ದಾವಣಗೆರೆ :
ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು ದಾಖಲಿಸಲು ನಾಗರೀಕ ಸ್ನೇಹಿ ಸಿ-ವಿಜಿಲ್ ಆ್ಯಪ್ ಪರಿಚಯಿಸಿದ್ದು, ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ನಾಗರಿಕರೇ ಫೋಟೋ, ವಿಡೀಯೋಗಳನ್ನು ಸಿ-ವಿಜಿಲ್ ಆ್ಯಪ್‍ಗೆ ಅಪ್‍ಲೋಡು ಮಾಡುವ ಮೂಲಕ ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಸಹಕರಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ ನೀಡಿದರು.
ನಗರದ ತಾಲೂಕು ಕಚೇರಿಯ ತಹಶೀಲ್ದಾರ್ ಅವರ ಕೊಠಡಿಯಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಚುನಾವಣಾ ಆಯೋಗ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದು, ಈ ಬಾರಿ ನಾಗರೀಕರ ಕೈಯಲ್ಲಿ ಸಿ-ವಿಜಿಲ್ ಎಂಬ ಆ್ಯಪ್ ಪರಿಚಯಿಸಿದ್ದು, ಈ ಆ್ಯಪ್‍ನ್ನು ಆಂಡ್ರಾಯ್ಡ್ ಮೊಬೈಲ್‍ನಲ್ಲಿ ಗೂಗಲ್ ಪ್ಲೆಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ಚುನಾವಣಾ ಅಕ್ರಮಗಳ ಬಗ್ಗೆ ನಡೆಯುವ ಘಟನೆಯ ಫೋಟೊ ಅಥವಾ ವಿಡಿಯೋ ತೆಗೆದು ಸಿವಿಲ್ ತಂತ್ರಾಂಶದ ಮೂಲಕ ವರದಿ ಮಾಡಬಹುದು ಎಂದು ಹೇಳಿದರು.
ವರದಿ ನೀಡುವವರ ಸ್ವಂತ ವಿವರ ನೀಡುವುದು ಕಡ್ಡಾಯವಲ್ಲ. ಹಾಗೂ ಹೀಗೆ ವರದಿ ನೀಡಿದವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ವರದಿ ದಾಖಲಾದ 100 ನಿಮಿಷಗಳಲ್ಲಿ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುವುದು. ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್.ಎಸ್.ಟಿ ಮೂರು ತಂಡ ರಚಿಸಲಾಗಿದೆ. ಅಲ್ಲದೇ, ಹೆಬ್ಬಾಳ್ ಟೋಲ್, ಹೆಚ್.ಬಸಾಪುರ ಹಾಗೂ ಕಾರಿಗನೂರು ಕ್ರಾಸ್ ಬಳಿಯಲ್ಲಿ ಚೆಕ್ ಪೊಸ್ಟ್ ತೆರೆಯಲಾಗಿದೆ. ಈ ಚೆಕ್ ಪೊಸ್ಟ್ ಗಳಲ್ಲಿ 24*7 ಮಾದರಿಯಲ್ಲಿ ಅಧಿಕಾರಿ/ಸಿಬ್ಬಂದಿಗಳು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಚೆಕ್‍ಪೋಸ್ಟ್ ವ್ಯಾಪ್ತಿಯಲ್ಲಿ ಸಂಚರಿಸುವ ಸರ್ಕಾರಿ ವಾಹನಗಳನ್ನು ಸೇರಿದಂತೆ ಎಲ್ಲಾ ಸಾರ್ವಜನಿಕ, ಗಣ್ಯ, ಅತಿಗಣ್ಯ ವ್ಯಕ್ತಿಗಳ ಹಾಗೂ ಪತ್ರಿಕಾ ಮಾಧ್ಯಮದ ವಾಹನಗಳನ್ನು ಸಹ ತಪಾಸಣೆ ಮಾಡಲು ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನ ನೀಡಲಾದಂತೆ ಅಧಿಕಾರಿ/ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ಮಾಹಿತಿ ನೀಡಿದರು.
ಲೋಕಸಭಾ ಸಾರ್ವತ್ರಿಕ ಚುನಾವಣೆ 2019 ಕ್ಕೆ ಸಂಬಂಧಿಸಿದಂತೆ ದಾವಣಗೆರೆ ಲೋಕಸಭಾ ಕ್ಷೇತ್ರ ಸಂಖ್ಯೆ 13ರ ವ್ಯಾಪ್ತಿಯ 108-ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ರೀತಿಯ ಚುನಾವಣಾ ಸಿದ್ದತೆಗಳನ್ನು ಮಾಡಿಕೊಂಡು ಚುನಾವಣೆಗೆ ತಯಾರಿ ನಡೆಸಲಾಗಿದ್ದು, ಈ ಕ್ಷೇತ್ರದಲ್ಲಿ ಒಟ್ಟು 240 ಮತಗಟ್ಟೆಗಳಿದ್ದು, 16-1-2019 ಕ್ಕೆ ಇದ್ದಂತೆ ಗಂಡು 95,554, ಹೆಣ್ಣು 92,676, ತೃತೀಯ ಲಿಂಗಿ 5, ಸೇವಾ ಮತದಾರರು 121 ಸೇರಿದಂತೆ ಒಟ್ಟು 1,88,229 ಮತದಾರರಿದ್ದಾರೆ ಎಂದರು.
ಇದೇ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿಗಳಿಗೆ ಇ.ಡಿ.ಸಿ (ಎಲೆಕ್ಷನ್ ಡ್ಯುಟಿ ಸರ್ಟಿಫಿಕೇಟ್)ಮೂಲಕ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಚುನಾವಣಾ ಕರ್ತವ್ಯ ಆದೇಶ ಪ್ರತಿಯೊಂದಿಗೆ 12ಎ ಅರ್ಜಿ ತುಂಬಿ ಸಹಾಯಕ ಚುನಾವಣಾಧಿಕಾರಿಗಳಿಗೆ ನೀಡಿದರೆ ಇಡಿಸಿ ದೊರೆಯುತ್ತದೆ ಹಾಗೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ನೂತನವಾಗಿ ಇಟಿಪಿಬಿಎಸ್ ಮತ ಚಲಾಯಿಸಲು ಅವಕಾಶ ನೀಡಲಾಗಿದೆ. ಬೇರೆ ಲೋಕಸಭೆ ಕ್ಷೇತ್ರದ ಸಿಬ್ಬಂದಿಗಳಿಗೆ ಸಂಬಂಧಿಸಿದಂತೆ ಅಂಚೆ/ಐಟಿ ಸ್ವೀಕರಿಸಲು ತಾಲ್ಲೂಕು ಕಚೇರಿಯಲ್ಲಿ ಮತದಾರರ ಸೇವಾ ಕೇಂದ್ರವನ್ನು ತೆರೆಯಲಾಗಿದೆ ಎಂದು ಹೇಳಿದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 240 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಪೈಕಿ 75 ಸೂಕ್ಷ್ಮ ಮತ್ತು 7 ದುರ್ಬಲ ಮತಗಟ್ಟೆಗಳೆಂದು ಗುರುತಿಸಲಾಗಿರುತ್ತದೆ. ಈ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರಿಗೆ ಮುಕ್ತ ಮತದಾನ ನಡೆಸಲು ಅನುಕೂಲವಾಗುವಂತೆ ಮತದಾರರ ಭೇಟಿ ಮಾಡಿ ಆತ್ಮಸ್ಥೆರ್ಯ ತುಂಬುವ ಸಭೆಗಳನ್ನು ನಡೆಸಲಾಗಿರುತ್ತದೆ.
ಹಾಗೂ ಈ ಮತಗಟ್ಟೆಗಳಿಗೆ ಸೂಕ್ತ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವುದರೊಂದಿಗೆ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮವಹಿಸಲಾಗಿದೆ ಎಂದರು.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 2,529 ವಿಕಲಚೇತನ ಮತದಾರರು ಇದ್ದು, ಇವರು ಮತಗಟ್ಟೆಗಳಿಗೆ ಬರಲು ಅನುಕೂಲವಾಗುವಂತೆ ವೀಲ್‍ಚೇರ್ ವ್ಯವಸ್ಥೆಯನ್ನು ಹಾಗೂ ವಿಶೇಷ ಚೇತನ ಮತ್ತು ವೃದ್ದ ಮತದಾರರು ಮತಗಟ್ಟೆಗೆ ಕರೆತರಲು 18 ವರ್ಷ ವಯೋಮಾನದ ಒಳಗಿನ ಸ್ವಯಂ ಸೇವಕರನ್ನು ನೇಮಿಸಲಾಗುವುದು.
ಮತಗಟ್ಟೆ ಅಧಿಕಾರಿಗಳಿಗೆ ಮೊದಲನೇ ಹಂತದ ತರಬೇತಿಯನ್ನು ಏ.05 ರಂದು ಹಾಗೂ ಎರಡನೇ ಹಂತದ ತರಬೇತಿಯನ್ನು ಏ.16 ರಂದು ತರಳಬಾಳು ಜಗದ್ಗುರು ಪ್ರೌಢಶಾಲೆ, ಹದಡಿ ರಸ್ತೆ, ದಾವಣಗೆರೆ ಇಲ್ಲಿ ಆಯೋಜಿಸಲಾಗಿತುತ್ತದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಸ್ಟರಿಂಗ್ ಕಾರ್ಯವನ್ನು ಏ.22 ರಂದು ಮತ್ತು ಡಿ-ಮಸ್ಟರಿಂಗ್ ಕಾರ್ಯವನ್ನು ಏ.23 ರಂದು ಮೋತಿವೀರಪ್ಪ ಸರ್ಕಾರಿ ಪದವಿಪೂರ್ವ ಕಾಲೇಜು ಇಲ್ಲಿ ನಡೆಸಲು ಉದ್ದೇಶಿಸಲಾಗಿರುತ್ತದೆ.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಸಾಮಾನ್ಯ ವೀಕ್ಷಕರಾಗಿ ಮಾಧವಿ ಖೋಡೆ ಚವಾರೆ, ಐಎಎಸ್, ಚುನಾವಣಾ ವೆಚ್ಚ ವೀಕ್ಷಕರಾಗಿ ವಸೀಂ ಯು.ಆರ್.ರೆಹಮಾನ್, ಐಆರ್‍ಎಸ್‍ಹಾಗೂ ಪೊಲೀಸ್ ವೀಕ್ಷಕರಾಗಿ ರಾಮ್ ಸಿಂಗ್ ಐಪಿಎಸ್ ಇವರನ್ನು ನೇಮಿಸಲಾಗಿದೆ ಎಂದು ಅವರು ವಿವರಿಸಿದರು.ಸುದ್ದಿಗೋಷ್ಟಿಯಲ್ಲಿ ತಹಶೀಲ್ದಾರ್ ಕೆ.ವಿಜಯಕುಮಾರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
