ತುಮಕೂರು
ತುಮಕೂರು ನಗರದ ಶೆಟ್ಟಿಹಳ್ಳಿಯಲ್ಲಿರುವ ಪುರಾತನ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಮಧ್ಯಾಹ್ನ ಸಕಲ ಧಾರ್ಮಿಕ ವಿಧಿವಿಧಾನಗಳ ನಡುವೆ ಶಾಸ್ತ್ರೋಕ್ತವಾಗಿ ಆಂಜನೇಯ ಸ್ವಾಮಿಯ ರಥೋತ್ಸವವು ವೈಭವದಿಂದ ನೆರವೇರಿತು.
ತುಮಕೂರು ನಗರವಷ್ಟೇ ಅಲ್ಲದೆ ರಾಜ್ಯಾದ್ಯಂತದಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ, ಸುಡುಬಿಸಿಲನ್ನೂ ಲೆಕ್ಕಿಸದೆ ರಥೋತ್ಸವವನ್ನು ಕಣ್ತುಂಬಿಕೊಂಡರು.
ರಥೋತ್ಸವ ಹಿನ್ನೆಲೆಯಲ್ಲಿ ಇಡೀ ಶೆಟ್ಟಿಹಳ್ಳಿಯು ತಳಿರುತೋರಣಗಳಿಂದ ಅಲಂಕೃತಗೊಂಡಿತ್ತು. ಜಾತ್ರೆಯ ಸೊಗಡು ಹಿಂದಿನ ದಿನದಿಂದಲೇ ಮನೆಮಾಡಿತ್ತು. ರಿಂಗ್ ರಸ್ತೆಯ ಆಸುಪಾಸಿನಿಂದಲೇ ವೈವಿಧ್ಯಮಯವಾದ ನೂರಾರು ಅಂಗಡಿಗಳು ಜಾತ್ರೆಯ ರಂಗೇರುವಂತೆ ಮಾಡಿತು.
ನಗರದ ಶೆಟ್ಟಿಹಳ್ಳಿ ರೈಲ್ವೇಗೇಟ್‍ನಿಂದ ಶೆಟ್ಟಿಹಳ್ಳಿಯವರೆಗೆ ಅನೇಕ ಕಡೆಗಳಲ್ಲಿ ಅಂಗಡಿ ಮಳಿಗೆಗಳವರು ಸ್ವಯಂಪ್ರೇರಣೆಯಿಂದ ಶಾಮಿಯಾನ ಹಾಕಿ ರಥೋತ್ಸವಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಉಪಹಾರ, ಪಾನಕ, ಮಜ್ಜಿಗೆಯ ವ್ಯವಸ್ಥೆ ಮಾಡಿದ್ದುದು ವಿಶೇಷವಾಗಿತ್ತು.
ನಗರದ ಬಸ್‍ನಿಲ್ದಾಣದಿಂದ ಶೆಟ್ಟಿಹಳ್ಳಿ ಕಡೆಗೆ ತೆರಳುವ ಎಲ್ಲ ಸಿಟಿಬಸ್‍ಗಳೂ ಶುಕ್ರವಾರ ಬೆಳಗಿನಿಂದಲೂ ಜನದಟ್ಟಣಿಯಿಂದ ಕೂಡಿತ್ತು. ರಥೋತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ರಿಂಗ್ ರಸ್ತೆಯಲ್ಲಿ ತೆರಳುವ ವಾಹನಗಳು ಶೆಟ್ಟಿಹಳ್ಳಿ ಭಾಗದಲ್ಲಿ ಅಪಾರ ಜನಸ್ತೋಮದ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿ ಸಂಚರಿಸಿದವು.