ಚಿತ್ರದುರ್ಗ:
ಹೆಣ್ಣಿಗೆ ಹೆಣ್ಣೆ ಶತ್ರುವಾದಾಗ ಬೇರೆಯವರನ್ನು ದೂಷಿಸಿ ಯಾವ ಪ್ರಯೋಜನವಿಲ್ಲ. ಅದಕ್ಕಾಗಿ ಮಹಿಳೆ ಮೊದಲು ಒಗ್ಗಟ್ಟಾಗಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಜಿಲ್ಲಾ ಗೈಡ್ ಆಯುಕ್ತರಾದ ಸುನೀತಾ ಮಲ್ಲಿಕಾರ್ಜುನ್ ತಿಳಿಸಿದರು.ಕಾಲೇಜು ಶಿಕ್ಷಣ ಇಲಾಖೆ, ದಾವಣಗೆರೆ ವಿಶ್ವವಿದ್ಯಾನಿಲಯ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಪುರುಷನ ಅಡಿಯಾಳು ಎನ್ನುವ ಕೀಳರಿಮೆ ಬಿಟ್ಟು ಎಲ್ಲಾ ರಂಗಗಳಲ್ಲಿಯೂ ತನ್ನನ್ನು ತಾನು ತೊಡಿಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು. ಪುರುಷರಿಗಿಂತಲೂ ಮಹಿಳೆಯರಲ್ಲಿ ಅಸೂಯೆ, ಹೊಟ್ಟೆಕಿಚ್ಚು ಜಾಸ್ತಿಯಿರುತ್ತದೆ. ಸಾಕಷ್ಟು ಅವಕಾಶಗಳಿವೆ ಬಳಸಿಕೊಂಡು ಮಹಿಳೆಯರು ಒಂದಾಗುವ ಮೂಲಕ ಸ್ವಾವಲಂಭಿ ಜೀವನ ಕಂಡುಕೊಳ್ಳಬೇಕು. ಎಲ್ಲದಕ್ಕೂ ಮತ್ತೊಬ್ಬರನ್ನು ತಪ್ಪಿತಸ್ಥರನ್ನಾಗಿ ಮಾಡಬಾರದು ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ಕಾನೂನು ಮಾಹಿತಿ ಸಲಹೆಗಾರರು ಹಾಗೂ ನ್ಯಾಯವಾದಿ ಶಕೀಲಾಭಾನು ಮಾತನಾಡಿ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯ, ಶೋಷಣೆ, ದಬ್ಬಾಳಿಕೆ ತಡೆಯುವುದಕ್ಕಾಗಿ ಕಾನೂನಿದೆ. ಬಾಲ್ಯ ವಿವಾಹ, ಮಹಿಳೆ ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಶೋಷಣೆ, ವರದಕ್ಷಿಣೆ ಕಿರುಕುಳ, ಗಂಡ, ಅತ್ತೆ, ಮಾವ ಹಾಗೂ ಮನೆಯವರಿಂದ ಕಿರುಕುಳವಾದಾಗಲೂ ದೂರು ನೀಡಿ ನ್ಯಾಯ ಪಡೆಯಬಹುದು. ಒಟ್ಟಾರೆ ಕಾನೂನಿನಲ್ಲಿ ಮಹಿಳೆಯರಿಗೆ ಏನೆಲ್ಲಾ ಉಪಯೋಗಗಳಿದೆ ಎನ್ನುವುದನ್ನು ತಿಳಿದುಕೊಳ್ಳಲು ಮಹಿಳೆ ಮೊದಲು ಶಿಕ್ಷಣವಂತಳಾಗಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಾಗ ಪೋಕ್ಸೊ ಕಾಯಿದೆಯಡಿ ಶಿಕ್ಷಿಸುವ ಕಾನೂನು 2012 ರಲ್ಲಿ ಜಾರಿಗೆ ಬಂದಿತು. ಹೆಣ್ಣು ಭ್ರೂಣಹತ್ಯೆ ಕೂಡ ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಎಲ್ಲರೂ ತಿಳಿದುಕೊಂಡಿರಬೇಕು. ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಅನಿತ ಸಂವಾದದಲ್ಲಿ ಪಾಲ್ಗೊಂಡು ಎಲ್ಲಾ ಕ್ಷೇತ್ರಗಳಲ್ಲಿಯೂ ಈಗ ಮಹಿಳೆ ಪುರುಷನಿಗೆ ಸರಿಸಮಾನವಾಗಿ ದುಡಿಯುತ್ತಿದ್ದಾಳೆ.
ಮಹಿಳೆಗೆ ಮಹಿಳೆಯೇ ಶತ್ರುವಾಗಬಾರದು ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕಾದರೆ ಹೆಣ್ಣು ಶಿಕ್ಷಣವನ್ನು ಕಡ್ಡಾಯವಾಗಿ ಪಡೆಯಬೇಕು. ಹೆಣ್ಣು ಗಂಡು ಎನ್ನುವ ತಾರತಮ್ಯ ಮೊದಲು ಆರಂಭಗೊಳ್ಳುವುದೇ ಮನೆಯಿಂದ. ತಂದೆ-ತಾಯಿಗಳೆ ಹೆಣ್ಣು ಮಗುವನ್ನು ಕೀಳಾಗಿ ನೋಡುವುದು ಇನ್ನು ಜೀವಂತವಾಗಿರುವುದರಿಂದ ಮಹಿಳೆಯ ಪ್ರಗತಿ ಕುಂಠಿತವಾಗುತ್ತಿದೆ. ಎಲ್ಲಾ ಶೋಷಣೆಯಿಂದ ಮಹಿಳೆ ಹೊರಬರಬೇಕಾದರೆ ಅಕ್ಷರ ಕಲಿಯಬೇಕು ಎಂದು ಸಹಪಾಠಿಗಳಿಗೆ ಹೇಳಿದರು.
ಮಹಿಳಾ ಸಬಲೀಕರಣ ಆಗಿದೆಯೇ ಇಲ್ಲವೇ ಎಂಬುದರ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಲಕ್ಷ್ಮಿನಾರಾಯಣ, ಪ್ರಾಧ್ಯಾಪಕಿ ತಾರಿಣ ಶುಭದಾಯಿನಿ, ಮಹಿಳಾ ಸಬಲೀರಕಣ ಘಟಕದ ಸಂಚಾಲಕರಾದ ಲೀಲಾವತಿ, ಪ್ರೊ.ಸಿ.ಬಸವರಾಜ್, ಹಿರಿಯ ಪ್ರಾಧ್ಯಾಪಕ ಬಿ.ಮಂಜುನಾಥ್, ಡಾ.ಚನ್ನಕೇಶವ, ಪ್ರೊ.ಮಲ್ಲಿಕಾರ್ಜುನ, ಪ್ರೊ.ಸಿದ್ದಪ್ಪ, ಪ್ರೊ.ಕುಮಾರಸ್ವಾಮಿ ವೇದಿಕೆಯಲ್ಲಿದ್ದರು.ವಿದ್ಯಾರ್ಥಿನಿ ಮೇಘನಾ ಪ್ರಾರ್ಥಿಸಿದರು. ಪ್ರೊ.ಹೆಚ್.ಶಕುಂತಲ ಸ್ವಾಗತಿಸಿದರು. ಪ್ರೊ.ಲೀಲಾವತಿ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ