ಗುಬ್ಬಿ
ಮೈನಿಂಗ್ ನಡೆಯುವ ಸ್ಥಳಗಳಿಗಿಂತ ಭಿನ್ನವಾಗಿ ಕೆರೆಕಟ್ಟೆಗಳಲ್ಲಿ ಮಣ್ಣು ತೆಗೆಯುವ ಕೆಲಸ ನಿರಂತರವಾಗಿ ತಾಲ್ಲೂಕಿನ ಕಸಬಾ ಹೋಬಳಿಯಲ್ಲಿ ಹೆಚ್ಚಾಗಿ ನಡೆದಿದೆ. ರಸ್ತೆ ಅಭಿವೃದ್ದಿ ಹೆಸರಿನಲ್ಲಿ ಕೆರೆಕಟ್ಟೆಗಳಲ್ಲಿ ನಿಯಮ ಮೀರಿ ಮಣ್ಣು ಸಾಗಿಸಿರುವುದು ಪ್ರಕೃತಿಗೆ ವಿರುದ್ದವಾದುದು ಎಂದು ಸಾಮಾಜಿಕ ಹೋರಾಟಗಾರರು ಆರೋಪಿಸಿದ್ದಾರೆ.
ಗುಬ್ಬಿ ಪಟ್ಟಣದ ಹೊರವಲಯದಲ್ಲಿ ಹಾದು ಹೋಗುತ್ತಿರುವ ಹೆದ್ದಾರಿ ಸರ್ವಿಸ್ ರಸ್ತೆ ನಿರ್ಮಾಣದಲ್ಲಿ ಫ್ಲೈಓವರ್ ಸೇತುವೆಗಳ ನಿರ್ಮಾಣ ಮಾಡಬೇಕಾಗಿರುವ ಕಾರಣ ಮಣ್ಣಿನ ಅಗತ್ಯತೆ ಇತ್ತು. ಆದರೆ ಮಣ್ಣು ಸಮೀಪದಲ್ಲೇ ಹುಡುಕಲು ಮುಂದಾದ ಗುತ್ತಿಗೆದಾರರು ರಸ್ತೆ ನಿರ್ಮಾಣದ ಅಕ್ಕಪಕ್ಕದ ಕೆರೆಕಟ್ಟೆ, ಗೋಮಾಳ, ಗೋಕಟ್ಟೆ, ಅರಣ್ಯ ಪ್ರದೇಶ ಸ್ಥಳಗಳ ಜತೆಗೆ ರೈತರ ಜಮೀನಿನಲ್ಲಿ ಸಹ ಮಣ್ಣು ಸಾಗಿಸಲು ಆರಂಭಿಸಿದರು.ದಿನ ಕಳೆದಂತೆ ಕೆರೆಗಳ ಆಕೃತಿಯೇ ವಿಚಿತ್ರವಾಗಿದ್ದು, ಕೆಲ ಪ್ರಜ್ಞಾವಂತ ರೈತರಲ್ಲಿ ಆತಂಕ ತಂದಿದೆ. ಸರ್ಕಾರದ ನಿಯಮ ಪ್ರಕಾರ ನಾಲ್ಕೈದು ಅಡಿಗಳಿಂತ ಆಳ ತೊಡುವಂತಿಲ್ಲ. ಆದರೆ ಸುಮಾರು 50 ಅಡಿಗಳ ಆಳಕ್ಕೂ ಜೆಸಿಬಿ ಯಂತ್ರಗಳು ಬಿಡುವಿಲ್ಲದೇ ಹಗಲಿರುಳು ಮಣ್ಣು ತೆಗೆದಿರುವುದು ಸರಿಯಲ್ಲ ಎಂದು ದೂರುತ್ತಿದ್ದಾರೆ.
ಪಟ್ಟಣದ ಸುತ್ತಲಿನ ಕೆರೆಗಳಲ್ಲೇ ಮಣ್ಣು ತೆಗೆಯುತ್ತಿರುವ ಬಗ್ಗೆ ತಿಳಿದೂ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನಲಾಗುತ್ತಿದೆ. ಹೆದ್ದಾರಿ ರಸ್ತೆ ಕೆಲಸ ಸಾರ್ವಜನಿಕರ ಉದ್ದೇಶಕ್ಕೆ ಸರಿಯೇ ಆಗಿದ್ದರೂ, ನಮ್ಮ ಪ್ರಕೃತಿಯ ವಿರುದ್ದ ಕೆರೆಗಳನ್ನೇ ಹಾಳು ಮಾಡುವುದು ಸರಿಯಲ್ಲ. ಈ ಬಗ್ಗೆ ದೂರು ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಹೊದಲೂರು, ಕಿಟ್ಟದಕುಪ್ಪೆ, ರಂಗನಾಥಪುರ, ಹೊನ್ನವಳ್ಳಿ, ಬಿಲ್ಲೇಪಾಳ್ಯ ಕಟ್ಟೆ, ಅರುವೇಸಂದ್ರ ಹೀಗೆ ಹಲವು ಭಾಗದಲ್ಲಿ ಲೆಕ್ಕವಿಲ್ಲದಂತೆ ಮಣ್ಣು ತೆಗೆಯಲಾಗಿದೆ. ನಿಯಮ ಮೀರಿ 50 ಕ್ಕೂ ಅಧಿಕ ಅಡಿಗಳ ಆಳದಲ್ಲಿ ಮಣ್ಣು ತೆಗೆಯುತ್ತಿರುವ ರಸ್ತೆ ಗುತ್ತಿಗೆದಾರರಿಗೆ ಅನುಮತಿ ನೀಡಿದವರ್ಯಾರು ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಜಿ.ಎಸ್.ಮಂಜುನಾಥ್ ಪ್ರಶ್ನಿಸಿದ್ದಾರೆ.
ಹಳ್ಳಿಗಾಡಿನ ರಸ್ತೆಯಲ್ಲಿ ಮಣ್ಣು ತುಂಬಿದ ಟಿಪ್ಪರ್ ಲಾರಿಗಳ ಓಡಾಟ ಕೂಡ ಡಾಂಬರ್ ರಸ್ತೆಗಳನ್ನು ಹಾಳು ಮಾಡಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಗಮನಹರಿಸಿಲ್ಲ. ಗ್ರಾಮೀಣ ಭಾಗದ ರಸ್ತೆಗಳೂ ಸಹ ಗುಂಡಿ ಬಿದ್ದಿದ್ದು, ಮಳೆ ಬಂದರೆ ಸಂಪೂರ್ಣ ಹಾಳಾಗಲಿದೆ. ಈ ನಷ್ಟ ಕೇಳುವವರಿಲ್ಲ. ಅರಣ್ಯ ಪ್ರದೇಶದ ಸ್ಥಳದಲ್ಲಿ ಕೊರೆದ ಯಂತ್ರಗಳ ಕೆಲಸಕ್ಕೆ ಅರಣ್ಯ ಪ್ರದೇಶದ ಮರಗಿಡಗಳ ಬೇರು ನಾಶವಾಗಿದೆ ಎಂದು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ವಿನಯ್‍ಕುಮಾರ್ ತಿಳಿಸುತ್ತಾರೆ.
ಒಟ್ಟಾರೆ ಹಾಳಾದ ಕೆರೆಕಟ್ಟೆಗಳಿಗೆ ಮೊದಲಿನ ರೂಪ ತರುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನ ವಹಿಸಬೇಕಿದೆ. ಗುತ್ತಿಗೆದಾರರ ವಿರುದ್ದ ಕಾನೂನು ಕ್ರಮ ಜರುಗಿಸಬೇಕಿದೆ. ಸಂಬಂದಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆ ಜಿಲ್ಲೆಯಲ್ಲಿದೆಯೆ ಎಂಬ ಪ್ರಶ್ನೆ ಸಾಕಷ್ಟು ಬಾರಿ ಕೇಳಿ ಬಂದಿದೆ. ಈ ರೀತಿ ಭೂಮಿಯ ಮಣ್ಣು ಲೂಟಿ ಮಾಡಿದರೂ ಇತ್ತ ಸುಳಿಯದ ಇಲಾಖೆ ಹಾಗೂ ಪರಿಸರ ನಾಶಕ್ಕೆ ಮುಂದಾದವರ ವಿರುದ್ದ ಹೋರಾಟ ನಡೆಸಲಾಗುವುದು. ತಾಲ್ಲೂಕು ಅಧಿಕಾರಿಗಳಿಂದ ನ್ಯಾಯ ಸಿಗದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತರು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
