ಹರಪನಹಳ್ಳಿ:
ತಾಲ್ಲೂಕಿನಲ್ಲಿ ಬಹುಸಂಖ್ಯಾತ ಸಮಾಜವಾಗಿರುವ ವಾಲ್ಮೀಕಿ ಜನಾಂಗ ಕಾಂಗ್ರೆಸ್ ಪಕ್ಷದ ಏಳ್ಗೆಯಲ್ಲಿ ಸಾಕಷ್ಟು ಶ್ರಮಿಸಿದ್ದರೂ ಇತ್ತೀಚಿನ ದಿನಗಳಲ್ಲಿ ಪಕ್ಷ ಸಮಾಜ ಬಾಂಧವರನ್ನು ಕಡೆಗಣಿಸಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರವೂ ಸಿಗಲಿದೆ’ ಎಂದು ವಾಲ್ಮೀಕಿ ಸಮಾಜ ಕಿಡಿಕಾರಿದೆ.
ತಾಲ್ಲೂಕಿನ ಕಂಚಿಕೇರಿ ಕೋಡಿ ಸಿದ್ದೇಶ್ವರ ದೇವಸ್ಥಾನದಲ್ಲಿ ಗುರುವಾರ ಕರೆಯಲಾಗಿದ್ದ `ತಾಲ್ಲೂಕು ವಾಲ್ಮೀಕಿ ಕಾಂಗ್ರೆಸ್ ಮುಖಂಡರ ಸಭೆ’ಯಲ್ಲಿ ಈ ಮೇಲಿನ ಒಮ್ಮತದ ಅಭಿಪ್ರಾಯ ಮೂಡಿಬಂದಿದೆ. ಎರಡು ದಿನಗಳ ಹಿಂದೆ ಕಾಂಗ್ರೆಸ್ ಎಸ್ಟಿ ಘಟಕಗಳ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ನೇಮಕದಲ್ಲಿ ಸಮಾಜದ ಮುಖಂಡರನ್ನು ಕಡೆಗಣಿಸಿ ಕೆಲವರ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಾಲ್ಲೂಕು ಕಾಂಗ್ರೆಸ್ ವಾಲ್ಮೀಕಿ ಸಮಾಜಕ್ಕೆ ಮಾಡಿರುವ ಘೋರ ಅನ್ಯಾಯ ಮಾಡಿದೆ’ ಎಂದು ಸಭೆಯಲ್ಲಿ ಸೇರಿದ್ದ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕು ಕಾಂಗ್ರೆಸ್ ಮುಖಂಡ ಆಲದಹಳ್ಳಿ ಷಣ್ಮುಖಪ್ಪ ಮಾತನಾಡಿ, `ತಾಲ್ಲೂಕಿನಲ್ಲಿ 40 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ವಾಲ್ಮೀಕಿ ಸಮಾಜ ಕಾಂಗ್ರೆಸ್ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದೆ. ಹೀಗಿದ್ದರೂ ಪಕ್ಷಕ್ಕಾಗಿ ದುಡಿದವರನ್ನು ಬಿಟ್ಟು ತಮಗೆ ಬೇಕಾದವರಿಗೆ ಮಣೆ ಹಾಕಿರುವುದು ಸಲ್ಲ. ವಾಲ್ಮೀಕಿ ಸಮಾಜದಲ್ಲಿನ ಸಂಘಟನೆ ಕೊರತೆಯೇ ಇದಕ್ಕೆ ಕಾರಣವಾಗಿದೆ. ಪಕ್ಷ ಎಲ್ಲರನ್ನೂ ವಿಶ್ವಾಸಕ್ಕೆ ಪಡದು ನೇಮಕಕ್ಕೆ ಮುಂದಾಗಬೇಕಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು.
ಯಡಿಹಳ್ಳಿ ಗ್ರಾಪಂ ಅಧ್ಯಕ್ಷ ಶೇಖರಪ್ಪ ಮಾತನಾಡಿ, ಪಕ್ಷಕ್ಕಾಕಿ ದುಡಿದ ಮುಖಂಡರನ್ನು ಗಮನಕ್ಕೆ ತಂದು ನೇಮಕ ಮಾಡಿದ್ದರೆ ಯಾವುದೇ ಸಮಸ್ಯೆ ಉದ್ಬವಿಸುತ್ತಿರಲ್ಲಿಲ್ಲ. ಮಾಜಿ ಶಾಸಕ ದಿ.ಎಂ.ಪಿ.ರವೀಂದ್ರ ಅವರು ಯಾರನ್ನು ಕಡೆಗಣಿಸದೇ ಸಮಾನ ಗೌರವ ನೀಡುತ್ತಿದ್ದರು. ಸದ್ಯ ಆ ಸಂಪ್ರದಾಯ ಕಣ್ಮರೆಯಾಗುತ್ತಿದ್ದು, ಕೆಲವರ ಮಾತಿಗೆ ಬೆಲೆ ನೀಡುತ್ತಿರುವುದನ್ನು ನಿಲ್ಲಿಸಬೇಕಿದೆ’ ಎಂದು ಆರೋಪಿಸಿದರು.
ಮುಖಂಡ ಬಾಣದ ಅಂಜಿನಪ್ಪ ಮಾತನಾಡಿ, `ತಾಲ್ಲೂಕು ಕಾಂಗ್ರೆಸ್ ಕೆಲ ಮುಖಂಡರ ರಿಮೋಟ್ ಕಂಟ್ರೋಲ್ ಆಗಿದೆ. ಸಮಯಕ್ಕೆ ತಕ್ಕಂತೆ ಸಮಾಜವನ್ನು ಬಳಕೆ ಮಾಡುವುದು ಸರಿಯಲ್ಲ. ಶೀಘ್ರವೇ ಸಮಾಜದ ಮುಖಂಡರನ್ನು ಕರೆದು ಆಗಿರುವ ಲೋಪ ಸರಿಪಡಿಬೇಕು. ತಕ್ಷಣವೇ ಪಕ್ಷ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಮಾಜ ತಕ್ಕ ಪಾಠ ಕಲಿಸಲಿದೆ ಎಂಬುದನ್ನು ಮರೆಯಬಾರದು’ ಎಂದು ಎಚ್ಚರಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಳ್ಳಿಕೆರೆ ರಾಜಪ್ಪ, ಕಿತ್ತೂರು ಓಬಣ್ಣ, ಮಾಜಿ ಸದಸ್ಯೆ ವಿಜಯಲಕ್ಷ್ಮೀ, ಪುರಸಭೆ ಸದಸ್ಯ ಅರುಣ ಪೂಜಾರ, ಮಾಡ್ಲಿಗೆರೆ ಗ್ರಾಪಂ ಅಧ್ಯಕ್ಷ ಅಶೋಕ, ಮುಖಂಡರಾದ ಲಕ್ಕವಳ್ಳಿ ಹನುಮಂತಪ್ಪ, ಇಟ್ಟಿಗುಡಿ ಚನ್ನಬಸಪ್ಪ, ಚಿರಸ್ತಹಳ್ಳಿ ಮರಿಯಪ್ಪ, ತೆಲಗಿ ಗಣೇಶ, ಉಚ್ಚಂಗಿದುರ್ಗ ಮಂಜಣ್ಣ, ದುಗ್ಗಾವತಿ ಮಂಜುನಾಥ, ತೆಲಗಿ ಯೋಗೇಶ್, ಬಸಾಪುರ ಮಂಜುನಾಥ, ನೀಲಗುಂದ ತಿಮ್ಮೇಶ್, ಇಟ್ಟಿಗುಡಿ ಅಂಜಿನಪ್ಪ, ಬೆಂಡಿಗೇರೆ ಹೇಮಣ್ಣ, ಮ್ಯಾಕಿ ಸಣ್ಣಹಾಲಪ್ಪ, ಟಿ.ಕೆಂಚಪ್ಪ, ಗಿಡ್ಡಹಳ್ಳಿ ನಾಗರಾಜ, ಯಡಿಹಳ್ಳಿ ಜಗದೀಶ್, ಮತ್ತಿಹಳ್ಳಿ ಗೌಡಪ್ಪ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ವಾಲ್ಮೀಕಿ ಸಮಾಜದ ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
