2019-20ರ ಆರ್‍ ಟಿ ಇ ಬಾಕಿ ಮೊತ್ತ ಕೂಡಲೇ ಪಾವತಿಗೆ ಆಗ್ರಹ..!

ಬೆಂಗಳೂರು

     2019-20ರ ಆರ್‍ಟಿಇ ಬಾಕಿ ಮೊತ್ತ ಕೂಡಲೇ ಪಾವತಿಸಬೇಕು, ಅನೇಕ ಶಿಕ್ಷಣ ಸಂಸ್ಥೆಗಳಿಗೆ ಆರ್‍ಟಿಇ ಹಣವನ್ನು ಅವೈಜ್ಞಾನಿಕವಾಗಿ ಕಡಿತಗೊಳಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ವಿಧಾನಪರಿಷತ್ ಹಾಲಿ ಹಾಗೂ ಮಾಜಿ ಸದಸ್ಯರು ಒತ್ತಾಯಿಸಿದ್ದಾರೆ.

     ಕಳೆದ ನಾಲ್ಕು ವರ್ಷಗಳಿಂದ ಮೈಸೂರು ವಿಭಾಗದಲ್ಲಿ ಗ್ರೇಡ್-2 ಸಹ ಶಿಕ್ಷಕರಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡದೆ ಅನ್ಯಾಯವೆಸಗಿದ್ದು, ಕೂಡಲೇ ಬಡ್ತಿ ನೀಡಬೇಕು. ಮೈಸೂರು ವಿಭಾಗದಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ನೇರ ನೇಮಕಾತಿಗೆ ಶೇಕಡಾ 25 ಹಾಗೂ ಬಡ್ತಿಗೆ 75 ಅನುಪಾತವನ್ನು ನೀಡುವಲ್ಲಿ ಆಗಿರುವ ಲೋಪವನ್ನು ಸರಿಪಡಿಸಬೇಕು. ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರರಿಗೆ ಆಡಳಿತ ಮಂಡಳಿಯಿಂದ ಗೌರವ ಧನ ಪಾವತಿಸುವಂತೆ ನಿರ್ದೇಶನ ನೀಡಬೇಕು. ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಗೌರವಧನ ಸಿಗದೆ ಇರುವುದರಿಂದ ಸರ್ಕಾರದಿಂದ ಸೂಕ್ತ ಹಣಕಾಸಿನ ನೆರವಿನ ಪ್ಯಾಕೇಜ್ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

    2019-20ರ ಆರ್‍ಟಿಇ ಬಾಕಿ ಮೊತ್ತ ಕೂಡಲೇ ಪಾವತಿಸಬೇಕು, ಅನೇಕ ಶಿಕ್ಷಣ ಸಂಸ್ಥೆಗಳಿಗೆ ಆರ್‍ಟಿಇ ಹಣವನ್ನು ಅವೈಜ್ಞಾನಿಕವಾಗಿ ಕಡಿತಗೊಳಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಹಳೆಯ ಶಾಲೆಗಳಿಗೆ ನವೀಕರಣ ನೀಡುವಲ್ಲಿ ಹೊಸ ಶಾಲೆಗಳಿಗೆ ವಿಧಿಸುತ್ತಿರುವ ಷರತ್ತುಗಳನ್ನು ಕೂಡಲೇ ಹಿಂಪಡೆದು, ನವೀಕರಿಸಬೇಕು. ಹಳೆಯ ಶಾಲೆಗಳಿಗೆ 2 ಲಕ್ಷ ಠೇವಣಿ ಇಡಲು ಒತ್ತಾಯಿಸುವುದನ್ನು ತಕ್ಷಣ ನಿಲ್ಲಿಸಬೇಕು. ಪಾಲಕ ಪೋಷಕರು ಕಳೆದ ಸಾಲಿನ ವಿದ್ಯಾರ್ಥಿಗಳ ಶಾಲಾ ಶುಲ್ಕದ ಬಾಕಿಯನ್ನು ಎರಡು ಕಂತುಗಳಲ್ಲಿ ಪಾವತಿಸುವಂತೆ ಕೂಡಲೇ ನಿರ್ದೇಶನ ನೀಡಬೇಕು.

    ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ಪ್ರಕ್ರಿಯೆಗೆ ಅನುಗುಣವಾಗಿ ಹಂತ ಹಂತವಾಗಿ ಪಠ್ಯ ಪುಸ್ತಕಗಳನ್ನು ಖರೀದಿಸಲು ಅವಕಾಶ ಕಲ್ಪಿಸಬೇಕು.2020-21ರ ಎಸ್‍ಎಟಿಎಸ್ ತಂತ್ರಾಂಶದಲ್ಲಿ ಪಾಲಕ-ಪೋಷಕರು ದಾಕಲಾತಿ ಪ್ರಕ್ರಿಯೆ ಮಾಡದೇ ಇದ್ದರೂ ಈ ತಂತ್ರಾಂಶದ ಮೂಲಕ ಒತ್ತಾಯಪೂರ್ವಕವಾಗಿ ದಾಖಲೆ ಮಾಡಿಕೊಳ್ಳುವಂತೆ ಬಿಇಒ ಕಚೇರಿಗಳು ಹೇರುತ್ತಿರುವ ಒತ್ತಡವನ್ನು ಕೂಡಲೇ ನಿಲ್ಲಿಸಬೇಕು. ಈ ಎಲ್ಲಾ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವಂತೆ ಶಿಕ್ಷಣ ಸಚಿವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಬೋಜೇಗೌಡ, ಕೆ.ಟಿ.ಶ್ರೀಕಂಠೇಗೌಡ, ಎಚ್.ಎಂ.ರಮೇಶ್ ಗೌಡ ಮತ್ತಿತರರು ಮನವಿಪತ್ರದಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link