ದೃಶ್ಯಕಲಾ ಕಾಲೇಜಿನಲ್ಲಿ ಯುಪಿಎಸ್‍ಸಿ ತರಬೇತಿ ಕೇಂದ್ರ

ದಾವಣಗೆರೆ :

    ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಅನಿಮಿನೇಷನ್, ಮಲ್ಟಿಮೀಡಿಯಾ ಮತ್ತು ಫೋಟೋಗ್ರಫಿ ಕೋರ್ಸುಗಳ ಪ್ರಾರಂಭ ಹಾಗೂ ಸಂಜೆ 4 ರಿಂದ 8 ಗಂಟೆಯವರೆಗೆ ಯುಪಿಎಸ್‍ಸಿ ತರಬೇತಿ ಕೇಂದ್ರ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಸ್.ವಿ ಹಲಸೆ ತಿಳಿಸಿದರು.

    ನಗರದ ದಾವಣಗೆರೆ ವಿಶ್ವವಿದ್ಯಾನಿಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಇಂದು ಏರ್ಪಡಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭ ಹಾಗೂ ವಾರ್ಷಿಕ ಕಲಾಪ್ರದರ್ಶನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೃಶ್ಯಕಲಾ ವಿದ್ಯಾರ್ಥಿಗಳು ಚಿತ್ರ ಹಾಗೂ ಕಲಾಕೃತಿಗಳ ಮೂಲಕ ತಮ್ಮಲ್ಲಿ ಅಡಗಿರುವಂತಹ ಸುಪ್ತ ಪ್ರತಿಭೆಗಳನ್ನು ಹೊರಹಾಕುತ್ತಿದ್ದು, ವಿದ್ಯಾರ್ಥಿಗಳು ಅವಕಾಶ ಸಿಕ್ಕಲ್ಲಿ ಕಲೆಯನ್ನು ಪ್ರದರ್ಶಿಸಬೇಕೆಂದು ಕಿವಿಮಾತು ಹೇಳಿದರು.

     ದೃಶ್ಯಕಲಾ ಮಹಾವಿದ್ಯಾಲಯದ ಬೆಳವಣಿಗೆಯಲ್ಲಿ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಬೇಕು. ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಧ್ಯಯನದಿಂದ ಸಂಸ್ಥೆಯನ್ನು ಬೆಳೆಸಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳು ಇಲ್ಲಿ ಕಲಿತ ಕಲೆಗಳಿಂದ ಯಾವ ಕಾರ್ಯ ಮಾಡಬೇಕು ಎನ್ನುವ ಮುಂದಾಲೋಚನೆಯಿಂದ ತಮ್ಮ ಗುರಿ ತಲುಪುವಂತಹ ಚಿಂತನೆ ನಡೆಸಬೇಕು ಎಂದರು.

    ವರ್ಣಶಿಲ್ಪಿ ಪ್ರಶಸ್ತಿ ಪುರಸ್ಕತರು ಹಾಗೂ ಬೆಂಗಳೂರಿನ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಾ. ವಿ.ಜಿ ಅಂದಾನಿ ಮಾತನಾಡಿ, ಕಲಾವಿದ ಇಲ್ಲ ಎಂದರೂ ಸಹ ‘ಚಿತ್ರ’ ಮಾತನಾಡುತ್ತಿರುತ್ತದೆ. ಚಿತ್ರ ಯಾವುದೇ ಭಾಷೆಯ ಪರಿಮಿತಿ ಇಲ್ಲದೇ ನೋಡುಗನಿಗೆ ಕಾಲದ ಕಲ್ಪನೆಯನ್ನು ಕಟ್ಟಿಕೊಡುತ್ತದೆ. ಚಿತ್ರಕಲೆ ಯಾವುದೇ ಭಾಷಾತೀತವಾಗಿ ಎಲ್ಲರಿಗೂ ತನ್ನದೇ ಆದ ರೀತಿಯಲ್ಲಿ ಸಂದೇಶವನ್ನು ಸಾರುವಂತಹ ಕಾರ್ಯವನ್ನು ಮಾಡುತ್ತದೆ ಎಂದರು.

     ಕಲಾವಿದರು ತಮ್ಮ ಕಲೆಯಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ದೃಶ್ಯಕಲೆಯು ನೋಡುವ ಗುಣದ ಜೊತೆಗೆ ಪರಂಪರೆಯಲ್ಲಿ ವಾಸ್ತುಶಿಲ್ಪಗಳ ಬೆಳವಣಿಗೆಗೂ ಸಹಕಾರಿಯಾಗುತ್ತಾ ಬಂದಿದೆ. ಇಂದು ಕಲೆಯಿಂದ ಸಮಕಾಲೀನ ಬೆಳವಣಿಗೆಯನ್ನು ಕಾಣುತ್ತಿದ್ದೇವೆ. ಇದರ ಜೊತೆಗೆ ಹೊಸದನ್ನು ತಿಳಿದು, ಬೆಳೆಸುವಂತಹ ಕಾರ್ಯವಾಗಬೇಕು ಎಂದು ತಿಳಿಸಿದರು.

    ಚಿತ್ರಕಲೆ ಮತ್ತು ವಾಸ್ತುಶಿಲ್ಪಗಳಿಂದ ನಮ್ಮ ದೇಶಕ್ಕೆ ಹೆಚ್ಚಿನ ಆದಾಯವಿದೆ. ತಾಜ್ ಮಹಲ್ ಸ್ಮಾರಕ ಒಂದರಿಂದ ವಾರ್ಷಿಕವಾಗಿ ರೂ.1600 ಕೋಟಿಗಳಷ್ಟು ಹಣ ಅದನ್ನು ನೋಡಲು ಬರುವ ಪ್ರವಾಸಿಗರಿಂದ ಸಂಗ್ರಹವಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ರವೀಂದ್ರ ಎಸ್. ಕಮ್ಮಾರ್, ದೃಶ್ಯಕಲಾ ಮಹಾವಿದ್ಯಾಲದ ಸಹಯಕ ಪ್ರಾಧ್ಯಾಪಕರುಗಳಾದ ಡಾ. ಸತೀಶ್ ಕುಮಾರ್ ವಲ್ಲೇಪುರೆ, ಡಾ. ಜೈರಾಜ್ ಚಿಕ್ಕಪಾಟೀಲ್ ಮತ್ತು ದತ್ತಾತ್ರೇಯ ಎನ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link