ತುಮಕೂರು:
ವಿಶೇಷ ವರದಿ : ಯೋಗೇಶ್ ಮಲ್ಲೂರು
ನಗರದ ಉಪ್ಪಾರಹಳ್ಳಿ ಕಡೆಯಿಂದ ಶಾಂತಿನಗರದ ಮಾರ್ಗವಾಗಿ ವಾಡ್ ಸಂಖ್ಯೆ-18ರ ಗುಡ್‍ಶೆಡ್ ಕಾಲೋನಿ ಬಳಿ ಇರುವ ತಿರುವಿನಲ್ಲಿ ಕಳೆದ ಆರು ತಿಂಗಳಿನಿಂದ ವಾಹನ ಚಾಲಕರು ರೈಲ್ವೇ ಸ್ಟೇಷನ್‍ಗೆ ಹೋಗಲು ಹತ್ತಿರವಾಗುತ್ತದೆ ಎನ್ನುವ ಕಾರಣಕ್ಕೆ ಬೆಳಂಬೆಳಗ್ಗೆಯೇ ದ್ವಿಚಕ್ರವಾಹನಗಳನ್ನು ಅಲ್ಲಿ ಪಾರ್ಕಿಂಗ್ ಮಾಡುವುದು ಹೆಚ್ಚಾಗಿದೆ.
ದಿನದಿಂದ ದಿನಕ್ಕೆ ಸ್ಥಳದಲ್ಲಿ ವಾಹನಗಳ ಸಂಖ್ಯೆ ದುಪ್ಪಟ್ಟಾಗುತ್ತಿದ್ದು, ಈ ಸಮಸ್ಯೆಯು ಅಲ್ಲಿನ ರೈಲ್ವೇ ಪೋಲೀಸರಿಗೂ ತಿಳಿದಿದ್ದು, ಯಾವುದೇ ರೀತಿಯ ಪರಿಹಾರ ಕಂಡುಬಂದಿಲ್ಲ. ಜನ ಮಾತ್ರ ತಿರುವಿನಲ್ಲಿ ಪಾರ್ಕಿಂಕ್ ಮಾಡಿ ಅಲ್ಲಿಂದ ಅಡ್ಡದಾರಿ ಹಿಡಿದು ರೈಲ್ವೇ ಸ್ಟೇಷನ್‍ಗೆ ತೆರಳುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಅಭಾಸ ಉಂಟಾಗುತ್ತಿದ್ದು, ದೊಡ್ಡ ದೊಡ್ಡ ವಾಹನಗಳು ಕ್ರಾಸಿಂಗ್ ಮಾಡಿಕೊಳ್ಳಲು ಹೆಣಗಾಟ ನಡೆಸುತ್ತಿವೆ. ಸ್ಥಳದಲ್ಲಿ ಆಗಾಗ ಸಣ್ಣ ಸಣ್ಣ ಅಪಘಾತಗಳು ಸಂಭಂವಿಸಿದ್ದುಂಟು.
ಶಾಲಾ ವಾಹನಗಳಿಗೆ ತೊಂದರೆ-ಪೋಷಕರಲ್ಲಿ ಭೀತಿ :
ಈ ತಿರುವಿನಲ್ಲಿ ಉಪ್ಪಾರಹಳ್ಳಿಯಿಂದ ಬರುವ ಬಸ್ಸು, ಲಾರಿ ಸೇರಿದಂತೆ ದೊಡ್ಡ ದೊಡ್ಡ ವಾಹನಗಳು ಕ್ರಾಸಿಂಗ್ ಮಾಡಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಶಾಲಾ ವಾಹನಗಳಿಗಂತೂ ದಿನಂಪ್ರತಿ ಸಮಸ್ಯೆ ಎದುರಾಗುತ್ತಿದೆ. ತಿರುವಿನಲ್ಲಿ ಸಾಕಷ್ಟು ತೊಂದರೆಗಳನ್ನು ಪಟ್ಟುಕೊಂಡು ಮಕ್ಕಳನ್ನು ಕರೆದೊಯ್ಯುತ್ತಿರುವ ಶಾಲಾ ವಾಹನಗಳನ್ನು ಕಂಡು ಇಲ್ಲಿನ ಪೋಷಕರಿಗೆ ಭಯ ಉಂಟಾಗಿದೆ. ರೈಲ್ವೇ ಸ್ಟೇಷನ್ ಬಳಿ ಪಾರ್ಕಿಂಗ್ ಮಾಡಲು ಜಾಗವಿದ್ದರೂ ಜನರು ತಮ್ಮ ವಾಹನಗಳನ್ನು ಗುಡ್‍ಶೆಡ್ ಕಾಲೋನಿಯ ತಿರುವಿನಲ್ಲಿ ನಿಲ್ಲಿಸುತ್ತಿರುವುದು ಸಾಕಷ್ಟು ತೊಂದರೆಗಳಿಗೆ ಈಡಾಗುತ್ತಿದೆ. ಈ ಕುರಿತಂತೆ ಇಲ್ಲಿನ ವಾರ್ಡ್‍ನ ಕಾರ್ಪೊರೇಟರ್ ಗಮನಿಸದೇ ಇರುವುದು ಮತ್ತೊಂದು ಅಂಶವಾಗಿದ್ದು, ಕಾರ್ಪೊರೇಟರ್ ವಾರ್ಡ್‍ನಲ್ಲಿ ಇದ್ದಾರೋ ಇಲ್ಲವೋ ಎಂಬ ಅನುಮಾನ ಜನ ಸಾಮಾನ್ಯರಲ್ಲಿ ಮೂಡಿದೆ.
ಕಿರಿದಾಗುವ ತಿರುವು ಅಪಘಾತಗಳಿಗೆ ನಾಂದಿ : ಕಳೆದ ಆರು ತಿಂಗಳಿನಿಂದ ನಡೆಯುತ್ತಿರುವ ಪಾರ್ಕಿಂಗ್ ಇಲ್ಲಿನ ವ್ಯವಸ್ಥೆಯಲ್ಲಿ ಇದುವರೆಗೂ ಸುಮಾರು ಏಳೆಂಟು ಅಪಘಾತಗಳು ಸಂಭವಿಸಿವೆ. ಉಪ್ಪಾರಹಳ್ಳಿಯಿಂದ ವೇಗವಾಗಿ ಶಾಂತಿನಗರದೆಡೆಗೆ ಬರುವ ವಾಹನಗಳಿಗೆ ಗುಡ್‍ಶೆಡ್ ಕಾಲೋನಿಯ ತಿರುವಿನಲ್ಲಿ ಪಾರ್ಕಿಂಗ್‍ನಿಂದ ರಸ್ತೆ ಕಿರಿದಾಗುತ್ತಿದ್ದು, ದೊಡ್ಡ ದೊಡ್ಡ ವಾಹನಗಳ ಚಾಲಕರಿಗೆ ವಾಹನ ಹಿಡಿತಕ್ಕೆ ಬಾರದೆ ಅವಘಡ ಸಂಭವಿಸುತ್ತಿದೆ. ಅಪಘಾತಗಳು ಉಂಟಾದಾಗ ನಿಲ್ಲಿಸಿರುವ ವಾಹನಗಳಿಗೂ ತೊಂದರೆ ಆಗುತ್ತಿದ್ದು, ಜನರಿಗೂ ಸಮಸ್ಯೆಯಾಗುತ್ತಿದೆ ಈ ಸಮಸ್ಯೆಯನ್ನು ಆ ವಾರ್ಡ್‍ನ ಕಾರ್ಪೊರೇಟರ್ ಗಮನ ಹರಿಸಿ ತಿರುವಿನಲ್ಲಿ ಪಾರ್ಕಿಂಗ್ ಮಾಡುವುದನ್ನು ತಪ್ಪಿಸಿ ನೇರವಾಗಿ ರೈಲ್ವೇ ಸ್ಟೇಷನ್ ಬಳಿ ಪಾರ್ಕಿಂಗ್ ಮಾಡುವಂತೆ ಕ್ರಮ ಕೈಗೊಳ್ಳಬೇಕು.
ದೂರ ಪ್ರಯಾಣಿಕರು ಇಲ್ಲಿ ಬೆಳಂಬೆಳಗ್ಗೆಯೇ ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಿ ಹೋಗುತ್ತಾರೆ. ನಾವೂ ಹೇಳಿ ಹೇಳಿ ಸಾಕಾಗಿದೆ. ಹಲವಾರು ಬಾರಿ ಪೋಲೀಸರ ಗಮನಕ್ಕೂ ತಂದಿದ್ದೇವು. ಆದರೂ ಪರಿಹಾರವಾಗಿರಲಿಲ್ಲ. ಪುನಃ ಜಯನಗರ ಎಸ್.ಐ ಗೆ ಸಮಸ್ಯೆ ತಿಳಿಸಿದ್ದೇವೆ. ಇವತ್ತೇ ಒಬ್ಬ ಕಾನ್ಸ್‍ಟೇಬಲ್‍ನನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸುವುದಾಗಿ ಮತ್ತು ಅಲ್ಲಿ ಪಾರ್ಕಿಂಗ್ ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. -ಮಹಮ್ಮದ್ ಪೀರ್,ಸ್ಥಳೀಯರು ವಾರ್ಡ್ ನಂ:18.
ಮಕ್ಕಳ ಶಾಲಾ ವಾಹನಗಳಿಗೆ ತಿರುವಿನಲ್ಲಿ ದಿನಂಪ್ರತಿ ತೊಂದರೆಯುಂಟಾಗುತ್ತಿದೆ. ಚಾಲಕ ವಾಹನವನ್ನು ಕ್ರಾಸಿಂಗ್ ಮಾಡಿಕೊಳ್ಳಲು ಪರದಾಡುವಂತಾಗಿದೆ. ಇಲ್ಲಿ ಸುಮಾರು ಸಣ್ಣಪುಟ್ಟ ಅಪಘಾತಗಳು ಆಗಾಗ ಸಂಭವಿಸುತ್ತಲಿದ್ದು. ರಾತ್ರಿ ಸಮಯದಲ್ಲಿ ವೇಗವಾಗಿ ಬರುವ ವಾಹನಗಳಿಗೆ ತೊಂದರೆ ಇಲ್ಲಿ ಕಟ್ಟಿಟ್ಟ ಬುತ್ತಿ. ಜನರು ರೈಲ್ವೇ ಸ್ಟೇಷನ್‍ಗೆ ಹೋಗಲು ತಮಗೆ ಹತ್ತಿರವಾಗುತ್ತದೆ ಎಂದು ಇಲ್ಲಿ ನಿಲ್ಲಿಸುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಈ ಕುರಿತು ಕಾರ್ಪೊರೇಟರ್ ಕಣ್ಮುಚ್ಚಿಕೊಂಡಿದ್ದಾರೆ.-ಮಹಮ್ಮದ್ ಅಬ್ದುಲ್. ಸ್ಥಳೀಯರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
