ಪ.ನಾ.ಹಳ್ಳಿ
ಕಾಯಕ ಯೋಗಿಯಾಗಿ ನಿತ್ಯ ಬಡ ರೋಗಿಗಳ ಸೇವೆಯನ್ನು ಪ್ರಮಾಣಿಕವಾಗಿ ಮಾಡುವಂತ ವೈದ್ಯ, ಜನರ ಪ್ರೀತಿಗಳಿಸುವ ಮೂಲಕ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾನೆ ಎಂದು ಕಣ್ಣಿನ ತಜ್ಞ ಡಾ.ಅಜ್ಗರ್ ಬೇಗ್ ಹೇಳಿದರು.ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿ ದ್ವಾರನಕುಂಟೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳವಾರ ಆಯೋಜಿಸಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಅಸ್ಪತ್ರೆಗೆ ಬರುವಂತ ಬಡರೋಗಿಗಳಿಗೆ ಪ್ರೀತಿ, ವಿಶ್ವಾಸದಿಂದ ಮಾತನಾಡಿಸುವಂತ ಪ್ರವೃತ್ತಿ ಆರೋಗ್ಯ ಕಾರ್ಯಕರ್ತರು ಬೆಳೆಸಿಕೊಂಡಾಗ ರೋಗಿಯ ಅರ್ಧ ಪ್ರಮಾಣದ ಕಾಯಿಲೆ ದೂರವಾಗಲಿದ್ದು, ಸರ್ಕಾರಿ ಅಸ್ಪತ್ರೆಗಳ ಮೇಲಿನ ಜನರ ವಿಶ್ವಾಸ ನಂಬಿಕೆ, ವಿಶ್ವಾಸ ದುಪ್ಪಟ್ಟಾಗಲಿದೆ ಎಂದರು.
ವೈದ್ಯಾಧಿಕಾರಿ ಡಾ.ರಾಜಶೇಖರ್ ಮಾತನಾಡಿ ವಿದೇಶಿಯರು ಮಾತ್ರ ವೈದ್ಯರಾಗಲು ಆರ್ಹರು, ಭಾರತೀಯರಿಗೆ ವೈದ್ಯ ಪದವಿ ಗಗನ ಕುಸುಮ ಎಂಬುದನ್ನು ಮೆಟ್ಟಿನಿಂತು ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಭಾರತರತ್ನ ಪ್ರಶಸ್ತಿ ಪಡೆದ ಡಾ.ಬರನ್ ಚಂದ್ರರಾಯ್ ಇಂದಿನ ವೈದ್ಯರು ಆದರ್ಶವಾಗಿಟ್ಟು ಕೊಂಡು ಸೇವೆ ಮಾಡಬೇಕು. ಹೃದಯ ವೈಶಾಲ್ಯತೆಯಿಂದ ರೋಗಿಗಳ ಮನಸ್ಸನ್ನು ಗೆಲ್ಲಲು ಸಾಧ್ಯವಿದ್ದು, ಗ್ರಾಮೀಣ ಪ್ರದೇಶದ ವಿಧ್ಯಾರ್ಥಿಗಳು ಶ್ರದ್ದೆಯಿಂದ ವ್ಯಾಸಂಗ ಮಾಡಿ ವೈದ್ಯರಾಗುವಂತ ಕನಸು ಕಾಣ ಬೇಕು. ಇಂತಹ ಕನಸುಗಳು ಸಕಾರಗೊಳ್ಳಲು ಕಠಿಣ ಪರಿಶ್ರಮದ ಅವಶ್ಯಕತೆ ಇದೆ ಎಂದರು.
ಗ್ರಾಮ ಪಂಚಾಯತಿ ಸದಸ್ಯೆ ಲಕ್ಷ್ಮೀದೇವಮ್ಮ ಮಾತನಾಡಿ ಎಂತಹ ಕ್ಲಿಷ್ಟ ಸಂಧರ್ಭದಲ್ಲೂ ರೋಗದ ವಿರುದ್ದ ಹೋರಾಟ ಮಾಡಿ ರೋಗ ಗುಣ ಪಡಿಸುವ ಸಾರ್ಮಥ್ಯವಿರುವಂತ ವೈದ್ಯ, ರೋಗಿಗಳ ಮನಸ್ಸಿನಲ್ಲಿ ದೇವರ ನಂತರದ ಸ್ಥಾನ ಅಲಂಕರಿಸುತ್ತಾನೆ ಎಂದರು.ವೈದ್ಯಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಜೆ.ತಿಮ್ಮರಾಜು, ಗ್ರಾಪಂ ಮಾಜಿ ಉಪಾಧ್ಯಕ್ಷೆ ಜಯಮ್ಮ, ಕಾಳಿದಾಸ ಪ್ರೌಢಶಾಲೆಯ ಶಿಕ್ಷಕ ರಾಮಯ್ಯ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜುನಾಥ್, ತಿಮ್ಮರಾಜು ಸೇರಿದಂತೆ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.