ತಿಪಟೂರು :
ಉರುಳಿಗೆ ಸಿಲುಕಿ ಚಿರತೆ ಮೃತಪಟ್ಟ ಘಟನೆ ವರದಿಯಾಗಿದೆ. ತಾಲ್ಲೂಕಿನ ಈಚನೂರು ಸಮೀಪದ ಲೋಕೇಶ್ ಬಿನ್ ಶಿವಲಿಂಗಯ್ಯ ಎಂಬುವರ ತೋಟದಲ್ಲಿ ಹಂದಿ ಹಿಡಿಯಲು ಹಾಕಲಾಗಿದ್ದ ಉರುಳಿಗೆ ಸುಮಾರು 4-5 ಪ್ರಾಯದ ಗಂಡು ಚಿರತೆ ಶುಕ್ರವಾರ ರಾತ್ರಿಯೇ ಉರುಳಿಗೆ ಸಿಲುಕಿರಬಹುದು ಎನ್ನಲಾಗಿದ್ದು, ಶನಿವಾರ ಮಧ್ಯಾಹ್ನದ ವರೆಗೂ ಉರುಳಿನಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದುದನ್ನು ಗಮನಿಸಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದ ತಕ್ಷಣ ಹಾಸನದಿಂದ ಅರವಳಿಕೆ ತಜ್ಞರನ್ನು ಕರೆಸಿ ಸ್ಥಳಕ್ಕೆ ಹೋಗಿ ಅರವಳಿಕೆ ಚುಚ್ಚುಮದ್ದು ನೀಡುವಷ್ಟರಲ್ಲಿ ಚಿರತೆ ಮೃತಪಟ್ಟಿದೆ ಎನ್ನಲಾಗಿದೆ.
ವಲಯ ಅರಣ್ಯಾಧಿಕಾರಿ ರಾಕೇಶ್ ನೇತೃತ್ವದಲ್ಲಿ, ವೈದ್ಯರ ಸಮಕ್ಷಮ ತಾಲ್ಲೂಕಿನ ಚೌಡ್ಲಾಪುರ ಅರಣ್ಯ ಪ್ರದೇಶದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಇಲಾಖೆಯ ನಿಯಮನುಸಾರ ಮೃತ ಚಿರತೆಯನ್ನು ದಹನ ಮಾಡಿಸಿದ್ದಾರೆ ಎನ್ನಲಾಗಿದೆ. ತೋಟದ ಮಾಲೀಕ ನಿನ್ನೆಯಿಂದ ನಾಪತ್ತೆ ಆಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ ಅನುಸಾರ ಪ್ರಕರಣ ದಾಖಲಾಗಿದೆ. ಹಂದಿ ಹಿಡಿಯುವವರು ಉರುಳು ಹಾಕಿರಬಹುದು, ಇದಕ್ಕೂ, ನಮಗೂ ಸಂಬಂಧವಿಲ್ಲ ಎಂದು ಜಮೀನಿನ ಮಾಲೀಕರು ತಪ್ಪಿಸಿಕೊಳ್ಳುವಹಾಗಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ವನ್ಯ ಜೀವಿಗಳು ಯಾರ ತೋಟ, ಅಥವಾ ಜಮೀನಿನಲ್ಲಿ ಪತ್ತೆಯಾಗುತ್ತವೋ, ಇದಕ್ಕೆ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು – ರಾಕೇಶ್, ವಲಯ ಅರಣ್ಯಾಧಿಕಾರಿಗಳು. ತಿಪಟೂರು.