ತಿಪಟೂರು
ಉತ್ತಮ ಆರೋಗ್ಯದ ಜೀವನಕ್ಕೆ ಸಿರಿಧಾನ್ಯ ಬಳಕೆ ಹಾಗೂ ಅವುಗಳ ಉಪಯೋಗ, ಸೇವನೆ ಅತಿ ಅವಶ್ಯಕವಾಗಿದೆ ಎಂದು ಹಾಲ್ಕುರಿಕೆ ಸಾರ್ವಜನಿಕ ಆಸ್ವತ್ರೆಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.
ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆ ತರಳಬಾಳು ಇಂಟರ್‍ನ್ಯಾಷನಲ್ ಶಾಲೆಯ ವತಿಯಿಂದ ಆಯೋಜನೆ ಮಾಡಿದ್ದ “ಮಕ್ಕಳ ಆರೋಗ್ಯ ಸಂಭ್ರಮ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕಯುಗದ ಜೀವನ ಶೈಲಿಯಲ್ಲಿ ನಾವುಗಳು ಬರೀ ಬಾಯಿ ರುಚಿ ಹಾಗೂ ಹೊಟ್ಟೆಯ ಹಸಿವು ತೀರಿಸಿಕೊಳ್ಳಲು ಮಾತ್ರ ಆಹಾರ ಸೇವನೆಯನ್ನು ಮಾಡುತ್ತಿದ್ದು, ಇದರಿಂದ ಮಾನವನ ಬೌದ್ದಿಕ ಹಾಗೂ ದೈಹಿಕ ಬೆಳವಣಿಗೆಯು ಸಾಧ್ಯವಾಗುತ್ತಿಲ್ಲ. ಸಿರಿಧಾನ್ಯಗಳಾದ ಕೊರಲೆ, ಊದುಲು, ನವಣೆ, ರಾಗಿ, ಸಾಮೆ, ಆರ್ಕ ಇವುಗಳ ಸೇವನೆಯಿಂದ ಮಾತ್ರ ಸಾಧವಾಗುತ್ತದೆ ಎಂದು ತಿಳಿಸಿದರು.
ನೊಣವಿನಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಘು ಮಾತನಾಡಿ, ದೇವರ ಮನೆಗಳನ್ನು ಯಾವ ರೀತಿ ಶುಚಿ ಮತ್ತು ಸ್ಪಚ್ಚತೆಯಿಂದ ನೋಡಿಕೊಳ್ಳುತ್ತೇವೆ. ಅದೆ ರೀತಿಯಲ್ಲಿ ನಮ್ಮ ಮನೆಗಳ ಶೌಚಾಲಯಗಳನ್ನು ಅತಿ ಹೆಚ್ಚು ಜಾಗೃತವಾಗಿ ನೋಡಿಕೊಳ್ಳಬೇಕು ಹಾಗೂ ಇಂದು ನಮ್ಮ ಮಕ್ಕಳು ಬೇಕರಿ ತಿಂಡಿ ತಿನಿಸುಗಳಿಗೆ ದಾಸರಾಗುತ್ತಿದ್ದಾರೆ. ಹೆಚ್ಚು ಆಕರ್ಷಕವಾಗಿ ಕಾಣುವ ಆಹಾರಗಳು ನಮ್ಮ ದೇಹಕ್ಕೆ ಹಿತ ನೀಡುವುದಿಲ್ಲ. ಆದರೆ ನಾವಿಂದು ಅಂತಹ ಆಹಾರಗಳನ್ನು ಹುಡುಕಿ ಕೊಂಡು ಹೋಗಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳುತ್ತಿದ್ದೇವೆ. ನಾವುಗಳು ಕಣ್ಣಿಗೆ ಮತ್ತು ಬಾಯಿಗೆ ಹಿತವಾಗುವ ಆಹಾರಕ್ಕೆ ಬದಲಾಗಿ, ದೇಹಕ್ಕೆ ಹಿತಕೊಡುವ ಆಹಾರವನ್ನು ಬಳಸಿ ಆರೋಗ್ಯವಾಗಿರಬೇಕೆಂದರು.
ಹಾಲ್ಕುರಿಕೆ ತರಳಬಾಳು ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷ ನಾಗರಾಜು, ಜೀವ ರಕ್ಷಣೆಯನ್ನು ಮಾಡುವ ನಮ್ಮ ಸಿರಿಧಾನ್ಯಗಳನ್ನು ಬೆಳೆದು, ಅವುಗಳನ್ನು ಉಪಯೋಗಿಸಿ, ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎಚ್‍ಸಿಎಮ್‍ಸಿ ಕಾಲೇಜಿನ ಪ್ರಾಂಶುಪಾಲ ಕುಬೇಂದ್ರಪ್ಪ, ತರಳಬಾಳು ಇಂಟರ್ ನ್ಯಾಷನಲ್ ಶಾಲೆಯ ಮುಖ್ಯೋಪಾಧ್ಯಾಯ ವಿಜಯ್‍ಕುಮಾರ್ ಹಾಗೂ ಮತ್ತಿತರರು ಭಾಗವಹಿಸಿದ್ದು, ತರಳಬಾಳು ಇಂಟರ್ ನ್ಯಾಷನಲ್ ಶಾಲೆಯ ಮಕ್ಕಳಿಂದ ಆಯೋಜಿತವಾಗಿದ್ದ ಸಿರಿಧಾನ್ಯಗಳ ವಸ್ತುಪ್ರದರ್ಶನವು ಪೋಷಕರನ್ನು ಹಾಗೂ ಸಾರ್ವಜನಿಕರನ್ನು ಹೆಚ್ಚು ಆಕರ್ಷಣೆ ಉಂಟು ಮಾಡಿದ್ದು ವಿಶೇಷವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
