ಬೆಂಗಳೂರು
ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನ ದೊರೆಯದ ಶಾಸಕರ ಅಸಮಾಧಾನ ತೀವ್ರಗೊಂಡಿದೆ. ಅವರ ಬೆಂಬಲಿಗರ ಪ್ರತಿಭಟನೆ ತಾರಕಕ್ಕೇರಿದೆ.
ಬೆಂಗಳೂರು ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ದೊರೆಯದ ಕಾರಣದಿಂದ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂದೆ ಧರಣಿ ನಡೆಸಿ, ಧಿಕ್ಕಾರ ಕೂಗಿದರು. ಪಕ್ಷದ ಹೈಕಮಾಂಡ್ ಗಮನ ಸೆಳೆಯುವ ಪ್ರಯತ್ನ ನಡೆಸಿದರು. ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ” ಬೆಂಗಳೂರು ಬಂದ್ ಗೆ ” ಕರೆ ನೀಡುವುದಾಗಿ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ.
ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ನೇತೃತ್ವದಲ್ಲಿ ಕೆಲವು ಬಿಬಿಎಂಪಿ ಸದಸ್ಯರು, ನೂರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ರಾಮಲಿಂಗಾ ರೆಡ್ಡಿ ಅವರಿಗೆ ಮಹಾ ಮೋಸವಾಗಿದ್ದು, ಶಾಸಕರಾಗಿ, ಸಚಿವರಾಗಿ, ಕೆಪಿಸಿಸಿಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಬೆಂಗಳೂರಿನಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿರುವುದಲ್ಲದೇ ಚುನಾವಣೆಯಲ್ಲಿ ಬೆಂಗಳೂರಿನ 15 ಕ್ಕೂ ಹೆಚ್ಚು ಶಾಸಕರನ್ನು ಗೆಲ್ಲಿಸುವಲ್ಲಿ ರಾಮಲಿಂಗಾರೆಡ್ಡಿ ಪ್ರಮುಖ ಪಾತ್ರವಹಿಸಿದ್ದಾರೆ. ಇಂತಹ ಹಿರಿಯ ನಾಯಕರಿಗೆ ಸಚಿವ ಸ್ಥಾನ ನಿರಾಕರಿಸುವುದು ಸರಿಯಲ್ಲ ಎಂದು ಪಕ್ಷದ ಕಾರ್ಯಕರ್ತರು ತಮ್ಮ ಅಸಮಾಧಾನ ಕಾರಿಕೊಂಡಿದ್ದಾರೆ.
ಬಿಬಿಎಂಪಿಯಲ್ಲಿ ಪಕ್ಷ ಅಧಿಕಾರಕ್ಕೆ ತರುವಲ್ಲಿ ರಾಮಲಿಂಗಾ ರೆಡ್ಡಿ ಪಾತ್ರ ಮಹತ್ವದ್ದಾಗಿದೆ. ಅಂತಹ ಶ್ರೇಷ್ಠ ನಾಯಕರಿಗೆ ಪಕ್ಷ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡಿದೆ. ಇಂದು ಸಂಜೆವರೆಗೆ ಪಕ್ಷದ ಹೈಕಮಾಂಡ್ ಗೆ ಕಾಲಾವಕಾಶ ನೀಡುತ್ತೇವೆ. ಅಷ್ಟರಲ್ಲಿ ಸೂಕ್ತ ತೀರ್ಮಾನ ಕೈಗೊಂಡು ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದಲ್ಲಿ ನಾಳೆ ಬೆಂಗಳೂರು ಬಂದ್ ಗೆ ಕರೆ ನೀಡುತ್ತೇವೆಂದು ಮಾಜಿ ಮೇಯರ್ ಮಂಜುನಾಥ ರೆಡ್ಡಿ ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ ಹೈಕಮಾಂಡ್ ತೀರ್ಮಾನ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಪರಿಣಾಮ ಬೀರಲಿದೆ. ಈ ಬಗ್ಗೆ ವರಿಷ್ಠರು ಎಚ್ಚರಿಕೆಯಿಂದಿರಬೇಕು ಎಂದು ಹೇಳಿದ್ದಾರೆ.