ತುಮಕೂರು
ಜಿಲ್ಲೆಯಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಲು ಯೋಜಿಸಿರುವ ಜಲರಕ್ಷಣಾ ಕಾಮಗಾರಿಗಳ ವಿವರವನ್ನು ಕಡ್ಡಾಯವಾಗಿ ಜಲಶಕ್ತಿ ಅಭಿಯಾನದ ಪೋರ್ಟಲ್‍ಗೆ ಅಪ್‍ಲೋಡ್ ಮಾಡಬೇಕೆಂದು ಜಲಶಕ್ತಿ ಅಭಿಯಾನದ ಕೇಂದ್ರ ತಂಡದ ಜಿಲ್ಲಾ ನೋಡಲ್ ಅಧಿಕಾರಿ ಆರ್.ಕೆ. ಚಂಡೋಲಿಯಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿಂದು ನಡೆದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಜಲಸಂರಕ್ಷಣೆ, ಹಳೆ ಹಾಗೂ ಸಾಂಪ್ರಾದಾಯಿಕ ಕೆರೆ-ಕಟ್ಟೆ ಅಭಿವೃದ್ಧಿ, ನೀರಿನ ಪುನರ್ಬಳಕೆ, ಕೊಳವೆ ಬಾವಿಗಳ ಮರುಪೂರಣ, ಜಲಾನಯನ ಅಭಿವೃದ್ಧಿ ಹಾಗೂ ಅರಣ್ಯೀಕರಣ ಕಾಮಗಾರಿಗಳ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಾ ಕಲ್ಯಾಣ್ ಮಾತನಾಡಿ ಜಿಲ್ಲೆಯಲ್ಲಿ ಜುಲೈ ಮಾಹೆಯಿಂದ ಈವರೆಗೂ ತುಮಕೂರು, ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ, ಮಧುಗಿರಿ ಹಾಗೂ ಶಿರಾ ತಾಲೂಕು ಸೇರಿದಂತೆ ಒಟ್ಟು 6 ತಾಲೂಕುಗಳಲ್ಲಿ 658 ಜಲಸಂರಕ್ಷಣಾ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಂಡಕ್ಕೆ ಮಾಹಿತಿ ನೀಡಿದರು.
ಜಲಶಕ್ತಿ ಅಭಿಯಾನದ ಕೇಂದ್ರ ತಂಡವು ಆಗಸ್ಟ್ 8ರಂದು ಈ 6 ತಾಲೂಕುಗಳಿಗೆ ಭೇಟಿ ನೀಡಿ ಪೂರ್ಣಗೊಂಡ ಕಾಮಗಾರಿಗಳನ್ನು ಪರಿಶೀಲಿಸಲಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಜರಿದ್ದು, ಕಾಮಗಾರಿಗಳ ಮಾಹಿತಿ ಒದಗಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಂತರ ಮಾತನಾಡಿದ ಚಂಡೋಲಿಯಾ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಬರುವ ಆಗಸ್ಟ್ 24ರಂದು ಸರ್‍ಪಂಚ್ ದಿನ ಹಾಗೂ ಆ. 31ರಂದು ಸ್ವ-ಸಹಾಯ ಸಂಘಗಳ ದಿನವನ್ನು ಆಚರಿಸಿ ನೀರನ್ನು ಸಂರಕ್ಷಿಸುವ ಬಗ್ಗೆ ಸಾರ್ವಜನಿಕ ಅರಿವು ಮೂಡಿಸಬೇಕೆಂದು ಸಿಇಓ.ಗೆ ಸೂಚಿಸಿದರು. ಅಲ್ಲದೆ ಜಿಲ್ಲೆಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಿಂದ ಆಗಸ್ಟ್ ಮಾಹೆಯಲ್ಲಿ ಕಿಸಾನ್ ಮೇಳಗಳನ್ನು ಹಮ್ಮಿಕೊಂಡು ರೈತರಿಗೆ ನೀರು ಸಂರಕ್ಷಣಾ ವಿಧಾನಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಕೆವಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ನರೇಗಾ ಯೋಜನೆಯಡಿ ಕೈಗೊಂಡಿರುವ ಜಲಸಂರಕ್ಷಣಾ ಕಾಮಗಾರಿಗಳ ಬಗ್ಗೆ ಅವಲೋಕನ ಮಾಡಿದ ಅವರು ಜಲಸಂರಕ್ಷಣಾ ಕಾಮಗಾರಿಗಳನ್ನು ನರೇಗಾ ಯೋಜನೆಯಡಿ ಕೈಗೊಳ್ಳದ ಅಧಿಕಾರಿಗಳಿಗೆ ನರೇಗಾದಡಿ ಜಲಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರಲ್ಲದೆ ಎಲ್ಲ ಸರ್ಕಾರಿ ಕಚೇರಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಕಡ್ಡಾಯವಾಗಿ ಅಳವಡಿಕೊಳ್ಳಲು ಸಂಬಂಧಿಸಿದವರಿಗೆ ಸುತ್ತೋಲೆ ಹೊರಡಿಸಬೇಕೆಂದು ಜಿ.ಪಂ. ಸಿಇಓ ಅವರಿಗೆ ಸೂಚನೆ ನೀಡಿದರು.
ನಂತರ ಮಾತನಾಡಿದ ಶುಭಾ ಕಲ್ಯಾಣ್ ಜಲಸಂರಕ್ಷಣಾ ಕಾಮಗಾರಿಗಳ ಪ್ರಗತಿ ಮಾಹಿತಿಯನ್ನು ಕೃಷಿ ಇಲಾಖೆ ಹೊರತುಪಡಿಸಿದರೆ ಉಳಿದ ತೋಟಗಾರಿಕೆ, ಅರಣ್ಯ, ಪಂಚಾಯತ್ ರಾಜ್ ಇಲಾಖೆ, ಹೇಮಾವತಿ ನಾಲೆ, ಸಣ್ಣ ನೀರಾವರಿ ಇಲಾಖೆಗಳು ಸಲ್ಲಿಸಿರುವುದಿಲ್ಲ. ಕೂಡಲೇ ಮಾಹಿತಿ ಸಲ್ಲಿಸಲು ಸೂಚನೆ ನೀಡಿದರು.
ಸಭೆಯಲ್ಲಿ ಜಲಶಕ್ತಿ ಅಭಿಯಾನದ ಕೇಂದ್ರ ತಂಡದ ಉಪಕಾರ್ಯದರ್ಶಿಗಳಾದ ಸಂಜಯ್ ಶ್ರೀವಾಸ್ತವ್ ಹಾಗೂ ಬಲರಾಮ್ ಪ್ರಸಾದ ಭಿಮಲ್, ತಾಂತ್ರಿಕ ಅಧಿಕಾರಿಗಳಾದ ಕೆ.ಎ. ನಾಯ್ಡು, ಶ್ರೀಕಾಂತ್ ಕಾಂಬ್ಳೆ, ಜಿ.ಪಂ. ಉಪಕಾರ್ಯದರ್ಶಿ(ಅಭಿವೃದ್ಧಿ) ಟಿ.ಕೆ. ರಮೇಶ್, ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ ಹಾಗೂ ತೋಟಗಾರಿಕೆ, ಪಂಚಾಯತ್ ರಾಜ್ ಇಂಜಿನಿಯರಿಂಗ್, ಅರಣ್ಯ, ಸಣ್ಣ ನೀರಾವರಿ ಇಲಾಖೆಗಳ ಅಧಿಕಾರಿಗಳು, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಮತ್ತಿತರ ಅಧಿಕಾರಿಗಳು ಹಾಜರಿದ್ದರು.