ಹುಳಿಯಾರು
ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಅಧಿಕಾರಿಗಳು ತೆರವುಗೊಳಿಸಿರುವುದು ಖಂಡನೀಯ. ಕೂಡಲೇ ಅದೇ ಸ್ಥಳದಲ್ಲಿ ಮೂರ್ತಿಯನ್ನು ಮರು ಪ್ರತಿಷ್ಠಾಪನೆ ಮಾಡಬೇಕು ಎಂದು ಹುಳಿಯಾರಿನಲ್ಲಿ ಕುರುಬ ಸಮುದಾಯದಿಂದ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ ಮಾತನಾಡಿ, ಸ್ವಾತಂತ್ರ್ಯೋತ್ಸವ ದಿನದಂದು ಅಲ್ಲಿಯ ಅಭಿಮಾನಿಗಳು ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರು. ಆದರೆ ಅಧಿಕಾರಿಗಳು ಯಾವುದೇ ಕಾರಣ ಇಲ್ಲದೆ ಪ್ರತಿಮೆಯನ್ನು ತೆರವುಗೊಳಿಸಿರುವುದರಿಂದ ವಿಷಯ ವಿವಾದಕ್ಕೀಡಾಗಿದೆ. ಪ್ರತಿಮೆಯನ್ನು ಪುನಃ ಪ್ರತಿಷ್ಠಾಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸರ್ಕಾರ ತಕ್ಷಣ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಬಗರ್ ಹುಕುಂ ಸಮಿತಿಯ ಮಾಜಿ ಸದಸ್ಯ ಎಚ್.ಅಶೋಕ್ ಮಾತನಾಡಿ, ರಾಯಣ್ಣ ಒಂದು ಜಾತಿಗೆ ಸೀಮಿತವಾಗಿಲ್ಲ. ಬ್ರಿಟಿಷರ ವಿರುದ್ಧ ಹೋರಾಡುವ ಮೂಲಕ ನಾಡಿನ ಆಸ್ತಿಯಾಗಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ನೇಣಿಗೆ ಕೊರಳೊಡ್ಡಿದ ಕನ್ನಡ ನೆಲದ ಈ ವೀರನಿಗೆ ಅವಮಾನ ಮಾಡಿರುವುದು ಏಳು ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ ಎಂದರು.
ತಿಮ್ಲಾಪುರ ಗ್ರಾಪಂ ಮಾಜಿ ಅಧ್ಯಕ್ಷ ನಂದಿಹಳ್ಳಿ ದೇವರಾಜು ಮಾತನಾಡಿ, ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಸ್ವಾತಂತ್ರ್ಯದ ದಿನದಂದು ತೆರವು ಮಾಡಿದ್ದು ಖಂಡನೀಯ. ಕೂಡಲೆ ಪ್ರತಿಮೆ ಇದ್ದ ಸ್ಥಳದಲ್ಲಿಯೇ ಮರು ಸ್ಥಾಪನೆ ಮಾಡಬೇಕು ಹಾಗೂ ದೌರ್ಜನ್ಯವೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇಲ್ಲಿನ ರಾಯಣ್ಣ ಸರ್ಕಲ್‍ನಿಂದ ಆರಂಭಗೊಂಡ ಪ್ರತಿಭಟನೆ ಕನಕ ಸರ್ಕಲ್ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ ಹಾಗೂ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಧಿಕ್ಕಾರ ಕೂಗುತ್ತಾ, ನಾಡಕಚೆÉೀರಿಗೆ ತೆರಳಿ ಕಂದಾಯ ತನಿಖಾಧಿಕಾರಿ ಮಂಜುನಾಥ್ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಧರ್ಮದರ್ಶಿ ಹೆಚ್.ಶಿವಕುಮಾರ್, ಪಪಂ ಮಾಜಿ ಸದಸ್ಯರುಗಳಾದ ಧನುಷ್ ರಂಗನಾಥ್, ಎಸ್‍ಆರ್‍ಎಸ್ ದಯಾನಂದ್, ಗ್ರಾಪಂ ಮಾಜಿ ಅಧ್ಯಕ್ಷ ಹೊಸಹಳ್ಳಿ ಕಿಟ್ಟಪ್ಪ, ಹೆಚ್.ಎಸ್.ಪ್ರದೀಪ್, ಎನ್.ಬಿ.ಮಧು, ಲಿಂಗಪ್ಪನಪಾಳ್ಶ ಜಯಣ್ಣ, ಶೀಗೆಬಾಗಿ ಸಿದ್ದರಾಮಣ್ಣ, ಕಿರಣ್, ಡಾಬಾ ಮಧು, ಸೋಮಜ್ಜನಪಾಳ್ಶ ನಾಗರಾಜ್, ಬೀರಪ್ಪ, ಯಶವಂತ್, ಗಜೇಂದ್ರ, ಪರಮೇಶ್, ಬಸವರಾಜು, ವರದಪ್ಪ ಸೇರಿದಂತೆ ಅನೇಕ ಕುರುಬ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ