ಸ್ಮಾರ್ಟ್ ಸಿಟಿ ಯೋಜನೆ : ಉಪ್ಪಾರಹಳ್ಳಿ ಮೇಲ್ಸೇತುವೆ ಕೆಳಗೆ ವೆಂಡಿಂಗ್ ಜೋನ್

ತುಮಕೂರು

      ಉಪಯೋಗವಾಗದೇ ಇದ್ದ ಸಾರ್ವಜನಿಕ ಸ್ಥಳಗಳನ್ನು ವೆಂಡಿಂಗ್ ಜೋನ್ ಆಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಕೈಗೆತ್ತಿಕೊಂಡಿದೆ. ನಗರ ಸೌಂದರ್ಯ ಹಾಗೂ ಸಾರ್ವಜನಿಕವಾಗಿ ಉಪಯೋಗವಾಗುವ ರೀತಿ ಸ್ಥಳ ಬಳಕೆ ಮಾಡಿಕೊಳ್ಳುವ ಉದ್ದೇಶವಿದು. ಪ್ರಥಮವಾಗಿ, ಪೈಲೆಟ್ ಪ್ರಾಜೆಕ್ಟ್ ಆಗಿ ಉಪ್ಪಾರಹಳ್ಳಿ ಮೇಲು ಸೇತುವೆ ಕೆಳಗಿನ ಉಪಯೋಗಿಸದೇ ಇರುವ ಸ್ಥಳದಲ್ಲಿ ಆಕರ್ಷಕ ವೆಂಡಿಂಗ್ ಜೋನ್ ಸಿದ್ಧ ಮಾಡಲಾಗುತ್ತಿದೆ.

       ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಮೇಲುಸೇತುವೆ ಕೆಳಗೆ ಕಿಯೋಸ್ಕದಿಂದ 10 ಸಿದ್ದ ಮಳಿಗೆಗಳನ್ನು ಸ್ಥಾಪಿಸಿ, ಬೀದಿಬದಿಯ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಇಲ್ಲಿ ಸ್ವಚ್ಚ, ಸುಂದರ ವಾತಾವರಣ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಸಾರ್ವಜನಿಕರು ವಿರಮಿಸಿಕೊಳ್ಳಲು ಅಗತ್ಯ ಆಸನಗಳು, ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಮಾಡಲಾಗುವುದು.

      ದೊಡ್ಡ ಕುಂಡಗಳಲ್ಲಿ ಅಲಂಕಾರಿಕ ಗಿಡಗಳು, ಅಂದದ ಪೇಂಟಿಂಗ್ಸ್ ಮಾಡಿ, ಕಾಫಿ ಶಾಪ್ ಮಾದರಿಯ ಅನುಭವ ನೀಡುವ ಸುಂದರ ವಾತಾವರಣ ನಿರ್ಮಾಣ ಮಾಡಲಾಗುತ್ತದೆ ಎಂದು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರಶ್ಮಿ ಹೇಳಿದರು.

       ಈ ಸ್ಥಳದಲ್ಲಿ ವ್ಯವಸ್ಥಿತ ದ್ವಿಚಕ್ರ ವಾಹನಗಳ ಪಾರ್ಕಿಂಗ್‍ಗೆ ಅವಕಾಶ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಕಿರಿಕಿರಿ ಆಗದೆ, ಮುಕ್ತವಾಗಿ ಬಂದು ಹೋಗುವ ರೀತಿಯಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸುವ ಸ್ಥಳವಾಗಿ ರೂಪಿಸುವ ಜೊತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ನೀಡುವುದು ಯೋಜನೆ ಉದ್ದೇಶವಾಗಿದೆ.

       ಈ ಸೇತುವೆ ಕೆಳಗಿದ್ದ ಪೆಟ್ಟಗೆ ಅಂಗಡಿಗಳನ್ನು ಇತ್ತೀಚೆಗೆ ಅಧಿಕಾರಿಗಳು ತೆರವುಗೊಳಿಸಿದ್ದರು. ಇಲ್ಲಿ ಈಗ ಕಿಯೋಸ್ಕದಿಂದ ಸಿದ್ಧಪಡಿಸಿದ ಎಂಟು ಮಳಿಗೆಗೆಳನ್ನು ಸ್ಥಾಪಿಸುವ, ಇತರೆ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿವೆ. ಸ್ಮಾರ್ಟ್ ಸಿಟಿ ಲಿಮಿಟೆಡ್ ಇಲ್ಲಿ ವೆಂಡಿಂಗ್ ಜೋನ್ ಅಭಿವೃದ್ಧಿಪಡಿಸಿ ನಗರಪಾಲಿಕೆಗೆ ವಹಿಸುತ್ತದೆ. ಪಾಲಿಕೆಯು ಮಳಿಗೆಗಳನ್ನು ವ್ಯಾಪಾರಿಗಳಿಗೆ ಬಾಡಿಗೆ ನೀಡಿ, ಮುಂದಿನ ನಿರ್ವಹಣೆ ಮಾಡಲಿದೆ.

       ಸ್ಥಳ ಲಭ್ಯವಿರುವ ನಗರದ ಎರಡು ಮೂರು ಕಡೆ ಪ್ರಮುಖ ರಸ್ತೆಗಳ ಬದಿ ಸ್ಮಾರ್ಟ್ ಸಿಟಿಯಿಂದ ಇದೇ ಮಾದರಿಯ ವೆಂಡಿಂಗ್ ಜೋನ್ ಅಭಿವೃದ್ಧಿ ಮಾಡಲು ಯೋಜಿಸಲಾಗಿದೆ.

ಆಲದ ಮರದ ಆವರಣ

        ನಗರದಲ್ಲಿ ಸುಮಾರು ನೂರು ವರ್ಷಕ್ಕೂ ಹಳೆಯದಾದ ಆಲದ ಮರಗಳನ್ನು ಗುರುತಿಸಿ ಸುಂದರ ಸಾರ್ವಜನಿಕ ಸ್ಥಳವಾಗಿ ಅಭಿವೃದ್ಧಿಪಡಿಸಲು ಸ್ಮಾರ್ಟ್‍ಸಿಟಿಯಲ್ಲಿ ಯೋಜನೆಯು ಪ್ರಸ್ತಾವನೆಯಲ್ಲಿದೆ. ಇಂತಹ 18 ಆಲದ ಮರಗಳನ್ನು ಗುರುತಿಸಿ 87 ಲಕ್ಷ ರೂ. ವೆಚ್ಚದಲ್ಲಿ ಮರಗಳ ಕೆಳಗೆ ಸಂವಾದಾತ್ಮಕ ವಲಯವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ.

        ಮರದ ನೆರಳು, ತಣ್ಣನೆ ವಾತಾವರಣವನ್ನು ಸಾರ್ವಜನಿಕ ಉಪಯೋಗಕ್ಕೆ ನೀಡುವ ಈ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಸಾರ್ವಜನಿಕರು ವಿರಮಿಸಿಕೊಳ್ಳಲು ವಿರಾಮ ಸ್ಥಳವಾಗಿ, ಮಕ್ಕಳ ಸಣ್ಣ ಪ್ರಮಾಣದ ಆಟದ ಮೈದಾನವಾಗಿ ರೂಪಿಸುವ ಯೋಜನೆ ಇದು. ಆಯಾ ಮರದ ಕೆಳಗೆ ದೊರೆಯುವ ಜಾಗದ ವಿಸ್ತಾರ ಅನುಸಾರ ಯೋಜನೆ ಸಿದ್ಧಪಡಿಸಲಾಗುತ್ತದೆ. ನಗರ ಸೌಂದರ್ಯದ ಜೊತೆಗೆ ಮರಗಳನ್ನು ಸಂರಕ್ಷಿಸುವ ಉದ್ದೇಶವೂ ಇದಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap