ಜಿಎಸ್ ಟಿ ಪರಿಹಾರ ಬಿಡುಗಡೆಗೆ ಆಗ್ರಹ..!

ಬೆಂಗಳೂರು

      ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾಗಿರುವ ಜಿ.ಎಸ್.ಟಿ. ಪರಿಹಾರ ಹಾಗೂ ಕೇಂದ್ರ ಕೊಡಬೇಕಾದ ಇತರೆ ಬಾಕಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಸಿಪಿಐಎಂ ಆಗ್ರಹಿಸಿದೆ.

       ರಾಜ್ಯ ಕಳೆದ ವರ್ಷ ಭೀಕರ ಬರ ಹಾಗೂ ನೆರೆ ಹಾವಳಿಗೆ ತುತ್ತಾಯಿತು. ಅದೇ ರೀತಿ, ಇದೀಗ ಕೋವಿಡ್ ? 19 ಸೋಂಕಿನ ತೀವ್ರತೆಯಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಇವುಗಳಿಂದ ರಾಜ್ಯ ಈ ಅವಧಿಯಲ್ಲಿ ಲಕ್ಷಾಂತರ ಕೋಟಿ ರೂಗಳ ಭಾರೀ ಹಾನಿ ಅನುಭವಿಸಿತು. ಈಗಂತೂ ಕೋವಿಡ್ – 19 ಸೋಂಕು ತನ್ನ ಉಚ್ಛ್ರಾಯ ಸ್ಥಿತಿಯ ಕಡೆ ದಾಪುಗಾಲು ಇಡುತ್ತಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರಾಜ್ಯದ ನರೆವಿಗೆ ಧಾವಿಸಬೇಕು ಎಂದಿದ್ದಾರೆ.

       ಸಿಪಿಐ ಎಂ ಕಾರ್ಯದರ್ಶಿ ಯು. ಬಸವರಾಜು, ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಕೇಂದ್ರ ಸರಕಾರ ಈ ಎಲ್ಲಾ ಸಂದರ್ಭದಲ್ಲೂ ರಾಜ್ಯಕ್ಕೆ ನೀಡಿದ ಪರಿಹಾರ ಅಲ್ಪ ಪ್ರಮಾಣದಲ್ಲಿದೆ. ರಾಜ್ಯದ ಬೇಸಾಯ ಮತ್ತು ರೈತರು, ಕೃಷಿಕೂಲಿಕಾರರು, ಕಸುಬುದಾರರು, ಕಾರ್ಮಿಕರು, ದಲಿತರು ಮತ್ತು ಮಹಿಳೆಯರು ತೀವ್ರ ರೀತಿಯಲ್ಲಿ ಸಾಲ ಬಾಧಿತರಾಗಿ, ಉದ್ಯೋಗ ಹಾನಿಯಿಂದ ಪರಿತಪಿಸುತ್ತಿದ್ದಾರೆ. ಈ ಎಲ್ಲರಿಗೂ ಸಾಲ ಪರಿಹಾರ ನೀಡಲಿಲ್ಲ. ಸಾರ್ವಜನಿಕ ಸಾಲದ ಮೊತ್ತವನ್ನು ವ್ಯಾಪಕವಾಗಿ ವಿಸ್ತರಿಸಿ ನೆರವಿಗೆ ಬಂದಿಲ್ಲ ಎಂದಿದ್ದಾರೆ.

       ರಾಜ್ಯದ ವಿಚಾರದಲ್ಲಿ ಕೇಂದ್ರ ಸರಕಾರ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಿರುವುದು ಖಂಡನೀಯ. ಪ್ರಧಾನಿ ನರೇಂದ್ರ ಮೋದಿ ಹೆಸರಿನ ಖಾಸಗೀ ಟ್ರಸ್ಟ್ ಮೂಲಕ ಕೋವಿಡ್ – 19 ಪರಿಹಾರದ ನಿಧಿ ಸಾವಿರಾರು ಕೋಟಿ ರೂ ಸಂಗ್ರಹಿಸಲಾಗಿದೆ. ಇದರಲ್ಲೂ ರಾಜ್ಯಕ್ಕೆ ಪಾಲು ನೀಡಿಲ್ಲ ಎಂದು ಆರೋಪಿಸಿದ್ದಾರೆ.

      ಕೇಂದ್ರ ಸರಕಾರ ಜಿ.ಎಸ್.ಟಿ ಕಾಯ್ದೆಯನ್ವಯ ಕೊಡಬೇಕಾದ ಸರಕು ಮತ್ತು ಸೇವಾ ಸುಂಕದ ರಾಜ್ಯದ ಭಾಗವನ್ನು ಮತ್ತು ಇತರೇ ಬಾಕಿಗಳನ್ನು ಈಗಲೂ ನೀಡದಿರುವುದು ಖೇದಕರವಾಗಿದೆ. ರಾಜ್ಯದ ಬಹುತೇಕ ಸಂಸದರು ಬಿಜೆಪಿಯವರಾಗಿದ್ದು, ತಮ್ಮದೇ ಪಕ್ಷದ ನೇತೃತ್ವದ ಎನ್ ಡಿ ಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದೆ, ತಮ್ಮದೇ ಪಕ್ಷದ ನೇತೃತ್ವದ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ, ರಾಜ್ಯದ ಜನತೆಯನ್ನು ರಕ್ಷಿಸುವಲ್ಲಿ ಮತ್ತು ರಾಜ್ಯದ ಸಂಕಷ್ಟವನ್ನು ಕೇಂದ್ರದ ಗಮನಕ್ಕೆ ತಂದು, ಒತ್ತಾಯಿಸಿ ರಾಜ್ಯಕ್ಕೆ ನೆರವು ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

      ರಾಜ್ಯದ ಜನತೆಗೆ ಅಗತ್ಯವಾದ ಪರಿಹಾರ ಒದಗಿಸುವಲ್ಲಿಯೂ ವಿಫಲವಾಗಿದೆ. ಅದೇ ರೀತಿ, ಅದು, ಕೇಂದ್ರ ಸರಕಾರದಿಂದ ಪಡೆಯ ಬೇಕಾದ ಅಗತ್ಯ ನೆರವು ಮತ್ತು ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆಯುವಲ್ಲಿ ಹೆದರಿಕೆಯ ಮನೋಭಾವವನ್ನು ತೋರುತ್ತಿದೆ ಎಂದಿದ್ದಾರೆ.

      ತಕ್ಷಣವೇ ರಾಜ್ಯಕ್ಕೆ ನೀಡಬೇಕಾದ ಬರ, ನೆರೆ ಪರಿಹಾರ ಹಾಗೂ ಇತರೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು. ದುಡಿಯುವ ಜನತೆಯ ಸಾಲದ ಬಾಧೆಯನ್ನು ನಿವಾರಿಸಲು ಸಾಲ ಮನ್ನಾ ಮಾಡಬೇಕು ಮತ್ತು ಉದ್ಯೋಗ ಖಾತ್ರಿ ಯೋಜನೆಯ ಮೊತ್ತವನ್ನು ದ್ವಿಗುಣಗೊಳಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap