ಪ್ರಕಾಶ್ ರೈ ಅನುಸರಿಸಿದ ಉಪೇಂದ್ರ..!!

ಬೆಂಗಳೂರು

       ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಚಿತ್ರನಟ ಪ್ರಕಾಶ್ ರೈ ಮುನ್ನೆಲೆಗೆ ಬರುತ್ತಿದ್ದಂತೆ ಮತ್ತೋರ್ವ ಚಿತ್ರನಟ ಉಪೇಂದ್ರ ಸುದ್ದಿಯ ಕೇಂದ್ರ ಬಿಂದುವಿಂದಾಗಿದ್ದಾರೆ.

      ಹೌದು ,ಕೆಲವು ತಿಂಗಳ ಹಿಂದಷ್ಟೇ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಹುಟ್ಟುಹಾಕಿದ್ದ ಉಪೇಂದ್ರ, ಲೋಕಸಭಾ ಚುನಾವಣೆಗೆ 28 ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ.

      ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳುಗಳಷ್ಟೆ ಉಳಿದಿದ್ದಂತಹ ಸಂದರ್ಭದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಾಕಾರಣದ ಮೂಲಕ ರಾಜಕೀಯಕ್ಕೆ ಪ್ರವೇಶ ಮಾಡಿದ್ದು, ಸ್ವತಂತ್ರ ಪಕ್ಷ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದರು. 2017 ಸೆಪ್ಟೆಂಬರ್ 18 ರಂದು ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ) ಎನ್ನುವ ಪ್ರಾದೇಶಿಕ ಪಕ್ಷಕ್ಕೆ ಸಾರಥಿಯೆಂದು ಘೋಷಿಸಿಕೊಂಡರು. ಆದರೆ ಪಕ್ಷ ಘೋಷಣೆಯಾಗಿ 6 ತಿಂಗಳೊಳಗೆ ಕೆಪಿಜೆಪಿ ಸಂಸ್ಥಾಪಕ ಮಹೇಶ್ ಗೌಡ ಅವರಿಗೂ ಉಪೇಂದ್ರ ಅವರಿಗೂ ಸರಿಬಾರದ ಕಾರಣ, ಪಕ್ಷದಿಂದ ರಿಯಲ್ ಸ್ಟಾರ್ ಉಚ್ಚಾಟನೆಗೊಂಡಿದ್ದರು. ಪಕ್ಷದಲ್ಲಿ ಉಪೇಂದ್ರ ವೈಯುಕ್ತಿಕ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಮಹೇಶ್ ಗೌಡ ದೂರಿದ್ದರು.

       ಅದಾದ ಕೆಲ ದಿನಗಳ ಬಳಿಕ 2018, ಸೆಪ್ಟೆಂಬರ್ 18 ರಂದು ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಅನ್ನುವ ಹೊಸ ಪಕ್ಷವನ್ನು ಉಪೇಂದ್ರ ಘೋಷಿಸಿದರು. ಹೊಸ ಪಕ್ಷವಾದ್ದರಿಂದ ನೋಂದಣಿ ಸಾಧ್ಯವಾಗಿಲ್ಲ ಹೀಗಾಗಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದ್ದರು.

     ಇದೀಗ ಲೋಕಸಭೆ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಉಪೇಂದ್ರ ಮತ್ತೆ ತಮ್ಮ ರಾಜಕೀಯದ ಬಗ್ಗೆ ಮಾತು ಆರಂಭಿಸಿದ್ದಾರೆ.ನಗರದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಬಲವಾದ ಪ್ರಾದೇಶಿಕ ಪಕ್ಷ ಬೇಕು ಎಂಬುದನ್ನು ಮನಗಂಡಿದ್ದೇನೆ. ಹೀಗಾಗಿ ಯುಪಿಪಿ ಪಕ್ಷವನ್ನು ಸ್ಥಾಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

      ತಮ್ಮ ಚಿತ್ರಗಳ ಸಂಭಾಷಣೆ ಶೈಲಿಯಲ್ಲಿಯೇ ಮಾತನಾಡಿದ ಅವರು, ರಾಜಕಾರಣಿಗಳಂತೆ ಪ್ರಣಾಳಿಕೆ ಬಿಡುಗಡೆ ಮಾಡಿ, ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದು ಹೇಳುವುದಿಲ್ಲ. ನಮ್ಮ ಪಕ್ಷ ಹೇಗೆ ಮಾಡುತ್ತದೆ ಎನ್ನುವುದನ್ನು ಹೇಳುತ್ತೇವೆ. ಜನರು ರಾಜಕಾರಣಿಗಳಿಗಳಾಗಿ ಕಾಯಬಾರದು. ತಮಗೆ ತಾವೇ ಮತ ಚಲಾವಣೆ ಮಾಡಿಕೊಳ್ಳಬೇಕು. ಆಯ್ಕೆ, ಚುನಾವಣೆ, ಪರಿಶೀಲನೆ, ನಿರಾಕರಣೆ ಹಾಗೂ ಬಡ್ತಿ ಎಂಬ ಪಂಚ ಪ್ರಕ್ರಿಯೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, 15 ದಿನಗಳೊಳಗೆ ತಮ್ಮ ಸ್ಪರ್ಧೆ ಬಗ್ಗೆ ಸ್ಪಷ್ಟ ನಿರ್ಧಾರ ಹೊರಬೀಳಲಿದೆ ಎಂದರು.

       ರಾಜ್ಯದಲ್ಲಿ ತಮ್ಮ ಪಕ್ಷಕ್ಕೆ ಬಹುಮತ ದೊರೆಯುವವರೆಗೂ ಸರ್ಕಾರ ರಚನೆ ಮಾಡುವುದಿಲ್ಲ. ಅನಿವಾರ್ಯ ಎನ್ನುವಂತಹ ಪರಿಸ್ಥಿತಿ ತಲೆದೋರಿದಾಗ ಬೇರೆ ಪಕ್ಷಗಳಿಗೆ ಬೆಂಬಲ ನೀಡುತ್ತೇವೆ. ಯಾವುದೇ ಕಾರಣಕ್ಕೂ ರಾಜಕೀಯ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಉಪೇಂದ್ರ ತಿಳಿಸಿದರು.

         ಶಾಸಕರ ಖರೀದಿ, ರೆಸಾರ್ಟ್ ರಾಜಕಾರಣ ಎನ್ನುವುದು ಇಂದು ನಿನ್ನೆಯದಲ್ಲ. 10 ವರ್ಷಗಳ ಹಿಂದೆಯೂ ಇತ್ತು. ಮುಂದೆ 15-20 ವರ್ಷಗಳಾದರೂ ಇದು ಇರುತ್ತದೆ. ಮತದಾರರು ಚುನಾವಣೆಯಲ್ಲಿ ನಾಯಕರನ್ನು ಆಯ್ಕೆ ಮಾಡುವುದನ್ನು ಬಿಟ್ಟು ಕಾರ್ಮಿಕರನ್ನು ಆಯ್ಕೆ ಮಾಡಬೇಕು. ನಟ ಪ್ರಕಾಶ್ ರೈ ಸೇರಿದಂತೆ ಜನಪರ ಕೆಲಸಗಳಿಗಾಗಿ ರಾಜಕಾರಣಕ್ಕೆ ಯಾರೇ ಬಂದರೂ ಅವರನ್ನು ಸ್ವಾಗಿಸುತ್ತೇನೆ ಎಂದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link