ಬೆಂಗಳೂರು:
ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕೆಮಿಸ್ಟ್ರಿ ಜತೆಗೆ ಮ್ಯಾಥಮ್ಯಾಟಿಕ್ಸ್ ಕೂಡ ಚೇಂಜ್ ಆಗಲಿದೆ . ಉಪಚುನಾವಣೆಯಲ್ಲಿನ ಸೋಲನ್ನು ಬಡ್ಡಿ ಸಮೇತ ತೀರಿಸಿಕೊಳ್ಳುತ್ತೇವೆ ಎಂದು ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಉಪ ಚುನಾವಣೆಯಲ್ಲಿನ ಸೋಲಿನ ಬಳಿಕ ಪಕ್ಷದ ಕಾರ್ಯಕರ್ತರು ಹಗಲಿರುಳು ಸಂಘಟನೆಗೆ ಶ್ರಮಿಸಿದ್ದಾರೆ.ಸೋಲನ್ನು ಗೆಲುವಾಗಿ ಬದಲಿಸಲು ಟೊಂಕ ಕಟ್ಟಿ ನಿಂತಿದ್ದಾರೆ.ಎಲ್ಲೆಡೆ ಮೋದಿ ದೊಡ್ಡ ಅಲೆ ಇದೆ.ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪನವರು ಸರಳ, ಸಜ್ಜನಿಕೆಗೆ ಹೆಸರಾಗಿದ್ದಾರೆ. ಈ ಎಲ್ಲ ಅಂಶಗಳು ಗೆಲುವಿಗೆ ಪೂರಕವಾಗಲಿವೆ ಎಂದು ಹೇಳಿದರು.
ಕಳೆದ ಉಪ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಮಂತ್ರಿ ಮಾಡುವುದಾಗಿ ಅವರ ಪಕ್ಷದ ವರಿಷ್ಠರು ತುಪ್ಪ ಸವರಿದ್ದರು. ಕೆಲವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ, ಕೆಲವರಿಗೆ ಸಿಕ್ಕಿಲ್ಲ, ಭಿನ್ನಮತ ತಲೆದೋರಿದೆ. ಭಿನ್ನಮತೀಯ ಶಾಸಕರನ್ನು ಮೂರ್ಖರಾಗಿಸಲು ಮತ್ತೆ ತುಪ್ಪ ಹಿಡಿದು ಬರುತ್ತಿದ್ದಾರೆ. ಈಗ ಸಚಿವ ಡಿ.ಕೆ.ಶಿವಕುಮಾರ್‍ಅವರ ಕರೆನ್ಸಿ ಖಾಲಿಯಾಗಿದೆ. ಚುನಾವಣೆಯ ನಂತರ ರಾಜ್ಯ ಸರ್ಕಾರವೇ ಇರುವುದಿಲ್ಲ.ಮಂತ್ರಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.ದೇವೇಂದ್ರಪ್ಪ ಈ ಸಲ ಸಂಸದರಾಗುವುದು ಖಚಿತ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಅಧಿಕಾರದ ದಾಹ ಎಷ್ಟಿದೆ ಎಂಬ ಮೈತ್ರಿಯ ಬಂಡವಾಳ ಬಯಲಾಗಿದೆ. ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವೇ ಸರ್ಕಾರ ಬೀಳಿಸುತ್ತದೆ. ಈ ಚುನಾವಣೆಯಲ್ಲಿ ಎರಡೂ ಪಕ್ಷಗಳ ಮೈತ್ರಿ ಅವುಗಳಿಗೆ ಒಳಪೆಟ್ಟು ಕೊಟ್ಟಿದೆ. ಕೆಲವೆಡೆ ಆಂತರಿಕವಾಗಿ ಕಿತ್ತಾಡಿದರೆ, ಕೆಲವು ಕಡೆ ಬಹಿರಂಗವಾಗಿಯೇ ಎರಡೂ ಪಕ್ಷಗಳ ಕಾರ್ಯಕರ್ತರು ಕಿತ್ತಾಡುತ್ತಿದ್ದಾರೆ. ಇದರಿಂದ ಬಿಜೆಪಿ ಗೆಲುವಿನ ದಾರಿ ಸುಗಮವಾಗಿದೆ. ಈ ಸಲ ನಿಂಬೆಹಣ್ಣು ಸರ್ಕಾರ ಉಳಿಸಲ್ಲ ಎಂದು ವ್ಯಂಗ್ಯವಾಡಿದರು.
ಐಟಿ ದಾಳಿ ಭಯೋತ್ಪಾದಕ ದಾಳಿಯಲ್ಲ. ಎಲ್ಲ ಪಕ್ಷಗಳ ಮುಖಂಡರ ಮನೆಗಳ ಮೇಲೆ ದಾಳಿ ನಡೆಯುತ್ತಿವೆ. ದೇವೇಂದ್ರಪ್ಪನವರ ಮನೆ ಮೇಲೂ ದಾಳಿ ನಡೆದಿದೆ. ಅಕ್ರಮವಾಗಿ ಸಂಪತ್ತು ಸಂಗ್ರಹಿಸದಿದ್ದರೆ ಐಟಿ ದಾಳಿ ನಡೆದರೆ ಏಕೆ ಭಯ ಬೀಳಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








