ಸರ್ಕಾರದ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಿ

ಹೊನ್ನಾಳಿ:

      ಸರಕಾರದಿಂದ ದೊರೆಯುವ ಅನುದಾನವನ್ನು ಸಂಘ-ಸಂಸ್ಥೆಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

      ತಾಲೂಕಿನ ಕುಳಗಟ್ಟೆ ಗ್ರಾಮದ ವಾಲ್ಮೀಕಿ ಸ್ತ್ರೀಶಕ್ತಿ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸರಕಾರದ ಅನುದಾನ 1.75 ಲಕ್ಷ ರೂ.ಗಳ ಚೆಕ್‍ನ್ನು ಸೋಮವಾರ ತಮ್ಮ ಸ್ವಗೃಹದಲ್ಲಿ ವಿತರಿಸಿ ಅವರು ಮಾತನಾಡಿದರು.

       ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸ್ಥಾಪಿಸಿ ತನ್ಮೂಲಕ ಅಭಿವೃದ್ಧಿಗಾಗಿ 6.3ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿ ವಾಲ್ಮೀಕಿ ಜಯಂತಿ ಆಚರಣೆಗೆ ಚಾಲನೆ ನೀಡಿದ್ದರು. ಅಲ್ಲದೆ ಸರಕಾರದ ವತಿಯಿಂದ ವಾಲ್ಮೀಕಿ ಜಯಂತಿಗೆ ರಜೆ ಘೋಷಣೆ ಮಾಡಲಾಗಿತ್ತು ಎಂದು ತಿಳಿಸಿದರು.

       ಯಡಿಯೂರಪ್ಪ ಅವರ ಆಡಳಿತ ಕಾಲದಲ್ಲಿ ವಾಲ್ಮೀಕಿ, ಕನಕ ಜಯಂತಿ ಸೇರಿದಂತೆ ಎಲ್ಲಾ ಮಹಾತ್ಮರ ಜಯಂತಿಗಳನ್ನು ಸರಕಾರದ ವತಿಯಿಂದ ಆಚರಿಸುವ ಪರಿಪಾಠ ಪ್ರಾರಂಭಿಸಲಾಯಿತು. ತನ್ಮೂಲಕ ಅವರ ತತ್ವಾದರ್ಶಗಳ ಪಾಲನೆಗೆ ಹಾಗೂ ಇಂದಿನ ಪೀಳಿಗೆಗೆ ಮಹಾತ್ಮರ ನೆನಪು ಮಾಡಿ ಕೊಡುವ ಮಹತ್ವದ ಕಾರ್ಯ ಮಾಡಲಾಯಿತು ಎಂದು ವಿವರಿಸಿದರು.

          ಅಭಿವೃದ್ಧಿಗೆ ಮತ್ತೊಂದು ಹೆಸರೇ ಯಡಿಯೂರಪ್ಪ. ಎಲ್ಲಾ ಸಮಾಜದ ಏಳ್ಗೆಗೆ ಅನುಕೂಲವಾಗುವ ಯೋಜನೆಗಳನ್ನು ಬಿಎಸ್‍ವೈ ರೂಪಿಸುತ್ತಿದ್ದರು. ಅವರು ಜಾರಿಗೊಳಿಸಿದ ಯೋಜನೆಗಳು ಹಾಗೂ ನೀಡಿದ ಆಡಳಿತ ಇಂದಿಗೂ ಜನಮನದಲ್ಲಿ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಮ್ಮಿಶ್ರ ಸರಕಾರ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಒಂದು ವರ್ಷದಿಂದ ಹೆಣಗಾಡುತ್ತಿರುವುದನ್ನು ಜನರು ಗಮನಿಸಿ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ರಾಜ್ಯದಲ್ಲಿ ಮೈತ್ರಿ ಪಕ್ಷಗಳಿಗೆ ತಲಾ ಒಂದು ಕ್ಷೇತ್ರ ಮಾತ್ರ ಮತದಾರ ನೀಡಿದ್ದಾನೆ. ಆದರೂ, ಅಧಿಕಾರದ ಆಸೆಗೆ ಒಂದಾಗಿ ಹೋಗೋಣ ಎನ್ನುವ ಮಂತ್ರ ಜಪಿಸುತ್ತಾ ಕುರ್ಚಿಗೆ ಅಂಟಿ ಕುಳಿತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ಎಂದು ಕುಟುಕಿದರು.

        ರಾಜ್ಯ ಬರಗಾಲದಿಂದ ತತ್ತರಿಸುತ್ತಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸ್‍ನವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ಅನೇಕ ತಂತ್ರಗಳನ್ನು ರೂಪಿಸುವಲ್ಲಿ ಕಾಲ ಕಳೆಯುತ್ತಿದ್ದಾರೆ. ಇದ್ಯಾವುದೂ ಮುಂದಿನ ದಿನಗಳಲ್ಲಿ ನಡೆಯುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ತಿಮ್ಮೇನಹಳ್ಳಿ ಟಿ.ಆರ್. ಚಂದಪ್ಪ, ಕುಳಗಟ್ಟೆ ಗ್ರಾಮದ ವಾಲ್ಮೀಕಿ ಸ್ತ್ರೀಶಕ್ತಿ ಮಹಿಳಾ ಸ್ವ-ಸಹಾಯ ಗುಂಪುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap