ಉತ್ತರ ಪ್ರದೇಶ ಈಗ ಅತ್ಯಾಚಾರ ಪ್ರದೇಶವಾಗಿದೆ : ಬಿ ಕೆ ಹರಿಪ್ರಸಾದ್

ಬೆಂಗಳೂರು

     ರಾಷ್ಟ್ರೀಯ ಅಪರಾಧ ದಳ – ನ್ಯಾಷನಲ್ ಕ್ರೈಮ್ ಬ್ಯೂರೋ ಪ್ರಕಾರ ದೇಶದಲ್ಲೇ ಅತ್ಯಂತ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ವರದಿಯಾಗುವ ಮೂಲಕ ಉತ್ತರ ಪ್ರದೇಶ, ಅತ್ಯಾಚಾರ ಪ್ರದೇಶವಾಗಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಟೀಕಿಸಿದ್ದಾರೆ.

     ಮಲ್ಲೇಶ್ವರಂ ಬ್ಲಾಕ್ ಕಾಂಗ್ರೆಸ್‍ನಿಂದ ಕುವೆಂಪು ಪ್ರತಿಮೆ ಬಳಿ ಉತ್ತರ ಪ್ರದೇಶ ಸರಕಾರದ ದೌರ್ಜನ್ಯ, ದಬ್ಬಾಳಿಕೆ, ಜನಧ್ವನಿ, ದಮನ ನೀತಿಯ ವಿರುದ್ದ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುತ್ತಿರುವುದನ್ನು ಖಂಡಿಸಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯ ನೇತೃತ್ವವನ್ನು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೆಂಗಲ್ ಶ್ರೀಪಾದ ರೇಣು ವಹಿಸಿಕೊಂಡಿದ್ದರು.

     ಪ್ರತಿಭಟನೆಯಲ್ಲಿ ಬಿ.ಕೆ ಹರಿಪ್ರಸಾದ್ ಮಾತನಾಡಿ, ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಈ ದೇಶದಲ್ಲಿ ಯಾವುದೇ ಮಹಿಳೆಯರು ಸುರಕ್ಷಿತರಲ್ಲ. ದೇಶದಲ್ಲಿ ಅದರಲ್ಲೂ ಉತ್ತರ ಪ್ರದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದಕ್ಕೆ ನ್ಯಾಷನಲ್ ಕ್ರೈಮ್ ಬ್ಯೂರೋ ನೀಡಿರುವ ಅಂಕಿ ಸಂಖ್ಯೆಗಳೇ ಸಾಕ್ಷಿ. ಈ ನಿಟ್ಟಿನಲ್ಲಿ ಉತ್ತರಪ್ರದೇಶ ಅತ್ಯಾಚಾರ ಪ್ರದೇಶವಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

     ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕಾಂಗ್ರೆಸ್ ಮುಖಂಡ ಕೆಂಗಲ್ ಶ್ರೀಪಾದ ರೇಣು ಮಾತನಾಡಿ, ದೇಶದಲ್ಲಿ ಅರಾಜಕತೆ ಹೆಚ್ಚಾಗುತ್ತಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಘಲವಾಗಿದೆ. ದಲಿತ ಯುವತಿಯ ಅತ್ಯಾಚಾರದ ಬಗ್ಗೆ ಒಂದೇ ಒಂದು ಸಂತಾಪ ಹೇಳದೇ ಇರುವುದು ನರೇಂದ್ರ ಮೋದಿ ಅವರ ದಲಿತ ವಿರೋಧಿ ನೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.ಶಾಂತಿಯುತವಾಗಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link