ಮಧುಗಿರಿ ಮೋದಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಚಿತ್ರದುರ್ಗ

      ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮೊಹಮದ್ ಪೈಗಂಬರ್ ಅವರನ್ನು ಅವಮಾನಿಸಿರುವುದನ್ನು ವಿರೋಧಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

      ಪ್ರವಾದಿ ಮೊಹಮದ್ ಪೈಗಂಬರ್ ಅವರು ಜಗತ್ತಿಗೆ ಶಾಂತಿ ಸಂದೇಶ ಸಾರಿದ್ದಾರೆ. ಇಂತಹ ಶ್ರೇಷ್ಠ ವ್ಯಕ್ತಿಯನ್ನು ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಹೊನ್ನಪುರ ಗ್ರಾಮದ ಅತುಲ್‍ಕುಮಾರ್ ಯಾನೆ ಮಧುಗಿರಿ ಮೋದಿ ಎಂಬ ವ್ಯಕ್ತಿಯು ಅವಮಾನಿಸಿದ್ದಾನೆ. ಈತ ತನ್ನ ಫೇಸ್‍ಬುಕ್‍ನಲ್ಲಿ ಅನೇಕ ಬಾರಿ ಹಲವಾರು ವಿಚಾರಗಳ ಕುರಿತು ಇಸ್ಲಾಂ ಧರ್ಮಗುರು ಮೊಹಮದ್ ಪೈಗಂಬರ್ ಅವರನ್ನು ಇಲ್ಲಸಲ್ಲದ ಆರೋಪ ಮಾಡುತ್ತಾ ಬಂದಿದ್ದಾನೆ ಎಂದು ಪ್ರತಿಭಟನಾಕಾರರು ದೂರಿದರು.

     ತಾನು ದಲಿತನೆಂದು ಹೇಳಿಕೊಳ್ಳುವ ಈತ ಇಡೀ ದೇಶದ ದಲಿತ ಜನಾಂಗಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದಾನೆ. ತನ್ನ ಸ್ವಾರ್ಥಕ್ಕಾಗಿ ಏನೆಲ್ಲಾ ಅಪಪ್ರಚಾರ ಮಾಡುವ ಮೂಲಕ ದಲಿತರು ಹಾಗೂ ಮುಸಲ್ಮಾನರ ನಡುವೆ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾನೆ. ಈ ವ್ಯಕ್ತಿಯು ತನ್ನ ಫೇಸ್‍ಬುಕ್‍ನಲ್ಲಿ ಪ್ರವಾದಿ ಮೊಹಮದ್ ಪೈಗಂಬರ್ ಕುರಿತು ಅವಹೇಳನಕಾರಿ ಶಬ್ಧಗಳನ್ನು ಬಳಸಿದ್ದಾನೆ. ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಿದರು.

     ಪ್ರವಾದಿ ಮೊಹಮದ್ ಪೈಗಂಬರ್ ಅವರ ಚಾರಿತ್ರ್ಯ ಹರಣ ಮಾಡುವ, ಆ ಮೂಲಕ ದಲಿತ ಹಾಗೂ ಮುಸಲ್ಮಾನರ ನಡುವೆ ಕೋಮು ದ್ವೇಷ ಹರಡುವ, ಪರಸ್ಪರ ಗಲಾಟೆ ಉಂಟು ಮಾಡಿ ಸಾರ್ವಜನಿಕ ಶಾಂತಿಗೆ ಭಂಗ ತರುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕ ಜೀವನದಲ್ಲಿ ಅಶಾಂತಿ ಉಂಟು ಮಾಡುವ ಮೂಲಕ ವಿಕೃತಿ ಮರೆಯಲು ನೋಡುತ್ತಿದ್ದಾನೆ. ಹಾಗಾಗಿ ಕೂಡಲೇ ಪೊಲೀಸರ ಈತನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು.

     ಶಾಶ್ವತವಾಗಿ ಬಂಧೀಖಾನೆಯಲ್ಲಿ ಇರಿಸಬೇಕೆಂದು ಒತ್ತಾಯಿಸಿದರು. ತನ್ನ ಅನುಚಿತ ವರ್ತನೆಯಿಂದ ಈತ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಪ್ರಯತ್ನ ಮಾಡುತ್ತಿದ್ದಾನೆ. ಇದರಿಂದ ಸಮಾಜದ ಸ್ವಾಸ್ತ್ಯ ಹಾಳಾಗುವ ಸಾಧ್ಯತೆ ಇದೆ. ಈತನಿಂದಾಗಿ ಕೋಮು ಗಲಬೆ ಉಂಟಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಲಿದೆ. ಹಾಗಾಗಿ ಕೂಡಲೇ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕ್ರಿಮಿನಲ್ ಕೇಸ್ ದಾಖಲಿಸುವ ಮೂಲಕ ಈತನನ್ನು ಸೆರೆವಾಸಕ್ಕೆ ಕಳಿಸಬೇಕು. ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಆಗ್ರಹಿಸಿದರು.

       ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಪಿ.ಎಂ.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಕೆ.ರಾಮಚಂದ್ರ, ಜಿಲ್ಲಾ ಕಾರ್ಯಾಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಪ್ರೊ. ಕರಿಯಪ್ಪ, ಜಿ.ಆರ್.ಪ್ರಭಾಕರ್, ಮೊಹಮದ್ ರಫೀಖ್, ಶಿವಕುಮಾರ್, ಎಂ.ಮುಬಾರಕ್, ಮೊಹಮದ್ ಮೊಹಸಿನ್, ದಾದಾಪೀರ್, ದುರ್ಗೇಶ್, ಇಮ್ರಾನ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link