ದಾವಣಗೆರೆ
ಕೆಲ ಸನಾತನ ಹಾಗೂ ಪಟ್ಟಭದ್ರ ಶಕ್ತಿಗಳು ವಚನ ಸಾಹಿತ್ಯವನ್ನು ಹತ್ತಿಕ್ಕುವ ಹುನ್ನಾರವನ್ನು ನಿರಂತರವಾಗಿ ನಡೆಸುತ್ತಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಡಾ.ಗೋ.ರು.ಚನ್ನಬಸಪ್ಪ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕದಳಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಚನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವಚನ ಸಾಹಿತ್ಯದ ಸಾರವೇ ಗೊತ್ತಿಲ್ಲದ ಕೆಲ ಸನಾತನ ಶಕ್ತಿಗಳು ತಮ್ಮ ಹಿತಾಸಕ್ತಿಗಾಗಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಲೇ ಬಂದಿದ್ದು, ಇನ್ನೂ ಮಾಡುತ್ತಲೇ ಇವೆ ಎಂದು ಹೇಳಿದರು.
ಯಾರು ಏನೇ ಹುನ್ನಾರ ನಡೆಸಿದರೂ ಸಹ ವಚನ ಸಾಹಿತ್ಯವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಸರ್ವ ಕಾಲದಲ್ಲೂ ಎಲ್ಲವನ್ನೂ ಮೆಟ್ಟಿ ನಿಂತು, ಮೀರಿ ಬೆಳೆಯುವ ದಿಟ್ಟತನ ವಚನ ಸಾಹಿತ್ಯಕ್ಕಿದೆ ಎಂದರು.
ಬಸವಾದಿ ಶರಣರು ನೆಲೆಸಿದ ಅನುಭವ ಮಂಟಪದ ನವ ನಿರ್ಮಾಣಕ್ಕಾಗಿ 600 ಕೋಟಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ 18 ತಿಂಗಳಾಗಿದೆ. ಆದರೆ, ಈಗ ನಿಮ್ಮ ಪ್ರಸ್ತಾವನೆ ಬಂದಿದೆ ಎಂಬ ಪತ್ರ ಸರ್ಕಾರದಿಂದ ಇನ್ನೂ ಅನುಭವ ಮಂಟಪದ ನವ ನಿರ್ಮಾಣ ಯಾವಾಗ ಆಗುತ್ತೋ, ಏನೋ ಎಂದು ಬೇಸರ ವ್ಯಕ್ತಪಡಿಸಿದರು.
12ನೇ ಶತಮಾನದಲ್ಲಿಯೇ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಜನರ ಮನಸ್ಸನ್ನು ಶುದ್ಧಿ ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಇಂದಿಗೂ ಸಹ ಎಲ್ಲೆಡೆ ಅಸಹನೆ, ಅಹಂಕಾರ, ಅಸೂಯೆ ಹೆಚ್ಚಾಗಿದೆ. ಆದ್ದರಿಂದ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಈ ಮೂರು ಅನಿಷ್ಟಗಳನ್ನು ಬುಡ ಸಮೇತ ಕಿತ್ತೆಸೆದಾಗ ಮಾತ್ರ ಸಮಾಜದಲ್ಲಿ ಶಾಂತಿ, ನಮ್ಮದಿ ನೆಲೆಯೂರಿ ಶರಣರ ಕನಸಿನ ಸಮಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದರು
ಮಾತು ವಚನವಾದರೂ ಎಲ್ಲಾ ಮಾತುಗಳು ವಚನವಾಗುವುದಿಲ್ಲ. ನುಡಿದಂತೆ ನಡೆದರೆ ಮಾತ್ರ ಅದು ವಚನ ಆಗುತ್ತದೆ. ಅಂತಹ ಮಾರ್ಗದಲ್ಲಿ ಬಸವಾದಿ ಶರಣರು ನಡೆದಿದ್ದರು. ಹೀಗಾಗಿ ಅವರು ನುಡಿದ ಪ್ರತಿ ಮಾತು ಕೂಡ ವಚನವಾಗಿದೆ. ಅಂತಹ ಶರಣರ ವಚನಗಳು ಹರಿದು ಹಂಚಿ ಹೋಗಿದ್ದ ಸಂದರ್ಭದಲ್ಲಿ ಸಾಹಿತಿ ಫ.ಗು. ಹಳಕಟ್ಟಿ ಹಳ್ಳಿ ಹಳ್ಳಿ ಸುತ್ತಿ ಓಲೆಗರಿಗಳನ್ನು ಸಂಗ್ರಹಿಸಿ ವಚನ ಸಾಹಿತ್ಯವನ್ನು ವ್ಯವಸ್ಥಿತವಾಗಿ ದೊರಕುವಂತೆ ಮಾಡುವಲ್ಲಿ ಪ್ರಮುಖರಾಗಿದ್ದಾರೆ ಎಂದು ಹೇಳಿದರು.
ಪ್ರಸ್ತುತ ಲೋಕಸಭೆ, ವಿಧಾನಸಭೆಗಳಲ್ಲಿ ಆರೋಗ್ಯಪೂರ್ಣ ಚರ್ಚೆ ನಡೆಯುತ್ತಿಲ್ಲ. ಜನರ ಸಮಸ್ಯೆ ಬಗೆಹರಿಸುವ ಬಗ್ಗೆ ಯಾವುದೇ ಚರ್ಚೆ ನಡೆಯುತ್ತಿಲ್ಲ. ಬರೀ ಪರ-ವಿರೋಧದ ಸಂತೆಯ ಗದ್ದಲಕ್ಕೆ ಕಾರಣವಾಗಿವೆ. ಈ ಸ್ಥಿತಿ ಬದಲಾಗಬೇಕು. ಜನಹಿತಕ್ಕಾಗಿ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ವಿಚಾರಗಳು ಗಂಭೀರವಾಗಿ ಚರ್ಚೆ ಆಗಬೇಕು ಎಂದರು.
ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ ಸ್ವಾಮೀಜಿ ಮಾತನಾಡಿ, ಹಿರಿಯರಿಗೆ ಕೊಡುವ ಭಾಷೆಯು ಪ್ರಮಾಣವಾದರೆ, 12ನೆ ಶತಮಾನದಲ್ಲಿ ಬಸವಾದಿ ಶರಣರು ನುಡಿಯುತ್ತಿದ್ದ ಒಂದೊಂದು ಮಾತು ಸಹ ವಚನವಾಗಿರುತ್ತಿತ್ತು. ಅವರು ನುಡಿದಂತೆ ನಡೆದು ಸಾತ್ವಿಕ ಬದುಕು ನಡೆಸಿ ಅಮೂಲ್ಯ ವಚನ ಸಾಹಿತ್ಯ ನೀಡಿ ಹೋಗಿದ್ದಾರೆ. ಅವರ ವಿಚಾರಧಾರೆಗಳನ್ನು ಜನರು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಬದುಕು ಸಾರ್ಥಕಗೊಳಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸಮ್ಮೇಳನದ ಅಧ್ಯಕ್ಷತೆಯನ್ನು ಶ್ರೀಬಸವಗುರು ತಪೋವನ ಟ್ರಸ್ಟ್‍ನ ಶಿವಾನಂದ ಗುರೂಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಬಸವರಾಜ ಸಾದರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ, ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಪ್ರಮೀಳಾ ನಟರಾಜ್ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ