ಚಿತ್ರದುರ್ಗ, 
ಜಿಲ್ಲಾಡಳಿತ ಹಾಗೂ ನಗರಸಭೆ ಇವರ ಸಹಯೋಗದೊಂದಿಗೆ ಸ್ವಚ್ಚ ಸರ್ವೇಕ್ಷಣ 2020, ‘ನಮ್ಮ ಚಿತ್ತ ಸ್ವಚ್ಛತೆಯತ್ತ’ ಧ್ಯೇಯ ಘೋಷಣೆಯಡಿ ನಗರದ ಎಲ್.ಐ.ಸಿ ಕಚೇರಿಯ ಹತ್ತಿರದ ಕೆಂಚಮಲ್ಲಪ್ಪನ ಬಾವಿ ಬಳಿ ಸ್ವಚ್ಚತಾ ಆಂದೋಲನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಚಾಲನೆ ನೀಡಿದರು.
ಬಳಿಕ ಈ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಚಿತ್ರದುರ್ಗ ಜಿಲ್ಲೆಯು ಜಲಶಕ್ತಿ ಅಭಿಯಾನದಡಿ ಆಯ್ಕೆಯಾಗಿದ್ದು, ಜಲಸಂರಕ್ಷಣೆ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮತ್ತು ಈ ಬಗ್ಗೆ ಸಾರ್ವಜನಿಕರಿಗೂ ಸಹ ಅರಿವು ಮೂಡಿಸಲಾಗುತ್ತಿದೆ. ಮಳೆಗಾಲದಲ್ಲಿ ಜಲಮೂಲಗಳನ್ನು ಸ್ವಚ್ಚಗೊಳಿಸುವುದರಿಂದ ನೀರಿನ ಶುದ್ಧತೆ ಹಾಗೂ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿಡಲು ಸಾಧ್ಯವಾಗುತ್ತದೆ.
ಇದರಿಂದ ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಜಲಮೂಲಗಳಲ್ಲಿ ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ಹಾಕುವುದರಿಂದ ಜಲಮಾಲೀನ್ಯ ಉಂಟಾಗಿ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆದ ಕಾರಣ ಸಾರ್ವಜನಿಕರು ಜಲಮೂಲಗಳನ್ನು ಸ್ವಚ್ಚಗೊಳಿಸಿ, ಜಲ ಪ್ರಾಮುಖ್ಯತೆ ಬಗ್ಗೆ ಅರಿವು ಹೊಂದಬೇಕಾಗಿದೆ. ಅರಿವು ಮೂಡಿಸಲು ಜಲಶಕ್ತಿ ಅಭಿಯಾನದಡಿ ಅನೇಕ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ ಎಂದರು.
ನಗರಸಭೆ ಪೌರಾಯುಕ್ತ ಚಂದ್ರಪ್ಪ ಮಾಹಿತಿ ನೀಡಿ, ಇಂದು ನಗರದ ಕೆಂಚಮಲ್ಲಪ್ಪನ ಬಾವಿಯಲ್ಲಿರುವ ಘನತ್ಯಾಜ್ಯ, ಗಿಡಗಳು ಮತ್ತು ಹೂಳು ತೆಗೆದಿದ್ದು, ಸುಮಾರು 11 ಲೋಡ್‍ನಷ್ಟು ತ್ಯಾಜ್ಯ ವಿಲೇವಾರಿ ಮಾಡಲಾಯಿತು ಎಂದು ತಿಳಿಸಿದರು. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಬಾಬುರೆಡ್ಡಿ ಅವರು, ನಗರದಲ್ಲಿ ಸ್ವಚ್ಚ ಆಂದೋಲನ ಕಾರ್ಯಕ್ರಮವು ಜುಲೈ ಮೊದಲ ವಾರದಿಂದ ಆರಂಭಗೊಂಡಿದ್ದು, ಜುಲೈ ಮೊದಲನೇ ಶನಿವಾರ ಜೆ.ಸಿ ನಗರದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಇನ್ನು ಮುಂದೆ ಪ್ರತಿ ತಿಂಗಳ ಮೊದಲನೇ ಶನಿವಾರ ಹಾಗೂ 3ನೇ ಶನಿವಾರ ನಗರದ ಪ್ರತಿವಾರ್ಡ್‍ಗಳಲ್ಲಿ ಸ್ವಚ್ಚತೆ ಕಾರ್ಯಕ್ರಮವನ್ನು ರೂಪಿಸಲಾಗುತ್ತದೆ. ಇಂದು ಮೂರು ತಂಡಗಳಾಗಿ ವಿಭಜಿಸಿ, ಮೊದಲನೇ ತಂಡವು ನಗರದ ಕೆಂಚಮಲ್ಲಪ್ಪನ ಬಾವಿ ಸ್ವಚ್ಚತೆ, ಎರಡನೇ ತಂಡವು ಗಾಂಧಿವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ರಸ್ತೆಯ ಪಕ್ಕದಲ್ಲಿರುವ ಧೂಳು, ತ್ಯಾಜ್ಯ ನಿವಾರಣೆ ಹಾಗೂ ಮೂರನೇ ತಂಡವು ಜಿಲ್ಲಾಸ್ಪತ್ರೆಯ ಮುಂದಿರುವ ಸ್ವಾಮಿ ವಿವೇಕಾನಂದ ಉದ್ಯಾನವನದ ಸ್ವಚ್ಚತೆ ಕೈಗೊಳ್ಳಲಾಗಿದೆ ಎಂದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜ್‍ಶೇಖರ್, ನಗರಸಭೆ ಸದಸ್ಯೆ ಶ್ರೀದೇವಿ ಚಕ್ರವರ್ತಿ, ನಗರಸಭೆ ವ್ಯವಸ್ಥಾಪಕ ಜಯಣ್ಣ, ಪರಿಸರ ಅಭಿಯಂತರ ಜಾಫರ್, ಸರಳ ಹಾಗೂ ನಗರಸಭೆ ಸಿಬ್ಬಂದಿ, ಎಸ್.ಜೆ.ಎಮ್, ಎಸ್.ಆರ್.ಎಸ್ ಕಾಲೇಜಿನ ವಿದ್ಯಾರ್ಥಿಗಳು, ಸಿ.ಕೆ.ಪುರ, ಕೆಳಗೋಟೆ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಲಯನ್ಸ್ ಕ್ಲಬ್ ಸರ್ಕಾರೇತರ ಸಂಸ್ಥೆಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








