ರಾಜಕೀಯ ಪ್ರಾತಿನಿಧ್ಯಕ್ಕಾಗಿ ಸಂಘಟಿತರಾಗಿ

ದಾವಣಗೆರೆ:

      ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಇತರೆ ಸೌಲಭ್ಯ ಪಡೆಯಲು ಶಿವಸಿಂಪಿ ಸಮಾಜದವರು ಸಂಘಟಿತ ಹೋರಾಟ ನಡೆಸಬೇಕೆಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಕರೆ ನೀಡಿದರು.

     ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಭಾನುವಾರ ಶಿವಸಿಂಪಿ ಸಮಾಜದಿಂದ ಏರ್ಪಡಿಸಿದ್ದ ಶಿವಸಿಂಪಿ ಸಮಾವೇಶ, ಕುಲಗುರು ಶರಣ ಶಿವದಾಸಿಮಯ್ಯ ಜಯಂತ್ಯುತ್ಸವ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಬೆಳಕಿನ ಸೆಳಕು ಪುಸ್ತಕ ಬಿಡುಗಡೆ, ನೂತನ ಕಾರ್ಯಕಾರಿ ಮಂಡಳಿಗೆ ಸೇವಾದೀಕ್ಷೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

    ದಾವಣಗೆರೆಯಲ್ಲಿ ಅಂದಾಜು 50 ಸಾವಿರ ಜನಸಂಖ್ಯೆ ಹೊಂದಿರುವ ಶಿವಸಿಂಪಿ ಸಮಾಜದಿಂದ ಈ ವರೆಗೂ ಒಬ್ಬರೂ ಶಾಸಕ, ಸಂಸದ, ಮೇಯರ್ ಆಗದಿರುವುದು ಬೇಸರದ ಸಂಗತಿಯಾಗಿದೆ. ನೀವು ರಾಜಕೀಯ ಪ್ರಾತಿನಿಧ್ಯ ಪಡೆದರೆ, ನಿಮ್ಮ ಸಮಾಜದಲ್ಲಿರುವ ಬಡವರಿಗೆ, ನೊಂದವರಿಗೆ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ. ಆದ್ದರಿಂದ ರಾಜಕೀಯ ಪ್ರಾತಿನಿಧ್ಯ ಪಡೆಯಲಿಕ್ಕಾಗಿ ಸಂಘಟಿತರಾಗುವ ಮೂಲಕ ಹೋರಾಟ ನಡೆಸಬೇಕೆಂದು ಕಿವಿಮಾತು ಹೇಳಿದರು.

     ರಾಜಕೀಯ ನಾಯಕರು ಶಿವಸಿಂಪಿಯವರ ಮಾತು ಕೇಳಬೇಕಾದರೆ, ಸಂಘಟನೆ ಎಂಬ ಖಡ್ಗ ಹಿಡಿಯುವುದು ಅನಿವಾರ್ಯವಾಗಿದೆ. ಯಾವುದೇ ಸಮಾಜ ಸಂಘಟನೆಯಾಗುವುದರಿಂದ ಸ್ವಾಭಿಮಾನ ಬಂದು, ದುಡಿದು ತಿನ್ನಬೇಕೆಂಬ ಸ್ವಾಲಂಬನೆ ಭಾವನೆ, ಹಂಚಿ ತಿನ್ನುವ ಸಹಕಾರ ಗುಣ, ಸರ್ವರನ್ನು ಪ್ರೀತಿಯಿಂದ ಕಾಣುವ ಸಮ ಭಾವನೆ ಬಂದು, ಸಮಾನತೆಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

      ನೀವು ಹಚ್ಚುವ ಸಂಘಟನೆ ಎಂಬ ದೀಪ ನಿರಂತರವಾಗಿ ಉರಿಯುವ ಮೂಲಕ ನಿಮ್ಮ ಸಮಾಜದಲ್ಲಿರುವ ಬಡವರಿಗೆ ಬೆಳಕು ನೀಡುವ ಮೂಲಕ ಅವರನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಬೇಕು. ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕೇ, ಹೊರತು ಶಿಕ್ಷಣ ಕಲಿಸಿ ಜವಳಿ ಅಂಗಡಿಗೆ ಕೆಲಸ ಮಾಡಲು ಕಲಿಸಬಾರದು. ಬದಲಿಗೆ ಜವಳಿ ಅಂಗಡಿ ಹಾಕುವಂತೆ ಸ್ವಾವಲಂಬಿಗಳನ್ನಾಗಿ ರೂಪಿಸಬೇಕೆಂದು ಸಲಹೆ ನೀಡಿದರು.

      ಯಾವುದೇ ಮನುಷ್ಯ ಸ್ವಚ್ಛಂದವಾಗಿ ಬದುಕಬೇಕಾದರೆ, ಬಟ್ಟೆ ಹಾಗೂ ಊಟ ಅತ್ಯವಶ್ಯವಾಗಿದ್ದು, ಬಟ್ಟೆ ಹೊಲೆದುಕೊಟ್ಟು ಮಾನವನ ಮಾನ ಕಾಪಾಡಿದ ಕೀರ್ತಿ ಶಿವಸಿಂಪಿ ಸಮಾಜಕ್ಕೆ ಸಲ್ಲಲಿದೆ. ಬಸವಣ್ಣನವರ ಕಾಯಕ ಮತ್ತು ದಾಸೋಹ ಪ್ರಜ್ಞೆಯನ್ನು ಇಟ್ಟುಕೊಂಡು, ಸಮಾಜವನ್ನು ಉದ್ಧರಿಸಿದ ಕೀರ್ತಿ ನಿಮ್ಮ ಸಮಾಜಕ್ಕೆ ಸಲ್ಲಲಿದೆ ಎಂದು ಹೇಳಿದರು.

      ಚಿಗಟೇರಿ ಮನೆತನದವರು ಚಿಗಟೇರಿ ಆಸ್ಪತ್ರೆಯ ಕಟ್ಟಡ ನಿರ್ಮಿಸಿರುವುದಲ್ಲದೇ, ಅದಕ್ಕೆ ಬೇಕಾದ ಉಪಕರಣಗಳನ್ನು ಕೊಡಿಸಿರುವುದು, ಮುರುಘ ಮಠಕ್ಕೆ ಜಯದೇವ ವೃತ್ತದ ಬಳಿ 9 ಎಕರೆ ಜಮೀನು ನೀಡಿರುವ ಮೈಲಾರದ ಮಠದವರು, ಬಾಪೂಜಿ ವಿದ್ಯಾಸಂಸ್ಥೆಯನ್ನು ಆರಂಭಿಸಿದ ಎಸ್.ಕೊಟ್ರಬಸಪ್ಪನವರು ದಾವಣಗೆರೆಯನ್ನು ಶೈಕ್ಷಣಿಕ ನಗರಿಯನ್ನಾಗಿಸಿರುವುದು ಶಿವಸಿಂಪಿ ಸಮಾಜದಲ್ಲೂ ಸಾಕಷ್ಟು ದಾಸೋಹಿಗಳಿದ್ದಾರೆಂಬುದಕ್ಕೆ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು.

      ಕರ್ನಾಟಕ ಶಿವಸಿಂಪಿ ಸಮಾಜದ ಅಧ್ಯಕ್ಷ ಚಿಗಟೇರಿ ಜಯಪ್ರಕಾಶ್ ಮಾತನಾಡಿ, ಹಿಂದೆ ಮದುವೆಗಳಿಗೆ ಹೋಗಿ, ಸಮಾಜದ ಏಳಿಗೆಗಾಗಿ ದೇಣಿಗೆ ಸಂಗ್ರಹಿಸುತ್ತಿದ್ದೇವು. ಬಳಿಕ ಸಮಾಜವನ್ನು ಸಂಘಟಿಸಬೇಕೆಂಬ ಸದುದ್ದೇಶದಿಂದ ಅಖಿಲ ಕರ್ನಾಟಕ ಶಿವಸಿಂಪಿ ಮಹಾಸಭಾ ಸ್ಥಾಪನೆ ಮಾಡಿ, ತಮ್ಮನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದ್ದರು. ಆದರೆ, ನಂತರದಲ್ಲಿ ಒಂದೊಂದು ಊರುಗಳಲ್ಲಿ 2-3 ಸಂಘಟನೆಗಳು ಆರಂಭ ಆಗಿ, ಸಂಘಟನೆ ಹೊಡೆದು ಹೋಯಿತು. ಅಲ್ಲದೇ, ಸಮಾಜದಲ್ಲಿರುವ ಬಡವರಿಗಾಗಿ ಏನೂ ಮಾಡಲಾಗುತ್ತಿರಲಿಲ್ಲ. ಆದ್ದರಿಂದ ನಾನು ಭ್ರಮನಿರಸನಾಗಿ ಸಂಘಟನೆಯಿಂದ ದೂರ ಉಳಿದುಬಿಟ್ಟೆ ಎಂದು ಬೇಸರ ವ್ಯಕ್ತಪಡಿಸಿದರು.

      ಇಂದು ಎಲ್ಲರೂ ಒಂದಾದಬೇಕೆಂಬುದಾಗಿ ಕರೆ ಕೊಡುತ್ತಿರುವುದು ಬರೀ ನಟನೆಯಾಗಿದೆ. ಬಡವರಿಗೆ ಹೇಗೆ ಸಹಕರಿಸಬೇಕೆಂಬುದರ ಬಗ್ಗೆ ಯಾರೂ ಆಸಕ್ತಿ ತೋರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

      ಇದೇ ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ಮರುಳಸಿದ್ದಪ್ಪ ಅವರ ‘ಬೆಳಕಿನ ಸೆಳಕು’ ಪುಸ್ತಕ ಬಿಡುಗಡೆ ಮಾಡಲಾಯಿತು .ಸಮಾಜದ ನೂತನ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಜವಳಿ ಪ್ರಾಸ್ತಾವಿಕ ಮಾತನಾಡಿದರು. ಸಮಾಜದ ಜಿಲ್ಲಾಧ್ಯಕ್ಷ ಗುರುಬಸಪ್ಪ ಬೂಸ್ನೂರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾಜ ಮುಖಂಡರಾದ ಎಸ್.ಷಣ್ಮುಖಪ್ಪ, ವಿ.ವಿ.ಶೀರಿ, ಸುಭಾಷ್ ಕುಬಸದ್, ಎಸ್.ವಿ.ಕೊಟ್ರೇಶ್, ಎಚ್.ಗಂಜಿ ಹುಬ್ಬಳ್ಳಿ, ಶಂಭುಲಿಂಗಪ್ಪ ಕೋಲಾರ್, ವಿ.ಸಿ.ಎಸ್. ಮೂರ್ತಿ, ಮಂಜುನಾಥ್ ಜವಳಿ, ಕಣಕುಪ್ಪಿ ಮುರುಗೇಶಪ್ಪ, ಹೇಮಣ್ಣ ಜವಳಿ, ಶಿವಕುಮಾರ್ ಬಿ.ಎಂ.ಜಗದೀಶಪ್ಪ ಬಾವಿಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.ಮಂಜುನಾಥ್ ಅಖಂಡ ಶಾಮನೂರು ಪ್ರಾರ್ಥಿಸಿದರು. ಪ್ರಕಾಶ್ ಬೂಸ್ನೂರ್ ಸ್ವಾಗತಿಸಿದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap