ಹುಳಿಯಾರು
ಇತ್ತೀಚಿನ ದಿನಗಳಲ್ಲಿ ಸರ್ಕಾರದಿಂದ ಅನುಧಾನ ತರುವುದು ಕಷ್ಟದ ಕೆಲಸ. ಕಷ್ಟಪಟ್ಟು ತಂದಿರುವ ಅನುಧಾನದಲ್ಲಿ ಕಳಪೆ ಕಾಮಗಾರಿ ಮಾಡಿದರೆ ನಾನು ಸಹಿಸುವ ಶಾಸಕನಲ್ಲ ಎಂದು ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಖಡಕ್ ಎಚ್ಚರಿಕೆ ನೀಡಿದರು.
ಹುಳಿಯಾರು ಹೋಬಳಿಯ ಕೆಂಕೆರೆಯಲ್ಲಿ ನೂತನ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ವೈಯಕ್ತಿಕ ಧ್ವೇಷ ಹಾಗೂ ಸಣ್ಣಪುಟ್ಟ ಗೊಂದಲಗಳಿಂದ ಗ್ರಾಮಗಳಲ್ಲಿ ಆಗಲಿರುವ ಅಭಿವೃದ್ಧಿ ಕಾಮಗಾರಿ ಅಡ್ಡಿ ಮಾಡಬೇಡಿ. ಅಭಿವೃದ್ಧಿಯಲ್ಲೂ ರಾಜಕಾರಣ ಮಾಡಿ ಮುಂದೊಂದು ದಿನ ಊರಿನ ಅಭಿವೃದ್ಧಿಗೆ ಕಂಟಕನಾದ ಎನ್ನುವ ಅಣೆಪಟ್ಟಿ ಕಟ್ಟಿಕೊಳ್ಳಬೇಕಿ. ನನಗಿಂತ ಮನೆ ದೊಡ್ಡದು, ಮನೆಗಿಂತ ಊರು ದೊಡ್ಡದು, ಊರಿಗಿಂತ ನಾಡು ದೊಡ್ಡದು ಎಂದು ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಿ ಎಂದರು.
ಸುವರ್ಣ ಗ್ರಾಮ ಯೋಜನೆಯಡಿ ಕೆಂಕೆರೆ ಗ್ರಾಮ ಪಂಚಾಯ್ತಿಗೆ 50 ಲಕ್ಷ ರೂ. ಹಾಗೂ ಎಸ್ಸಿ, ಎಸ್ಟಿ ಅನುಧಾನದಲ್ಲಿ 35 ಲಕ್ಷ ರೂ.ಗಳನ್ನು ನೀಡಿದ್ದು ಎಲ್ಲರೂ ಒಗ್ಗಟ್ಟಿನಿಂದ ಈ ಹಣದ ಸದ್ಬಳಕೆ ಮಾಡಿಕೊಳ್ಳಿ ಎಂದು ಕಿವಿ ಮಾತು ಹೇಳಿದರಲ್ಲದೆ ಬರಶಿಡ್ಲಹಳ್ಳಿ ಹಾಗೂ ಕೆಂಕೆರೆ ಗ್ರಾಮಕ್ಕೆ ಪಶು ಆಸ್ಪತ್ರೆ ಮಂಜೂರಿಗೆ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಕೆಂಕೆರೆ ನವೀನ್ ಅವರು ಮಾತನಾಡಿ ಕಳೆದ 10 ವರ್ಷಗಳಿಂದ ಕೆಂಕೆರೆ ಗ್ರಾಪಂಗೆ ಒಂದು ರೂಪಾಯಿಯ ಶಾಸಕರ ನಿಧಿ ಹಣ ಕೊಟ್ಟಿರಲಿಲ್ಲ. ಹಾಗಾಗಿಯೇ ದೊಡ್ಡ ಊರಾಗಿದ್ದರೂ ಅಭಿವೃದ್ಧಿ ಕಂಡಿರಲಿಲ್ಲ. ಈಗ ಜೆಸಿಎಂ ಅವರು ಕೋಟ್ಯಾಂತರ ರೂ. ಹಣ ನೀಡಿದ್ದಾರೆ. ಅಲ್ಲದೆ ಕಾಮಗಾರಿ ಮಾಡಲು ತಕರಾರಿರುವ ಪ್ರದೇಶಕ್ಕೆ ಖುದ್ದು ಬೇಟಿ ನೀಡಿ ಮನವೊಲಿಸಿ ಕಾಮಗಾರಿ ಮಾಡಿಸುತ್ತಿದ್ದಾರೆ. ಇಂತಹ ಶಾಸಕರನ್ನು ಪಡೆದಿರುವುದು ನಮಗೆ ಹೆಮ್ಮೆಯ ಸಂಗತಿ ಎಂದರು.
ಗ್ರಾಪಂ ಅಧ್ಯಕ್ಷೆ ಆಶಾಉಮೇಶ್, ಉಪಾಧ್ಯಕ್ಷ ಜಯಣ್ಣ, ಸಿಡಿಪಿಓ ತಿಪ್ಪಯ್ಯ, ಮೇಲ್ವಿಚಾರಕಿ ಲಕ್ಷ್ಮೀ, ತಾಪಂ ಸದಸ್ಯ ಕೇಶವಮೂರ್ತಿ, ಮಾಜಿ ಸದಸ್ಯ ನಿರಂಜನ್, ಸೀತರಾಮು, ಗ್ರಾಪಂ ಸದಸ್ಯರಾದ ಕಾಡಿನರಾಜನಾಗರಾಜು, ಪಪಂ ಸದಸ್ಯ ಹೇಮಂತ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ