ರಸ್ತೆ ಅಪಘಾತಗಳಿಗೆ ನಿರ್ಲಕ್ಷ್ಯವೇ ಮೂಲ ಕಾರಣ
ತುಮಕೂರು
ರಸ್ತೆ ಅಪಘಾತ ಪ್ರಕರಣಗಳ ಸಂಖ್ಯೆಯಲ್ಲಿ ತುಮಕೂರು ಜಿಲ್ಲೆ ಇಡೀ ರಾಜ್ಯದಲ್ಲೇ ಅಗ್ರಸ್ಥಾನದಲ್ಲಿದೆಯೆಂದು ಆತಂಕ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಆಯುಕ್ತ ಎನ್.ಶಿವಕುಮಾರ್, ರಸ್ತೆ ಅಪಘಾತಗಳು ಸಂಭವಿಸಲು ವಾಹನ ಚಾಲಕರು ಮತ್ತು ಪಾದಚಾರಿಗಳ ನಿರ್ಲಕ್ಷ್ಯವೇ ಮೊದಲನೆಯ ಹಾಗೂ ಮೂಲ ಕಾರಣವಾಗಿದೆ ಎಂದು ವಿಶ್ಲೇಷಿಸಿದರು.
ಅವರು ಗುರುವಾರ ಬೆಳಗ್ಗೆ ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಜಿಲ್ಲಾಡಳಿತ ಮತ್ತು ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ತೆರೆಯಲಾಗಿರುವ “ರಸ್ತೆಸುರಕ್ಷತಾ ಜಾಗೃತಿ ಕೇಂದ್ರ”ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಡೀ ದೇಶದಲ್ಲಿ ದಿಗಿಲು ಮೂಡಿಸುವಷ್ಟು ರಸ್ತೆ ಅಪಘಾತಗಳು ಹಾಗೂ ಅದರಿಂದ ಸಾವು-ನೋವುಗಳು ಉಂಟಾಗುತ್ತಿವೆ ಯೆಂಬುದು ಆತಂಕಕಾರಿಯಾಗಿದೆ. ಅದೇ ರೀತಿ ತುಮಕೂರು ಜಿಲ್ಲೆಯು ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆಯೆಂಬುದು ಸಂತೋಷಪಡುವ ವಿಚಾರವಲ್ಲ. ಇದೊಂದು ಗಂಭೀರ ಸಂಗತಿ ಎಂದ ಅವರು, ರಸ್ತೆ ಅಪಘಾತಕ್ಕೆ ಮೊದಲನೇ ಕಾರಣ ಚಾಲಕರು-ಸವಾರರು ಮತ್ತು ಪಾದಚಾರಿಗಳು ಸಂಚಾರ ನಿಯಮಗಳನ್ನು ನಿರ್ಲಕ್ಷಿಸುತ್ತಿರುವುದು ಎಂಬುದು ನಿಚ್ಚಳವಾಗಿದೆ. ರಸ್ತೆಗಳ ದುಸ್ಥಿತಿ ಇತ್ಯಾದಿ ವಿಷಯಗಳೆಲ್ಲ ಆನಂತರದ ಕಾರಣಗಳಾಗಿವೆ ಎಂದು ಸ್ಪಷ್ಟಪಡಿಸಿದರು.
ಮನೆಯೊಳಗಷ್ಟೇ ಸಂಭಾವಿತರು
ಭಾರತೀಯರಾದ ನಾವು ನಮ್ಮ ಮನೆಯೊಳಗೆ ತುಂಬ ಸಂಭಾವಿತರು. ಯಾರು ಬಂದರೂ ಸಂಭಾವಿತರಾಗಿ ನಡೆದುಕೊಳ್ಳುತ್ತೇವೆ. ಆದರೆ ನಾವು ಮನೆಯಿಂದ ಹೊರಗೆ ಸಾರ್ವಜನಿಕ ಸ್ಥಳಕ್ಕೆ ಬಂದೊಡನೆ ಈ ಸಂಭಾವಿತತನವನ್ನು ಮರೆತುಬಿಡುತ್ತಿದ್ದೇವೆ. ಇದಕ್ಕೆ ಸಂಚಾರ ನಿಯಮಗಳ ಉಲ್ಲಂಘನೆಯೇ ಉದಾಹರಣೆಯಾಗಿದೆ. ಅದೇ ರೀತಿ ಇಂದು ತಾಂತ್ರಿಕ ಸೌಲಭ್ಯಗಳು ದಿನೇದಿನೇ ಮೇಲ್ದರ್ಜೆಗೇರುತ್ತಿದ್ದರೂ, ಮೊಬೈಲ್‍ನಂತಹ ಸೌಲಭ್ಯಗಳು ದೊರೆತಿದ್ದರೂ, ಇವಾವುದರಿಂದಲೂ ನಮ್ಮ ನಡವಳಿಕೆ ಸುಧಾರಣೆಗೊಂಡಿಲ್ಲ. ಬದಲಾಗಿ ಮತ್ತಷ್ಟು ನಿರಾಶಾದಾಯಕವಾಗುತ್ತಿದೆ. ಸಂಚಾರ ನಿಯಮಗಳ ಉಲ್ಲಂಘನೆಯಲ್ಲಿ ಇದೂ ಸಹ ಮತ್ತೊಂದು ಕಾರಣವಾಗಿದೆ ಎಂದು ವಿಶ್ಲೇಷಿಸಿದರು.
ಶೇ.90 ಅಪಘಾತ ನಿರ್ಲಕ್ಷ್ಯದಿಂದ
ರಸ್ತೆ ಸುರಕ್ಷತಾ ನಿಯಮಗಳಿರುವುದು ನಮಗಾಗಿ. ಆದರೆ ನಾವು ಅದನ್ನರಿಯದೆ ನಿಸ್ಸೀಮ ನಿರ್ಲಕ್ಷ್ಯ ತಾಳುತ್ತಿದ್ದೇವೆ. ಎದುರಿಗೆ ಸಂಚಾರ ವಿಭಾಗದ ಪೊಲೀಸರಿದ್ದರೆ ಮಾತ್ರ ನಾವು ನಿಯಮ ಪಾಲಿಸುತ್ತೇವೆ. ಇಲ್ಲದಿದ್ದರೆ ನಿಯಮಗಳನ್ನು ಸಲೀಸಾಗಿ ಗಾಳಿಗೆ ತೂರಿಬಿಡುತ್ತೇವೆ. ಶೇ. 90 ರಷ್ಟು ಅಪಘಾತಗಳು ಚಾಲಕರ-ಸವಾರರ ನಿರ್ಲಕ್ಷ್ಯದಿಂದಾಗುತ್ತಿವೆ ಎಂಬುದನ್ನು ಗಮನಿಸಬೇಕು. ಹೀಗೆ ಅತಿದೊಡ್ಡ ಪ್ರಮಾಣದಲ್ಲಿ ಕಾನೂನು ಉಲ್ಲಂಘನೆಯಾಗುತ್ತಿರುವುದರಿಂದ, ಸಂಚಾರ ನಿಯಮಗಳನ್ನು ಜಾರಿಗೆ ತರುವುದು ಪೊಲೀಸರಿಗೂ ತ್ರಾಸದಾಯಕವಾಗುತ್ತಿದೆ. ಇದನ್ನರಿತು ನಮ್ಮ-ನಮ್ಮ ವೈಯಕ್ತಿಕ ಸುರಕ್ಷತೆಗಾಗಿ ಹಾಗೂ ಇತರರ ಸುರಕ್ಷತೆಗಾಗಿ ನಾವು ಇನ್ನಾದರೂ ರಸ್ತೆ ಸುರಕ್ಷತಾ ನಿಯಮಗಳನ್ನು ಸ್ವಯಂಪ್ರೇರಣೆಯಿಂದ ಕಟ್ಟುನಿಟ್ಟಾಗಿ ಪಾಲಿಸುವುದನ್ನು ಕಲಿಯಬೇಕು ಎಂದು ಎನ್.ಶಿವಕುಮಾರ್ ಒತ್ತಿ ಹೇಳಿದರು.
ಕರ್ನಾಟಕದ ಜನಸಂಖ್ಯೆ ಆರೂವರೆ ಕೋಟಿಯಷ್ಟಿದೆ. ಆದರೆ ಕರ್ನಾಟಕದಲ್ಲಿರುವ ವಾಹನಗಳ ಸಂಖ್ಯೆ ಎರಡೂಕಾಲು ಕೋಟಿಯಷ್ಟಿದೆ. ಇದರಲ್ಲಿ ಒಂದೂವರೆ ಕೋಟಿಯಷ್ಟು ದ್ವಿಚಕ್ರ ವಾಹನಗಳೇ ಇವೆ. ಇವುಗಳಿಂದಲೇ ಇಂದು ಅನಾಹುತಗಳು ಅಧಿಕವಾಗಿ ಸಂಭವಿಸುತ್ತಿವೆ. ಸಾವು-ನೋವಿಗೆ ಒಳಗಾಗುವವರಲ್ಲಿ ದ್ವಿಚಕ್ರ ವಾಹನಗಳವರು ಮತ್ತು ಪಾದಚಾರಿಗಳೇ ಹೆಚ್ಚಾಗಿದ್ದಾರೆ ಎಂದು ಅಂಕಿ-ಅಂಶಗಳನ್ನು ಮುಂದಿಟ್ಟರು.
ತುಮಕೂರು ಜಿಲ್ಲೆ ರಾಜ್ಯದಲ್ಲೇ ಅಧಿಕ ಅಪಘಾತಗಳು ಸಂಭವಿಸಿರುವ ಸ್ಥಳವಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಪ್ರಥಮವಾಗಿ ಇಲ್ಲಿಂದಲೇ ಸಾರ್ವಜನಿಕ ಜಾಗೃತಿ ಆಂದೋಲನ ಆರಂಭಿಸಲಾಗುತ್ತಿದೆ. ಇಲ್ಲೊಂದು ಜಾಗೃತಿ ಕೇಂದ್ರ ತೆರೆಯಲಾಗುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಯುಕ್ತ ಎನ್.ಶಿವಕುಮಾರ್ ಮನವಿ ಮಾಡಿಕೊಂಡರು.
ಜಿಲ್ಲೆಯ ಅಪಘಾತಗಳಿಗೆ ಅಜಾಗರೂಕತೆ ಕಾರಣ
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ರಾಕೇಶ್‍ಕುಮಾರ್ ಮಾತನಾಡುತ್ತ, ತುಮಕೂರು ಜಿಲ್ಲೆಯಲ್ಲಿ ಸಂಭವಿಸಿರುವ ಪ್ರಮುಖ ಅಪಘಾತದ ಕಾರಣಗಳನ್ನು ವಿಶ್ಲೇಷಣೆ ಮಾಡಲಾಗಿದ್ದು, ಚಾಲಕರ ಅಜಾಗರೂಕತೆಯೇ ಇದಕ್ಕೆ ಕಾರಣವೆಂಬುದು ಕಂಡುಬಂದಿದೆ. ಆನಂತರದ್ದು ರಸ್ತೆ ಸಮಸ್ಯೆಯದ್ದಾಗಿದೆ ಎಂದು ಹೇಳಿದರು.
ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವುದರಿಂದಲೇ ಅಪಘಾತಗಳಾಗುತ್ತಿವೆ. ಇಯರ್‍ಫೋನ್ ಹಾಕಿಕೊಂಡು ಸಹ ವಾಹನ ಚಾಲನೆ ಸಂದರ್ಭದಲ್ಲಿ ಮಾತನಾಡಬಾರದು. ವಿಶೇಷವಾಗಿ ವಿದ್ಯಾರ್ಥಿಗಳು ಇಂತಹ ವಿಷಯಗಳಲ್ಲಿ ಇನ್ನೊಬ್ಬರನ್ನು ನೋಡಿ ಅನುಕರಣೆ ಮಾಡಲೇಬಾರದು ಎಂದರು.
ರಸ್ತೆಗಳಲ್ಲಿ ಗುಂಡಿ ಉಂಟಾಗಿರುವುದನ್ನು ಸರಿಪಡಿಸಲು ಕ್ರಿಯಾಯೋಜನೆ ಹಮ್ಮಿಕೊಳ್ಳಲಾಗಿದೆಯೆಂದು ಹೇಳಿದ ಜಿಲ್ಲಾಧಿಕಾರಿಗಳು, ಅಪಘಾತಗಳ ಸಂಖ್ಯೆಯಲ್ಲಿ ತುಮಕೂರು ಜಿಲ್ಲೆ ಈಗ ಮೊದಲನೇ ಸ್ಥಾನದಲ್ಲಿರುವುದರಿಂದ ಇಂತಹ ಜಾಗೃತಿ ಅಭಿಯಾನವನ್ನು ತುಮಕೂರಿನಿಂದಲೇ ಆರಂಭಿಸಲಾಗುತ್ತಿದೆ. ಜಾಗೃತಿ ಕೇಂದ್ರವನ್ನೂ ತೆರೆಯಲಾಗಿದೆ ಎಂದರು.
ಅಪಘಾತದ ಸಾವೇ ಅಧಿಕ
ಅತಿಥಿಗಳಾಗಿದ್ದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ಕೋನ ವಂಶಿಕೃಷ್ಣ ಮಾತನಾಡುತ್ತ, ದೇಶದಲ್ಲಿ ಪ್ರತಿವರ್ಷ ಸುಮಾರು ಒಂದೂವರೆ ಲಕ್ಷದಷ್ಟು ಜನರು ಅಪಘಾತಗಳಿಂದ ತಮ್ಮ ಜೀವ ಕಳೆದುಕೊಳ್ಳುತ್ತಿದ್ದು, ಈ ಸಂಖ್ಯೆಯು ಇನ್ನಿತರೆ ರೋಗರುಜಿನ ಗಳಿಂದಾಗುವ ಸಾವಿಗಿಂತಲೂ ದೊಡ್ಡ ಪ್ರಮಾಣದ್ದಾಗಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರ ಸಾವು ಅಧಿಕ ಸಂಖ್ಯೆಯಲ್ಲಿದೆ. ಇದರಿಂದ ಮೃತರ ಕುಟುಂಬಕ್ಕಾಗುವ ನಷ್ಟವನ್ನು ಭರಿಸಲು ಸಾಧ್ಯವೇ ಆಗುವುದಿಲ್ಲ ಎಂದು ಆತಂಕದಿಂದ ನುಡಿದರು.
ಜನಜಾಗೃತಿ ಮೂಡಿಸುವುದೊಂದೇ ಈ ಸಮಸ್ಯೆಗಿರುವ ಏಕೈಕ ಪರಿಹಾರ ಎಂದು ಅಭಿಪ್ರಾಯಪಟ್ಟ ಅವರು, ಈ ನಿಟ್ಟಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಗಣಿತ, ವಿಜ್ಞಾನ ಕಲಿಸುವಂತೆ ರಸ್ತೆ ಸುರಕ್ಷತೆ ವಿಷಯವನ್ನೂ ಕಲಿಸಬೇಕೆಂಬ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದರು.
ಶೇ.90 ರಷ್ಟು ಜನರು ರಸ್ತೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುತ್ತಿರುವುದರಿಂದಲೇ ಕಾನೂನನ್ನು ಜಾರಿಗೊಳಿಸಲು ಪೊಲೀಸರಿಗೆ ತೊಡಕಾಗುತ್ತಿದೆ ಎಂಬುದನ್ನು ಡಾ. ವಂಶಿಕೃಷ್ಣ ಸಹ ಪುನರುಚ್ಚರಿಸುತ್ತ, ಪ್ರತಿಯೊಬ್ಬರೂ ರಸ್ತೆಸುರಕ್ಷತಾ ಕಾನೂನಿನ ಬಗ್ಗೆ ಅರಿವುಳ್ಳವರಾಗಬೇಕು. ಅದನ್ನು ಪಾಲಿಸಬೇಕು. ಅಪ್ರಾಪ್ತ ವಯಸ್ಕರು ಯಾವ ಕಾರಣಕ್ಕೂ ವಾಹನ ಚಾಲನೆ ಮಾಡಬಾರದು. ಇದಕ್ಕೆ ಪೋಷಕರೂ ಅವಕಾಶ ಕೊಡಬಾರದು. ವಾಹನ ಚಾಲನೆ ಮಾಡುವವರು ಸೂಕ್ತ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಲೇಬೇಕು ಎಂದು ಒತ್ತಿ ಹೇಳಿದರು.
ತುಮಕೂರು ಜಿಲ್ಲೆಯು ಅಪಘಾತದಲ್ಲಿ ಮೊದಲ ಸ್ಥಾನದಲ್ಲಿರುವುದನ್ನು ಬದಲಿಸಲು ಎಲ್ಲರೂ ಕ್ರಿಯಾಶೀಲರಾಗಬೇಕು. ರಸ್ತೆ ಸುರಕ್ಷತೆ ಜಾಗೃತಿ ಮೂಡಿಸುವುದು ಒಂದು ಆಂದೋಲನದಂತೆ ಆಗಬೇಕು ಎಂದು ಅವರು ಮನವಿ ಮಾಡಿಕೊಂಡರು.
ಒಂದು ಕ್ಷಣದ ನಿರ್ಲಕ್ಷ್ಯದಿಂದ..
ಪಿ.ಯು. ವಿಭಾಗದ ಉಪನಿರ್ದೇಶಕಿ ಲಲಿತಕುಮಾರಿ ಅತಿಥಿಗಳಾಗಿ ಮಾತನಾಡುತ್ತ, ಒಂದು ಕ್ಷಣದ ನಿರ್ಲಕ್ಷ್ಯದಿಂದ ಅಮೂಲ್ಯವಾದ ಜೀವವನ್ನೇ ಕಳೆದುಕೊಳ್ಳಬೇಕಾದೀತು ಹಾಗೂ ಜೀವಮಾನವಿಡೀ ನರಳಬೇಕಾದೀತು ಎಂಬುದನ್ನು ಎಲ್ಲರೂ ಸದಾ ನೆನಪಿಟ್ಟುಕೊಂಡಿರಬೇಕು ಎಂದು ಕಿವಿಮಾತು ಹೇಳಿದರು. ತಮ್ಮ ಪರಿಚಿತರೊಬ್ಬರಿಗೆ ಅಪಘಾತದಲ್ಲಿ ಬೆನ್ನುಹುರಿಗೆ ಪೆಟ್ಟಾಗಿ ಒಂದೂವರೆ ದಶಕದಿಂದ ಹಾಸಿಗೆ ಹಿಡಿದಿರುವುದನ್ನು ಹಾಗೂ ಪರಿಚಿತರೊಬ್ಬರ ಮಗ ಅಪಘಾತದಲ್ಲಿ ಸಾವಿಗೀಡಾಗಿದ್ದರಿಂದ ಆತನ ಪೋಷಕರು ವೃದ್ಧಾಪ್ಯದಲ್ಲಿ ಸಂಕಟ ಪಡುತ್ತಿರುವುದನ್ನು ಅವರು ಉದಾಹರಿಸುತ್ತ, ರಸ್ತೆ ಸುರಕ್ಷತೆ ಬಗ್ಗೆ ಎಲ್ಲರೂ ಅತಿಹೆಚ್ಚು ಕಾಳಜಿ ವಹಿಸಬೇಕೆಂದು ಕಳಕಳಿಯ ಮನವಿ ಮಾಡಿಕೊಂಡರು.
ಪ್ರಾಧಿಕಾರದ ಮತ್ತೋರ್ವ ಹಿರಿಯ ಅಧಿಕಾರಿ ನರೇಂದ್ರ ಹೋಳ್ಕರ್, ಆರ್.ಟಿ.ಓ. ರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಿಕಾ ಮೊದಲಾದವರು ವೇದಿಕೆಯಲ್ಲಿದ್ದರು. ಉಪನ್ಯಾಸಕ ಮೋಹನ್‍ಕುಮಾರ್ ಸ್ವಾಗತಿಸಿದರು. ಪ್ರಾಚಾರ್ಯ ಜಯರಾಮಯ್ಯ ವಂದಿಸಿದರು. ನೂರಾರು ವಿದ್ಯಾರ್ಥಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
