ಚಿಕ್ಕನಾಯಕನಹಳ್ಳಿ
ಪಟ್ಟಣದಲ್ಲಿ ವಾಲ್ಮೀಕಿ ಭವನ ನಿರ್ಮಿಸಲು ಈ ಮೊದಲೇ 1.5 ಕೋಟಿ ಹಣ ಬಿಡುಗಡೆಯಾಗಿತ್ತು. ಅದನ್ನು ಇನ್ನಷ್ಟು ಹೆಚ್ಚಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಚಿವ ಗೋವಿಂದ ಕಾರಜೋಳರವರಿಗೆ ವಾಲ್ಮೀಕಿ ಭವನಕ್ಕೆ ಬಿಡುಗಡೆಯಾಗಿರುವ ಹಣವನ್ನು ಹೆಚ್ಚಿಸಲು ಕಳುಹಿಸಲಾಗಿದೆ. ಸಚಿವರು ಈ ಬಗ್ಗೆ ಸ್ಪಂದಿಸಲಿದ್ದು ಒಂದೆರಡು ವಾರದೊಳಗೆ ಈ ಬಗ್ಗೆ ಅಧಿಕೃತವಾಗಿ ನಿಮಗೆ ತಿಳಿಸಲಾಗುವುದು ಹಾಗೂ ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಯುತ್ತಿದ್ದು ಆಯಾ ಜನಾಂಗದ ಸಂಖ್ಯೆ, ಆಧಾರದ ಮೇಲೆ ವೈಜ್ಞಾನಿಕವಾಗಿ ಚಿಂತನೆ ಮಾಡಿ ಕಾನೂನಿನ್ವಯ ಮೀಸಲಾತಿ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಮಹರ್ಷಿ ವಾಲ್ಮೀಕಿ ಸಂಪೂರ್ಣ ರಾಮಾಯಣವನ್ನು ಜಗತ್ತಿಗೆ ತಿಳಿಸಿದರು. ಅವರು ತಿಳಿಸಿದ ರಾಮಾಯಣದ ಕಥೆ ನೀತಿಕಥೆಯಾಗಿ ಸಮರ್ಪಕವಾಗಿ ತೆರೆದಿಟ್ಟಿದೆ. ಅಣ್ಣ-ತಮ್ಮ, ಅಪ್ಪ-ಅಮ್ಮ, ಅಧಿಕಾರ, ರಾಜ್ಯ ಹಾಗೂ ಬದುಕು ಎಲ್ಲ ಕೂಡ ಹೇಗಿರಬೇಕು ಎಂದು ಸಮರ್ಪಕವಾಗಿ ಚಿತ್ರಿಸಿಕೊಟ್ಟಿದ್ದಾರೆ. ರಾಮರಾಜ್ಯ ಎಂದರೆ ಸಮಾನ ಅವಕಾಶ ಕಲ್ಪಿಸುವ ವ್ಯವಸ್ಥೆ ಎಂದು ವಾಲ್ಮೀಕಿ ತಮ್ಮ ಕಥೆಯಲ್ಲಿ ತಿಳಿಸಿದ್ದಾರೆ.
ಡಿಸಿಸಿ ಬ್ಯಾಂಕ್ ನಿರ್ದೆಶಕ ಸಿಂಗದಹಳ್ಳಿ ರಾಜ್‍ಕುಮಾರ್ ಮಾತನಾಡಿ, ತಾಲ್ಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ಭವನಕ್ಕಾಗಿ ಈಗಾಗಲೇ ನಿವೇಶನ ದೊರೆತಿದ್ದು, ಭವನವನ್ನು ಉತ್ತಮವಾಗಿ ನಿರ್ಮಿಸಲು ಸಹಕರಿಸುವಂತೆ ಸಮಾಜದ ಮೂಲಕ ಸಚಿವರಿಗೆ ಮನವಿ ಮಾಡಿದ್ದೇವೆ. ಸಚಿವರು ಈಗಾಗಲೇ ತಾಲ್ಲೂಕಿನ ಹಲವು ಗ್ರಾಮಗಳಿಗೆ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಗ್ರಾಮೀಣ ಪ್ರದೇಶಗಳಲ್ಲೂ ಉತ್ತಮ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದ್ದಾರೆ ಎಂದ ಅವರು, ಸಚಿವರು ಸಣ್ಣ ನೀರಾವರಿ ಇಲಾಖೆಯ ಸಚಿವರಾಗಿರುವುದರಿಂದ ತಾಲ್ಲೂಕಿನಲ್ಲಿ ಹೆಚ್ಚಿನ ಕೊಳವೆ ಬಾವಿಯನ್ನು ಕೊರೆಸಿಕೊಡಬೇಕು, ಸಮಾಜದ ಮೀಸಲಾತಿಯನ್ನು 7.5ಕ್ಕೆ ಹೆಚ್ಚಿಸಬೇಕು ಈ ಮೂಲಕ ಶಿಕ್ಷಣ, ಉದ್ಯೋಗದಲ್ಲಿ ಸಹಕರಿಸಬೇಕು ಎಂದರು.
ಉಪನ್ಯಾಸಕ ನಾಗಭೂಷಣ್ ಬಗ್ಗನಡು ಮಾತನಾಡಿ, ವಾಲ್ಮೀಕಿ ಜನಾಂಗ ಕತ್ತಿ, ಭರ್ಜಿ, ಗುರಾಣಿಯಂತಹ ಆಯುಧಗಳನ್ನು ಮನೆಯಲ್ಲಿಟ್ಟು ಪೂಜಿಸಿ, ಪೆನ್ನು ಎಂಬ ಆಯುಧ ಹಿಡಿದು ಹೊರ ಬನ್ನಿ. ಅಕ್ಷರದ ಕಡೆ ಮುಖ ಮಾಡಿ ಶಿಕ್ಷಣ ಕಲಿಯಿರಿ ಎಂದರಲ್ಲದೆ, ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ 6 ಕಾಂಡವಿದ್ದು ಅದರಲ್ಲಿ ರಾಮಕಾಂಡ, ಅಯೋಧ್ಯಕಾಂಡ, ಅರಣ್ಯಕಾಂಡ, ಕಿಷ್ಕಿಂದಕಾಂಡ, ಸುಂದರಕಾಂಡ ಹಾಗೂ ಯುದ್ದಕಾಂಡವಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೂ ಮುನ್ನು ತಾಲ್ಲೂಕು ಕಚೇರಿಯಲ್ಲಿ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಗೆ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಿದರು. ಮೆರವಣಿಗೆ ತಾಲ್ಲೂಕು ಕಚೇರಿಯಿಂದ ನೆಹರು ಸರ್ಕಲ್, ಖಾಸಗಿ ಬಸ್ಟಾಂಡ್ ಮೂಲಕ ಕನ್ನಡ ಸಂಘದ ವೇದಿಕೆಗೆ ಆಗಮಿಸಿತು.ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷೆ ಚೇತನಗಂಗಾಧರ್, ಜಿ.ಪಂ.ಸದಸ್ಯೆ ಜಯಮ್ಮ, ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಪಂ.ಮಾಜಿ ಸದಸ್ಯೆ ಲೋಹಿತಾಬಾಯಿ, ನಿರುವಗಲ್ ಅನಂತಯ್ಯ, ಸಿಡಿಪಿಓ ತಿಪ್ಪಯ್ಯ, ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಮಾಜಿ ಕೆಪಿಎಸ್ಸಿ ಸದಸ್ಯ ಚಂದ್ರಶೇಖರಪ್ಪ ಮತ್ತಿತರರು ಉಪಸ್ಥಿತರಿದ್ದರು.