ಹುಳಿಯಾರಿನಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಗೆ ಚಾಲನೆ

ಹುಳಿಯಾರು:

    ಎಲ್ಲಾ ನಾಗರಿಕರಂತೆ ಅಲೆಮಾರಿಗಳಿಗೂ ಸಮನಾದ ಹಕ್ಕುಗಳಿವೆ.ವಾಸಕ್ಕೆ ಮನೆ,ಬದುಕಲು ಉಳುಮೆ ಮಾಡಲು ಜಮೀನು ಬೇಕಿದೆ.ಅವರನ್ನು ಸಾಕಿ ಎಂದು ನಾವು ಅಂಗಲಾಚುತ್ತಿಲ್ಲ. ಅವರುಗಳು ದುಡಿದು ತಿನ್ನಲು ಸಾಧ್ಯವಾಗುವ ಯೋಗ್ಯ ವಾತಾವರಣ ನಿರ್ಮಿಸಿಕೊಡಿ, ಸ್ವಾವಲಂಬಿಗಳಾಗಲು ಅವಕಾಶ ಮಾಡಿಕೊಡಿ ಎಂದು ಸಾಮಾಜಿಕ ಚಿಂತಕರಾದ ದೊರೈರಾಜು ಹೇಳಿದರು.

     ಹುಳಿಯಾರಿನ ನಾಡ ಕಚೇರಿ ಆವರಣದಲ್ಲಿ ಅಲೆಮಾರಿ ಸಮುದಾಯಗಳ ಮೂಲಭೂತ ಹಕ್ಕುಗಳಿಗೆ,ಸೌಲಭ್ಯಗಳಿಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿಗೆ ಚಾಲನೆ ನೀಡಿ ಮಾತನಾಡಿದ ಅವರು ನಾವು ಬದುಕುತ್ತಿರುವ ನಾಗರೀಕ ಸಮಾಜದ ವ್ಯವಸ್ಥೆಯಲ್ಲಿ ಇಂದಿಗೂ ಅಲೆಮಾರಿಗಳ ನೋವು ನಲಿವು ಸಮಸ್ಯೆ ಯಾರಿಗೂ ಅರಿವಾಗಿಲ್ಲ.ತೀರಾ ನಿಕೃಷ್ಟ ಸ್ಥಿತಿಯಲ್ಲಿ ಬದುಕುತ್ತಿರುವ ಇಂತಹ ಸಮುದಾಯದವರು ಸಹ ಸಮಾಜದ ಒಂದು ಅವಿಭಾಜ್ಯ ಅಂಗ ಎಂದು ಯಾರೂ ಪರಿಗಣಿಸದಿರುವುದು ದುರಂತ.ಅಂಬೇಡ್ಕರ್ ಕೊಟ್ಟು ಹೋದ ಸಂವಿಧಾನದ ಹಕ್ಕು ಮತ್ತು ಸೌಲಭ್ಯಗಳನ್ನು ಪಡೆಯಲು ತಳ ಸಮುದಾಯದವರು ಸಂಘಟಿತರಾಗಿ ಕಳೆದ ಒಂದೂವರೆ ದಶಕದಿಂದ ಹೋರಾಟ ಪ್ರಾರಂಭಿಸಿದ ಫಲವಾಗಿ ಇಂದು ನಮ್ಮ ಕೂಗು ಆಡಳಿತ ಶಾಹಿಗಳಿಗೆ ಕೇಳುವಂತಾಗಿದೆ.ಇಂತಹ ಸಮುದಾಯದವರು ಸಹ ಭೂಮಿಯ ಮೇಲೆ ಬಾಳುತ್ತಿದ್ದಾರೆ ಎಂದು ಅರಿವಾಗಿದೆ.ಇಷ್ಟರ ನಡುವೆಯೂ ನಮ್ಮ ಹಕ್ಕುಗಳಿಗಾಗಿ ನಾವು ಮಾಡುತ್ತಿರುವ ಹೋರಾಟ ದಮನಿಸುವ ಹುನ್ನಾರ ನಡೆದಿದ್ದರೂ ಸಹ ಸಮುದಾಯ ಎಚ್ಚೆತ್ತಿರುವ ಫಲವಾಗಿ ಇದು ಸಾಧ್ಯವಾಗಿಲ್ಲ ಎಂದರು

       ಎಲ್ಲಾ ನಾಗರಿಕರಂತೆ ನಮಗೂ ಸಮನಾದ ಹಕ್ಕುಗಳಿದ್ದು ಸ್ವಾವಲಂಬಿಗಳಾಗಲು ಅವಕಾಶ ಮಾಡಿಕೊಡಿ.ಇದು ಸಫಲವಾಗುವವರೆಗೂ,ಕಿವುಡಾಗಿರುವ ಕಿವಿಗಳು ಎಚ್ಚೆತ್ತು ನಮ್ಮ ಕೂಗು ಕೇಳುವವರೆಗೂ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ.ನಮ್ಮ ಬೇಡಿಕೆಗಳು ಈಡೇರುವವರೆಗೂ ನಾಡ ಕಚೇರಿ ಬಳಿ ಅಲೆಮಾರಿ ಕುಟುಂಬಗಳಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನಾ ಧರಣಿ ಮುಂದುವರಿಯುತ್ತದೆ.ಸಾರ್ವಜನಿಕರ ಬೆಂಬಲ ಇದಕ್ಕೆ ಬೇಕು ಎಂದರು.

     ಅಲೆಮಾರಿ ಬುಡಕಟ್ಟು ಮಹಾಸಭಾದ ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಧ್ಯಕ್ಷ ರಾಜಣ್ಣ ಮಾತನಾಡಿ ಅನೇಕ ದಶಕಗಳಿಂದ ಹುಳಿಯಾರಿನ ಕೆರೆ ಅಂಗಳದಲ್ಲಿ ಅಲೆಮಾರಿಗಳು ವಾಸವಿದ್ದರೂ ಸಹಾ ಇದುವರೆಗೂ ಅಲೆಮಾರಿಗಳಿಗೆ ನೆಮ್ಮದಿಯ ಸೂರು ಕಲ್ಪಿಸಲಾಗಿಲ್ಲ. ಹಂದಿಜೋಗಿ,ದರ್ವೇಶಿ,ಪಿಂಜಾರ,ಕರಡಿ ಖಲಂದರ್,ಕೊರಮ,ದೊಂಬರು ಹೇಳವರು ಮತ್ತಿತರ ಹಿಂದುಳಿದ ಜಾತಿಗಳ ಬಡವರು ಇನ್ನೂ ಗುಡಿಸಲಿನಲ್ಲಿಯೇ ಹತ್ತಾರು ವರ್ಷಗಳಿಂದ ವಾಸವಿದ್ದರೂ ಸಹಾ ನೆಲೆ ಕಂಡುಕೊಳ್ಳಲಾಗಿಲ್ಲ.

     ಇದೀಗ ಅಲೆಮಾರಿ ಬುಡಕಟ್ಟು ಮಹಾಸಭಾದ ಅಡಿಯಲ್ಲಿ ಇವರಿಗೆ ನೆಲೆ ಕಲ್ಪಿಸಲು ಕಳೆದೊಂದು ದಶಕದಿಂದ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ಅಧಿಕಾರಿಶಾಹಿಗಳಿಗೆ ನಮ್ಮ ಕೂಗು ಕೇಳುತ್ತಿಲ್ಲ. ನಮ್ಮ ಮನವಿಗೆ ಜಿಲ್ಲಾಧಿಕಾರಿಗಳು,ಉಪ ವಿಭಾಗಾಧಿಕಾರಿಗಳು ,ತಾಲ್ಲೂಕು ತಹಸೀಲ್ದಾರರು ಎಲ್ಲ ನಿರ್ಲಕ್ಷ್ಯ ವಹಿಸುತ್ತಿದ್ದು ಇವರುಗಳ ಬೇಜವಾಬ್ದಾರಿತನದಿಂದ ಅಲೆಮಾರಿಗಳ ಬದುಕು ಚಿಂತಾಜನಕವಾಗಿದೆ .

      ಹಂದಿ ಮಲಗುವ ಜಾಗದಲ್ಲಿ ಅಲೆಮಾರಿಗಳು ಮಲಗುವಂತಾಗಿದೆ.ಕೆರೆ ಅಂಗಳದಲ್ಲಿ ನೀರು ಬಂದಾಗ ಗೋಳಾಟ ಒಂದೆಡೆಯಾದರೆ,ಗುಡಿಸಲುಗಳಲ್ಲಿ ಅನೇಕ ವಿಷ ಜಂತುಗಳು ಕಚ್ಚಿ ಸಾವನ್ನಪ್ಪಿರುವ, ಅತ್ಯಾಚಾರವಾಗಿರುವ,ಬೆಂಕಿಗೆ ಆಹುತಿಯಾಗಿರುವ ಘಟನೆಗಳು ಇದ್ದರೂ ಸಹ ಯಾರೊಬ್ಬರೂ ಇತ್ತ ಗಮನ ಹರಿಸುತ್ತಿಲ್ಲ.ಈ ನೆಲದಲ್ಲಿ ಬಾಳುವ ಹಕ್ಕು ನಮಗೂ ಸಮನಾಗಿದ್ದು ನಿವೇಶನ ನೀಡುವವರೆಗೂ ಪ್ರಗತಿಪರರ ಬೆಂಬಲದೊಂದಿಗೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಯುತ್ತವೆ ಎಂದರು.

     ಹುಳಿಯಾರು ಗ್ರಾಮ ಪಂಚಾಯಿತಿ ಸದಸ್ಯ ರಾಘವೇಂದ್ರ ಮಾತನಾಡಿ ಶಂಕರಪುರ ಬಡಾವಣೆಯಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗವಾದ ಅಲೆಮಾರಿಗಳು ಜೋಪಡಿಯಲ್ಲಿ ವಾಸವಿದ್ದು ಇವರೆಲ್ಲರಿಗೂ ನೆಮ್ಮದಿಯ ಸೂರು ಕಲ್ಪಿಸಲಾಗಿಲ್ಲ.ಕೆರೆ ತುಂಬಿದರಂತೂ ಪರಿಪಾಟಲು ಪಡುವಂತಾಗಿದ್ದು ಹೆಚ್ಚುಕಮ್ಮಿ ನೀರಿನಲ್ಲಿ ಮಲಗುವ ಸ್ಥಿತಿ ಇದೆ.ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಿಲ್ಲ. ಇದು ನಾಗರಿಕ ಸಮಾಜಕ್ಕೆ ಅವಮಾನಕಾರಿ ವಿಚಾರವಾಗಿದೆ ಎಂದರು.

     ಈ ಸಂದರ್ಭದಲ್ಲಿ ಸಾಮಾಜಿಕ ಚಿಂತಕರಾದ ಶ್ರೀಪಾದ ಭಟ್, ಕವಿ ಹಾಗೂ ಚಿಂತಕರಾದ ಕೃಷ್ಣಮೂರ್ತಿ ಬಿಳಿಗೆರೆ,ಗಂಗಾಧರ್ ಮತಿಘಟ್ಟ  , ನಾಸಿರ್ ಹುಸೇನ್ , ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ , ಶಾಂತರಾಜು , ರಂಗನಾಥ್ , ರಾಜಪ್ಪ ,ಸಣ್ಣ ಲಕ್ಷ್ಮಮ್ಮ, ಲಕ್ಷ್ಮಿ,ಗಂಗಮ್ಮ ,ಶೇಖ್ ಖಾಸಿಂ ಸಾಬ್,ನಾಗಣ್ಣ ಸೇರಿದಂತೆ ಹಂದಿಜೋಗಿ,ದಕ್ಕಲಿಗ, ದೊಂಬಿದಾಸ, ಶಿಳ್ಳೇಕ್ಯಾತ , ಕೊರಮ ,ದೊಂಬರು,ಆದಿ ಕರ್ನಾಟಕ,ಚನ್ನದಾಸ,ಪಿಂಜಾರ,ಹಕ್ಕಿ ಪಿಕ್ಕಿ,ಸುಡುಗಾಡು ಸಿದ್ಧ ಮತ್ತಿತರ ಸಮುದಾಯದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

    ಇದಕ್ಕೂ ಮುನ್ನ ನೂರಾರು ಸಂಖ್ಯೆಯಲ್ಲಿದ್ದ ಅಲೆಮಾರಿ ಜನಾಂಗದವರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ತಮ್ಮ ಬೇಡಿಕೆಗಳ ಬಗ್ಗೆ ಘೋಷಣೆ ಕೂಗಿದರು.ನಾಡ ಕಚೇರಿ ಆವರಣದಲ್ಲಿಯೇ ಟೆಂಟ್ ಹಾಕಿ ಅಲ್ಲಿಯೇ ಊಟ ಮಾಡಿ ಹಾಡು ಕುಣಿತ ನಾಟಕಗಳ ಮೂಲಕ ತಮ್ಮ ಧರಣಿ ಮುಂದುವರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link