ತುಮಕೂರು
ಜನಸಾಮಾನ್ಯರನ್ನು ಸುಲಭವಾಗಿ ತಲುಪುವ ಸಾಮಾಜಿಕ ಜಾಲತಾಣವನ್ನು ಕಾಂಗ್ರೆಸ್ ಕಾರ್ಯಕರ್ತರು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಆ ಮೂಲಕ ಪಕ್ಷದ ಆಶಯಗಳನ್ನು ಜನರಿಗೆ ತಿಳಿಸಬೇಕು ಎಂದು ಸಂಸದ ಎಸ್ ಪಿ ಮುದ್ದಹನುಮೆಗೌಡರು ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೆರಿಯಲ್ಲಿ ನಡೆದ ಸಾಮಾಜಿಕ ಜಾಲತಾಣದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸೋಶಿಯಲ್ ಮೀಡಿಯ ಡಬಲ್ ಎಡ್ಜ್ಡ್ ವೆಪನ್ ಇದ್ದ ಹಾಗೆ. ತುಂಬಾ ಎಚ್ಚರಿಕೆಯಿಂದ ಬಳಸಿ ಎಂದು ಹೇಳಿದರು.
ಕೇವಲ ಘೋಷಣೆಗಳನ್ನೆ ಮಾಡುತ್ತಾ ಅದನ್ನೇ ಆಡಳಿತದ ಸಾಧನೆ ಎಂದು ಬಿಜೆಪಿಯವರು ಸಾಮಾಜಿಕ ಜಾಲ ತಾಣ ಬಳಸಿಕೊಂಡು ಜನರನ್ನು ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಅದಕ್ಕೆ ತಕ್ಕ ಉತ್ತರ ನೀಡಿ, ಜನರಿಗೆ ಸತ್ಯ ಯಾವುದು ಎಂಬುದನ್ನು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.
ತಂತ್ರಜ್ಞಾನವನ್ನು ದೇಶಕ್ಕೆ ಪರಿಚಯಿಸಿದವರು ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು, ಅದರ ವಿರುದ್ದ ಮಾತನಾಡಿದ ಬಿಜೆಪಿಯವರು ಈಗ ಅದೇ ಮಾಧ್ಯಮ ಬಳಸಿಕೊಳ್ಳುತ್ತಿದ್ದಾರೆ. ಜವಾಹರಲಾಲ್ ನೆಹರು, ಬೃಹತ್ ಕೈಗಾರಿಕೆ, ದೊಡ್ಡ ದೊಡ್ಡ ಜಲಾಶಯ ನಿಮಾಣದಲ್ಲಿ ಇಂದಿರಾ ಗಾಂಧಿಯವರು ಈ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಮನಮೋಹನ್ ಸಿಂಗ್ ದೇಶ ಆರ್ಥಿಕ ಸದೃಢತೆಗೆ ಕಾರಣರಾಗಿದ್ದರು. ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿರುವ ಕೊಡುಗೆ ಬಗ್ಗೆ ಜನರಿಗೆ ತಿಳಿಸಲು ಕಾರ್ಯಕರ್ತರು ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಮುದ್ದಹನುಮೆಗೌಡರು ತಿಳಿಸಿದರು.
ದೇಶದ ಬಹುತೇಕ ರೈತರಿಗೆ ಅನುಕೂಲವಾಗುವ ಯಾವ ಯೋಜನೆಯನ್ನು ಮೋದಿ ಸರ್ಕಾರ ಕೊಟ್ಟಿದೆ? ನಿರುದ್ಯೋಗಿ ಯುವಕರಿಗೆ ಎಷ್ಟು ಉದ್ಯೋಗ ಸೃಷ್ಟಿ ಮಾಡಿದೆ? ಮಹಿಳೆಯರಿಗಾಗಿ ನೀಡಿದ ಕೊಡುಗೆ ಏನು ಎಂದು ಕೇಳಿದರೆ ಅವರಲ್ಲಿ ಸ್ಪಷ್ಟ ಉತ್ತರವಿಲ್ಲ. ಇಂತಹ ವಿಚಾರಗಳನ್ನು ಜನರಿಗೆ ತಿಳಿಸಲು ಜಾಲತಾಣ ಬಳಕೆಯಾಗಲಿ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಜಾಲತಾಣದಲ್ಲಿ ಒಳ್ಳೆಯದನ್ನು ಹೇಳಬೇಕು. ಬಿಜೆಪಿಯವರ ಸುಳ್ಳುಗಳಿಗೆ ಪ್ರತಿಕ್ರಿಯೆ ನೀಡಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ಜನಾಭಿಪ್ರಾಯ ಮೂಡಿಸಲು ಸಾಮಾಜಿಕ ಜಾಲತಾಣವನ್ನು ಸಮರ್ಪಕವಾಗಿ ಬಳಸಬೇಕು ಎಂದು ಆಶಿಸಿದರು.
ರಾಜ್ಯ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಚಾಲಕ ನಟರಾಜೆಗೌಡ ಮಾತನಾಡಿ, ಜಾಲತಾಣದ ವಾಟ್ಸಾಪ್, ಫೇಸ್ಬುಕ್‍ಗಳನ್ನು ಸಮರ್ಥವಾಗಿ ಬಳಸಲು ಎಲ್ಲಾ ಕಾರ್ಯಕರ್ತರು ಕಲಿಯಬೇಕು. ಪಕ್ಷದ ಕೊಡುಗೆ ಬಗ್ಗೆ ತಿಳಿವಳಿಕೆ ಹೊಂದಿ ಅದರ ವಿರುದ್ಧ ಬರುವ ಸುಳ್ಳು ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡುವ ಬದ್ದತೆ ಪ್ರದರ್ಶಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಆರ್ ರಾಜೇಂದ್ರ,, ಮುಖಂಡರಾದ ಮುರಳಿಧರ ಹಾಲಪ್ಪ, ವಾಸುದೇವ ಮೂರ್ತಿ, ಸಿ ಶಿವಮೂರ್ತಿ, ಟಿ ಎಸ್ ನಿರಂಜನ್, ಗೀತಾ ರುದ್ರೇಶ್, ಮಂಜುನಾಥ್ ಅದ್ದೆ, ತು ಬಿ ಮಲ್ಲೇಶ್, ನಯಾಜ್ ಅಹಮದ್, ರಾಯಸಂದ್ರ ರವಿಕುಮಾರ್ ಮೊದಲಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
