ದಾವಣಗೆರೆ:
ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ತಾಲ್ಲೂಕಿನ ತೋಳಹುಣಸೆ ಗ್ರಾಮದಲ್ಲಿ ಊರು ವಿಭಜಿಸುವಂತೆ ಅವೈಜ್ಞಾನಿಕ ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡುತ್ತಿದ್ದು, ತಕ್ಷಣವೇ ಈ ಕಾಮಗಾರಿಯನ್ನು ಸ್ಥತಗಿತಗೊಳಿಸಿ ಪಿಲ್ಲರ್ ಹಾಕಿ ಮೇಲ್ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ತೋಳಹುಣಸೆ ಲಂಬಾಣಿ ತಾಂಡದ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ತಮ್ಮ ಬೇಡಿಕೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥರಾದ ಮಂಜಾ ನಾಯ್ಕ, ಮೇಲ್ಸೇತುವೆಯನ್ನು ರಕ್ಷಣಾ ಗೋಡೆಗಳನ್ನು ನಿರ್ಮಿಸುವ ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಲಂಬಾಣಿ ತಾಂಡವೇ ಇಬ್ಭಾಗವಾಗಲಿದೆ. ರೈಲ್ವೆ ಮೇಲ್ಸೇತುವೆ ನಿರ್ಮಿಸುತ್ತಿರುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಲಂಬಾಣಿ ತಾಂಡವನ್ನೇ ವಿಭಜಿಸುವ ರೀತಿಯಲ್ಲಿ ತಡೆಗೋಡೆ ನಿರ್ಮಿಸಿ, ಆರ್‍ಒಬಿ ನಿರ್ಮಿಸುತ್ತಿರುವುದು ಅತ್ಯಂತ ಅವೈಜ್ಞಾನಿಕವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಹೀಗೆಯೇ ಅವೈಜ್ಞಾನಿಕವಾಗಿ ಮೇಲ್ಸೇತುವೆ ನಿರ್ಮಿಸುತ್ತಿದ್ದಾಗ ಗ್ರಾಮಸ್ಥರು ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಶಾಸಕ ರ. ಎನ್. ಲಿಂಗಣ್ಣ ಅವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡಾಗ ಅಧಿಕಾರಿಗಳನ್ನು ಕರೆದು ಗ್ರಾಮಸ್ಥರ ಒತ್ತಾಸೆಯಂತೆ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ, ಈಗ ಸಂಸದರು ಮತ್ತು ಶಾಸಕರು ಅಧಿವೇಶನಕ್ಕೆ ಹೋಗಿರುವ ಸಂದರ್ಭದಲ್ಲಿ ಅಧಿಕಾರಿಗಳು ಕಮಾಗರಿ ನಡೆಸುತ್ತಿದ್ದಾರೆ ಎಂದರು.
ತಾಂಡದ ಮಧ್ಯೆ ಇರುವ 80 ಮೀಟರ್ ರಸ್ತೆಯಲ್ಲಿ 20 ಮೀಟರ್‍ಗೆ ಒಂದರಂತೆ ಮೂರು ಪಿಲ್ಲರ್ ಹಾಕಿ ಮೇಲ್ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತೋಳಹುಣಸೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಲೋಚನಮ್ಮ ಮಂಜುನಾಥ್‍ಗೌಡ್ರು, ಉಪಾಧ್ಯಕ್ಷೆ ನಿರ್ಮಲಾ ನಾಗೇಂದ್ರ ನಾಯ್ಕ, ಗ್ರಾಮಸ್ಥರಾದ ಮಂಜಾನಾಯ್ಕ, ಜಾನು ಬಾಯಿ, ಲಕ್ಷ್ಮಣ ನಾಯ್ಕ, ಮಂಜುನಾಥ್‍ಗೌಡ್ರು, ಮಾನಕಿ ಬಾಯಿ, ಶಾಂತಿ ಬಾಯಿ, ಚಂದ್ರ ನಾಯ್ಕ, ಲೋಕೇಶ್ ನಾಯ್ಕ, ಹನುಮಂತ ನಾಯ್ಕ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
