್ವಾಮಿ ದೇವಸ್ಥಾನ ಧಕ್ಕೆ ಆಗಬಹುದಾಗಿರುವುದರಿಂದ ನಿಧಾನಗತಿಯಲ್ಲಿ ಬಂಡೆ ಬಿಡಿಸಿ ತೆಗೆಯುವ ಕಾರಣದಿಂದಾಗಿ ಕೆಲಸ ವಿಳಂಬವಾಗುತ್ತದೆ ಎಂದು ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಈರಣ್ಣ ಹೇಳಿದರು.
ಬಂಡೆ ಒಡೆದು ಕಾಲುವೆ ನಿರ್ಮಾಣದ ಬಹುತೇಕ ಕೆಲಸ ಮುಗಿದಿದ್ದು ಇನ್ನೊಂದು ತಿಂಗಳಲ್ಲಿ ಪೈಪ್‍ಲೈನ್ ಅಳವಡಿಸಿ, ರಸ್ತೆಯನ್ನು ಸುಸ್ಥಿತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.
ಈ ಭಾಗದ ಒಳಚರಂಡಿ ಪೈಪ್‍ಲೈನ್ ಸುಸ್ಥಿತಿಯಲ್ಲಿರಲಿಲ್ಲ, ಹೀಗಾಗಿ ಪದೇ ಪದೆ ಚರಂಡಿ ಹಿಂದಿನ ಮಾರ್ಗದ ಮ್ಯಾನ್ ಹೋಲ್‍ಗಳು ತುಂಬಿ ಹೊರಗೆ ಹರಿದು ಅವ್ಯವಸ್ಥೆ ಉಂಟಾಗುತ್ತಿತ್ತು. ಇನ್ನು ಮುಂದೆ ಸಮಸ್ಯೆ ಬಗೆಹರಿಯುತ್ತದೆ ಎನ್ನಲಾಗಿದೆ.