ಸಮಸ್ಯೆಗಳ ಸರಮಾಲೆಯಾದ ಉಪ್ಪಾರಹಳ್ಳಿ ಮಾರ್ಗ..!!!

ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಶಾಪ ಹಾಕುತ್ತಿರುವ ಸ್ಥಳೀಯ ನಾಗರಿಕರು

ತುಮಕೂರು

ವಿಶೇಷ ವರದಿ:ರಾಕೇಶ್.ವಿ.

 

 

      ತುಮಕೂರು ನಗರವು 35 ವಾರ್ಡ್‍ಗಳನ್ನೊಳಗೊಂಡು ಬಹುದೊಡ್ಡ ನಗರವಾಗಿದ್ದು, ಇದೀಗ ಸ್ಮಾರ್ಟ್‍ಸಿಟಿ ಕೂಡ ಆಗುತ್ತಿದೆ. ಈ 35 ವಾರ್ಡ್‍ಗಳ ಪೈಕಿ 15ನೇ ವಾರ್ಡ್‍ನಲ್ಲಿನ ಉಪ್ಪಾರಹಳ್ಳಿ ಮಾರ್ಗ ಹಲವು ಸಮಸ್ಯೆಗಳ ಸರಮಾಲೆಯಾಗಿದೆ. ಇಲ್ಲಿರುವ ಸಮಸ್ಯೆಗಳು ಒಂದಾ ಎರಡಾ? ಇಲ್ಲಿನ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿದರೆ ಸಂಖ್ಯೆಗಳೇ ಕಡಿಮೆ ಬರುತ್ತವೇನೋ ಎನಿಸುತ್ತದೆ.

      ನಗರದ 15ನೇ ವಾರ್ಡು ಹಲವು ಸಮಸ್ಯೆಗಳ ಆಗರವಾಗಿದ್ದು, ರೈಲ್ವೆ ನಿಲ್ದಾಣ ರಸ್ತೆಯಲ್ಲಿನ ಯುಜಿಡಿ ಸಮಸ್ಯೆ, ರಸ್ತೆಗೆ ಡಾಂಬರೀಕರಣ, ಕುಡಿಯುವ ನೀರಿಗೆ ಚರಂಡಿ ನೀರು ಮಿಶ್ರಣ, ಅಂಡರ್‍ಪಾಸ್‍ನಲ್ಲಿ ಧೂಳು, ರೈಲ್ವೇ ಕೆಳ ಸೇತುವೆ ಬಳಿ ಇರುವ ಕಸದ ಘಟಕ, ಮುಚ್ಚಿಹೋದ ರಾಜಗಾಲುವೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳು ಕಂಡು ಬರುತ್ತವೆ.

ಡಾಂಬರೀಕರಣಗೊಳ್ಳದ ರಸ್ತೆಗಳು

        ತುಮಕೂರು ರೈಲ್ವೇ ನಿಲ್ದಾಣದ ಮುಂಭಾಗದಲ್ಲಿನ ರಸ್ತೆಯಲ್ಲಿ ಹಲವು ಶಾಲಾ ಕಾಲೇಜುಗಳಿವೆ. ಮಹಿಳಾ ಹಾಸ್ಟ್ಟೆಲ್‍ಗಳಿವೆ. ಜೊತೆಗೆ ನೂರಾರು ಮಂದಿ ಅಲ್ಲಿ ವಾಸ ಮಾಡುತ್ತಾರೆ. ರೈಲ್ವೇ ನಿಲ್ದಾಣಕ್ಕೆ ಹೋಗಲು ಇರುವ ರಸ್ತೆ ಇದಾಗಿರುವುದರಿಂದ ಪ್ರತಿ ದಿನ ನೂರಾರು ವಾಹನಗಳು ಓಡಾಡುತ್ತವೆ. ಇಷ್ಟೆಲ್ಲಾ ಜನರ ಓಡಾಟ ಇರುವ ಈ ರಸ್ತೆಗೆ ಡಾಂಬರೀಕರಣ ಭಾಗ್ಯ ಮಾತ್ರ ದೊರೆತಿಲ್ಲದಿರುವುದು ಶೋಚನೀಯ. ಕಳೆದ ಚುನಾವಣೆಗೆ ವೇಳೆಗೆ ಅಲ್ಲಲ್ಲಿ ತುಪ್ಪ ಸವರಿದಂತೆ ಡಾಂಬರೀಕರಣ ಮಾಡಿದ್ದಾರೆ ಹೊರತು ಸಂಪೂರ್ಣವಾಗಿ ರಸ್ತೆ ಡಾಂಬರೀಕರಣ ಆಗಿಲ್ಲ.

ರಸ್ತೆಯಲ್ಲಿ ಬೃಹತ್ತಾದ ಹಳ್ಳಕೊಳ್ಳಗಳು

       ಸರಸ್ವತಿ ಪುರಂ ಹಾಗೂ ಉಪ್ಪಾರಹಳ್ಳಿ ಭಾಗದಿಂದ ರೈಲ್ವೇ ನಿಲ್ದಾಣಕ್ಕೆ ಇರುವ ಏಕೈಕ ಮಾರ್ಗ ಇದಾಗಿದ್ದು, ಈ ರಸ್ತೆಯುದ್ದಕ್ಕೂ ಬೃಹತ್ತಾದ ಹಳ್ಳಕೊಳ್ಳಗಳು ಬಿದ್ದಿವೆ. ಇದರಿಂದ ದಿನಕ್ಕೆ ಒಂದಾದರೂ ರಸ್ತೆ ಅಪಘಾತ ನಡೆಯುವುದು ಸರ್ವೇ ಸಾಮಾನ್ಯವಾಗಿದೆ. ಇಲ್ಲಿ ಓಡಾಡುವ ಜನರು ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಬೈದುಕೊಳ್ಳುತ್ತಲೇ ಓಡಾಡುತ್ತಾರೆ. ಚುನಾವಣೆ ವೇಳೆಯಲ್ಲಿ ಮಾತ್ರ ಜನಪ್ರತಿನಿಧಿಗಳಿಗೆ ಜನರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಆಗುತ್ತಿಲ್ಲವೇಕೆ ಎಂಬುದು ಸ್ಥಳೀಯರ ಪ್ರಶ್ನೆಯಾಗಿದೆ.

ರಸ್ತೆ ಮೇಲೆ ಹರಿಯುವ ಯುಜಿಡಿ ನೀರು

      ರಸ್ತೆಯಲ್ಲಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಎರಡು ಯುಜಿಡಿ ಘಟಕಗಳು ಅವೈಜ್ಞಾನಿಕವಾಗಿದೆ. ಅಲ್ಲದೆ ನಿರ್ಮಾಣ ಕಾರ್ಯ ಸಂಪೂರ್ಣ ವಿಫಲವಾಗಿದ್ದು, ವಾರದಲ್ಲಿ ಎರಡು ದಿನಕ್ಕೊಮ್ಮೆಯಾದರೂ ಯುಜಿಡಿ ಬ್ಲಾಕ್ ಆಗಿ ಯುಜಿಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಯುಜಿಡಿ ನೀರಿನಿಂದ ಹೆಚ್ಚಿನ ದುರ್ವಾಸನೆ ಬೀರುತ್ತಿದ್ದು, ಇದರಿಂದ ಇಲ್ಲಿ ವಾಸ ಮಾಡುವವರು ದುರ್ವಾಸನೆಯನ್ನು ಭರಿಸುತ್ತಲೇ ವಾಸ ಮಾಡುವಂತಾಗಿದೆ. ಸತತ 40 ವರ್ಷಗಳಿಂದಲೂ ಅಲ್ಲಿಯೇ ವಾಸ ಮಾಡುತ್ತಿರುವ ಸ್ಥಳಿಯರು ಈಗ ಮನೆಯನ್ನೂ ಬಿಡಲಾರದೆ, ಸಮಸ್ಯೆಯೂ ಪರಿಹಾರವಾಗದೆ ನಿತ್ಯ ನರಕದಲ್ಲಿಯೇ ಜೀವನ ನಡೆಸುವಂತಾಗಿದೆ.

ಮುಚ್ಚಿದ ರಾಜಗಾಲುವೆ

      ರೈಲ್ವೇ ಹಳಿಗಳ ಪಕ್ಕದಲ್ಲಿ ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡುವ ಸಲುವಾಗಿ ಅಲ್ಲಿದ್ದಂತಹ ಮಣ್ಣನ್ನು ಪಕ್ಕದ ಕನ್ಸರ್‍ವೆನ್ಸಿ ಜಾಗದಲ್ಲಿದ್ದ ರಾಜಗಾಲುವೆಗೆ ಹಾಕಲಾಗಿದ್ದು, ರಾಜಗಾಲುವೆ ಮುಚ್ಚಿಕೊಂಡು ಹೋಗಿದೆ. ಇದರಿಂದ ಈ ಭಾಗದಲ್ಲಿ ಹರಿಯಬೇಕಾದ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಾ, ಮನೆಯೊಳಕ್ಕೆ ನುಗ್ಗುತ್ತಿವೆ. ಇದರಿಂದ ಸ್ಥಳೀಯ ನಿವಾಸಿಗಳು ಬೇಸತ್ತು ಅಧಿಕಾರಿ ವರ್ಗಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಅಂಡರ್‍ಪಾಸ್‍ನಲ್ಲಿ ಧೂಳು

      ಉಪ್ಪಾರಹಳ್ಳಿ ಕೆಳಸೇತುವೆಯ ಮೂಲಕ ಶಾಂತಿನಗರ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ತೆರಳಲು ಈ ಅಂಡರ್‍ಪಾಸ್ ಪ್ರಮುಖ ದಾರಿಯಾಗಿದೆ. ಸ್ಥಳೀಯರ ಅನುಕೂಲಕ್ಕಾಗಿ ಲಕ್ಷಾಂತರ ರೂಗಳನ್ನು ವೆಚ್ಚ ಮಾಡಿ ಸಂಸದರ ನಿಧಿಯಲ್ಲಿ ಯೋಜನೆ ರೂಪಿಸಿ, ಅಂಡರ್‍ಪಾಸ್ ನಿರ್ಮಾಣ ಮಾಡಲಾಯಿತು. ಆದರೆ ಇದು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು, ಇದರಿಂದ ಎಷ್ಟರ ಮಟ್ಟಿಗೆ ಅನುಕೂಲವಾಗುತ್ತಿದೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಈ ಅಂಡರ್‍ಪಾಸ್‍ನಲ್ಲಿ ಒಮ್ಮೆ ಹಾದುಹೋಗಬೇಕು ಎಂದರೆ ಮೂಗು ಮುಚ್ಚಿಕೊಂಡೇ ಹೋಗಬೇಕು. ಇಲ್ಲವಾದಲ್ಲಿ ಧೂಳನ್ನು ಸಹ ಸೇವನೆ ಮಾಡಿಕೊಳ್ಳುತ್ತಾ ಹೋಗಬೇಕು.

ಚರಂಡಿ ನೀರು ಮಿಶ್ರಿತವಾದ ಕುಡಿಯುವ ನೀರು

      ಉಪ್ಪಾರಹಳ್ಳಿಯ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಯುಜಿಡಿ ಬ್ಲಾಕ್ ಆಗುತ್ತಿದ್ದು ಮನೆಗಳಿಗೆ ನುಗ್ಗುವುದರ ಜೊತೆಗೆ ಕುಡಿಯುವ ನೀರಿನ ಪೈಪುಗಳಿಗೆ ಸೇರ್ಪಡೆಯಾಗುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಪೂರೈಕೆಯಾದ ಕುಡಿಯುವ ನೀರಿನ ಚರಂಡಿ ನೀರು ಮಿಶ್ರಿತಗೊಂಡಿದ್ದು, ಬಳಕೆಗೆ ಬಾರದಂತಾಗಿದೆ.

      ನೀರು ದುರ್ವಾಸನೆ ಬೀರುವ ಜೊತೆಗೆ ಬಣ್ಣ ಬದಲಾಗುತ್ತಿದೆ. ಈ ನೀರು ಕುಡಿಯಲಂತೂ ಆಗುವುದಿಲ್ಲ. ಕನಿಷ್ಠ ಪಕ್ಷ ಬಟ್ಟೆ ಹೊಗೆಯಲು, ಮನೆ ಸ್ವಚ್ಛಗೊಳಿಸಿಕೊಳ್ಳಲು ಸೇರಿದಂತೆ ಮುಂತಾದ ಮನೆಗೆಲಸಕ್ಕೂ ಕೂಡ ಬಳಸಲು ಆಗದಷ್ಟು ದುರ್ವಾಸನೆ ಬೀರುತ್ತಿದೆ. ನಗರದ ಹಲವೆಡೆ ಪೈಪ್‍ಲೈನ್ ಕಾಮಗಾರಿ ನಡೆಯುತ್ತಿದ್ದು, ಅಶುದ್ದ ನೀರು ಸೇರಿರುವ ಸಾಧ್ಯತೆ ಇದೆ. ಅಲ್ಲದೆ ನೀರು ಶುದ್ದೀಕರಣ ಘಟಕದಲ್ಲಿ ಅಲಂ ಪೌಡರ್ ಬಳಸದೇ ಶುದ್ದೀಕರಿಸಿರುವ ಅನುಮಾನವು ಸ್ಥಳೀಯರಿಂದ ವ್ಯಕ್ತವಾಗುತ್ತಿದೆ.

ರೈಲ್ವೇ ಕೆಳಸೇತುವೆಯ ಬಳಿ ಕಸದ ಘಟಕ

     ಉಪ್ಪಾರಹಳ್ಳಿ ರೈಲ್ವೇ ಕೆಳ ಸೇತುವೆ ಬಳಿ ಕಸದ ವಿಲೇವಾರಿ ಘಟಕ ಇದ್ದು, ಇಲ್ಲಿ ನಿತ್ಯ ಕಸದ ರಾಶಿ ಇದ್ದೇ ಇರುತ್ತದೆ. ಇಲ್ಲಿ ಪ್ಲಾಸ್ಟಿಕ್ ವಸ್ತುಗಳ ವಿಂಗಡಣೆ ಸೇರಿದಂತೆ ಕಸದ ವಿಲೇವಾರಿ ಮಾಡಲಾಗುತ್ತದೆ. ಇಲ್ಲಿ ಕಸದ ವಾಹನಗಳು ಹೆಚ್ಚಾಗಿ ನಿಲ್ಲುವುದರಿಂದ ಟ್ರಾಫಿಕ್ ಸಮಸ್ಯೆಯೂ ಉಂಟಾಗುತ್ತಿದೆ. ಅಲ್ಲದೆ ಇಲ್ಲಿನ ಚಿಕ್ಕದಾದ ಅಂಡರ್‍ಪಾಸ್‍ನಲ್ಲಿ ವಾಹನಗಳ ಸಂಚಾರ ಹೆಚ್ಚಾಗುತ್ತಿರುವುದರಿಂದ ಸ್ಥಳೀಯರು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ.

ಪಾದಚಾರಿ ಮೇಲ್ಸೇತುವೆಗೆ ಮನವಿ

       ಸಾರ್ವಜನಿಕರ ಒತ್ತಾಯದ ಮೇರೆಗೆ ರೈಲ್ವೆ ಇಲಾಖೆ ಅಂಡರ್‍ಪಾಸ್ ನಿರ್ಮಿಸಿದೆ. ಆದರೆ ಅಂಡರ್‍ಪಾಸ್‍ನಿಂದ ದ್ವಿಚಕ್ರ ಮತ್ತು ಆಟೋಗಳ ಓಡಾಟಕ್ಕೆ ಅನುಕೂಲವಾಗಿರುವುದನ್ನು ಬಿಟ್ಟರೆ, ಪಾದಚಾರಿಗಳಿಗೆ ಕಿಂಚಿತ್ತೂ ಅನುಕೂಲವಾಗಿಲ್ಲ. ಇರುವ ಚಿಕ್ಕ ಜಾಗದಲ್ಲಿ ಎರಡು ಕಡೆಯಿಂದ ವಾಹನಗಳು ಓಡಾಡುವುದರಿಂದ ಪಾದಚಾರಿಗಳು ಅಂಡರ್ ಪಾಸ್‍ನಲ್ಲಿ ತಿರುಗಾಡಲು ಭಯಪಡುವಂತಾಗಿದೆ. ಉಪ್ಪಾರಹಳ್ಳಿ, ವಿಜಯನಗರ, ಶಾಂತಿನಗರ, ಶಿವಮೂಕಾಂಬಿಕ ನಗರ, ಗೆದ್ದಲಹಳ್ಳಿ ರಸ್ತೆಯ ಇಕ್ಕೆಲಗಳ ಜನರು ಸರಾಗವಾಗಿ ರಸ್ತೆ ಹಳಿ ದಾಟುವಂತಾಗಲು ಸದರಿ ಜಾಗದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ಒಂದು ಪಾದಚಾರಿ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಜನರಿಗೆ ಅನುಕೂಲವಾಗಲಿದೆ.

      ಇಲ್ಲಿನ ವಿವಿಧ ಸಮಸ್ಯೆಗಳ ಬಗ್ಗೆ ಸ್ಥಳೀಯರು ಮಹಾನಗರ ಪಾಲಿಕೆ ಸದಸ್ಯರ ಗಮನಕ್ಕೆ ತಂದಿದ್ದು, ಈ ವಾರ್ಡ್‍ನ ಸದಸ್ಯೆ ಗಿರಿಜಾ ಧನಿಯಾಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವಿವಿಧ ಕಾಮಗಾರಿಗಳಿಗೆ ಪಾಲಿಕೆ ಸದಸ್ಯರ ಒತ್ತಾಯ:

        ಲೋಕಸಭಾ ಚುನಾವಣೆಗೂ ಮೊದಲು ರಸ್ತೆಯ ಅಗಲೀಕರಣಕ್ಕೆ ಸಂಸದರು ಮತ್ತು ಸ್ಥಳೀಯ ಶಾಸಕರು ಗುದ್ದಲಿಪೂಜೆ ನೆರವೇರಿಸಿದ್ದರು. ಆದರೆ ಇದುವರೆಗೂ ಕೆಲಸ ಆರಂಭವಾಗಿಲ್ಲ. ಇದರಿಂದ ರಸ್ತೆಯಲ್ಲಿ ಓಡಾಡುವ ಜನರು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಹೋಗಬೇಕಾಗಿದೆ.

       ಅಲ್ಲದೆ ಕೆಲ ತಿಂಗಳ ಹಿಂದೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ನಿರ್ಮಿಸಿದ್ದ ಒಳಚರಂಡಿ ವ್ಯವಸ್ಥೆ ಸಹ ಹಾಳಾಗಿದ್ದು, ಲಕ್ಷಾಂತರ ರೂ ಖರ್ಚು ಮಾಡಿದರೂ ಜನರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಉಪ್ಪಾರಹಳ್ಳಿ ರೈಲ್ವೆ ಅಂಡರ್‍ಪಾಸ್ ಮತ್ತು ಮೇಲ್ಸೇತುವೆ ಬಳಿ ನಗರಪಾಲಿಕೆ ವತಿಯಿಂದ ಕಸ ವಿಲೇವಾರಿ ಘಟಕ ನಡೆಯುತ್ತಿದ್ದು, ಸುಮಾರು ಐದಾರು ವಾರ್ಡುಗಳ ಮನೆಗಳಿಂದ ಸಂಗ್ರಹಿಸಿದ ಕಸವನ್ನು ಸದರಿ ಜಾಗದಲ್ಲಿ ಒಣ ಮತ್ತು ಹಸಿ ಕಸ ವಿಂಗಡಿಸುವ ಕೆಲಸ ನಡೆಯುತ್ತದೆ.

       ಹಸಿ ಕಸ ಕೊಳೆತು ಕೆಟ್ಟ ವಾಸನೆ ಬಂದು ಸುತ್ತ ಮುತ್ತಲ ನಾಗರಿಕರು ಬದುಕುವುದು ಕಷ್ಟವಾಗಿದೆ. ಒಣ ಕಸವಾದ ಪ್ಲಾಸ್ಟಿಕ್ ಮತ್ತಿತರ ವಸ್ತುಗಳು ಗಾಳಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಚರಂಡಿ ಸೇರುತ್ತಿದ್ದು, ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಕಸವಿಲೇವಾರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸಲು ನಗರಪಾಲಿಕೆ ಕ್ರಮ ಕೈಗೊಳ್ಳಬೇಕು.

-ಗಿರಿಜಾ ಧನಿಯಕುಮಾರ್, ಪಾಲಿಕೆ ಸದಸ್ಯರು


       ನಾವು ಕಳೆದ 40 ವರ್ಷಗಳಿಂದಲೂ ಇಲ್ಲಿಯೇ ವಾಸ ಮಾಡುತ್ತಿದ್ದೇವೆ. ಅಂದಿನಿಂದಲೂ ಇಂದಿನವರೆಗೆ ಸರಿಯಾದ ರಸ್ತೆಯನ್ನು ನಾವು ನೋಡಿಯೇ ಇಲ್ಲ. ಕೇವಲ ಚುನಾವಣೆಗೆ ಮುನ್ನ ಮಾತ್ರ ಅಲ್ಲಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತೇವೆ ಎನ್ನುತ್ತಾ ಬರುವ ಜನಪ್ರತಿನಿಧಿಗಳು ಚುನಾವಣೆ ನಂತರ ಇತ್ತ ಮುಖ ಮಾಡುವುದೇ ಇಲ್ಲ. ಒಮ್ಮೆ ಶಾಸಕರಾಗಲಿ, ಪಾಲಿಕೆ ಆಯುಕ್ತರಾಗಲಿ ಇತ್ತ ನೋಡಿದರೆ ನಮ್ಮ ಸಮಸ್ಯೆಗಳು ಏನು ಎಂಬುದು ಅರ್ಥವಾಗುತ್ತದೆ.

-ಮಧುಮಹಾಬಲೇಶ್ವರ, ಸ್ಥಳೀಯರು


      ರೈಲ್ವೇ ನಿಲ್ದಾಣ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ವಾಸ ಮಾಡುತ್ತಿದ್ದೇವೆ. ಇತ್ತೀಚೆಗೆ ಉಪ್ಪಾರಹಳ್ಳಿ ರೈಲ್ವೇ ಅಂಡರ್‍ಪಾಸ್ ಮಾಡುವ ವೇಳೆ ಮಣ್ಣನ್ನು ರೈಲ್ವೇ ಹಳಿಗಳ ಪಕ್ಕದ ಪಾಲಿಕೆಯ ಕನ್ಸರ್‍ವೆನ್ಸಿ ಜಾಗಕ್ಕೆ ತುಂಬಲಾಯಿತು. ಇದರಿಂದ ರಾಜಗಾಲುವೆಗಳು ಮುಚ್ಚಿಕೊಂಡು ಮಳೆ ನೀರು, ಚರಂಡಿ ನೀರು ನೇರವಾಗಿ ಮನೆಗಳಿಗೆ ನುಗ್ಗುತ್ತಿವೆ. ಈ ಬಗ್ಗೆ ಹಲವು ಬಾರಿ ಪಾಲಿಕೆ ಸದಸ್ಯರಿಗೆ, ಅಧಿಕಾರಿ ವರ್ಗಕ್ಕೆ ತಿಳಿಸಲಾಗಿದೆ. ಆದರೂ ಯಾವುದೇ ಕ್ರಮ ಜರುಗಿಸಿಲ್ಲ.

-ಅನಿತಾ ನಾಗೇಶ್ ಸ್ಥಳೀಯರು


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap