ಶಿರಾ
ಮಹನೀಯರು ಸಮಾಜಕ್ಕೆ ಕೊಟ್ಟ ಸಂದೇಶಗಳನ್ನು ಯುವ ಪೀಳಿಗೆಗೆ ಪರಿಚಯಿಸಿ ಜೀವನದಲ್ಲಿ ಅಳವಡಿಸಿ ಕೊಂಡಾಗ ಮಾತ್ರ ಮಹರ್ಷಿ ವಾಲ್ಮೀಕಿ ಜಯಂತಿಯ ಸಾರ್ಥಕತೆ ಕಾಣಲು ಸಾಧ್ಯ. ತಳ ಸಮುದಾಯಗಳ ಅಭಿವೃದ್ಧಿಯು ಸಂಘಟನಾತ್ಮಕ ಚಟುವಟಿಕೆಗಳಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ನೇಜಂತಿ ಗ್ರಾಮದಲ್ಲಿ ಭಾನುವಾರ ನಡೆದ ಶ್ರೀಮಹರ್ಷಿ ವಾಲ್ಮೀಕಿ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಳ ಸಮುದಾಯಗಳು ದೇಶಕ್ಕೆ ಮಹತ್ವದ ಕೊಡುಗೆ ನೀಡಿವೆ. ಇಂತಹ ತಳ ಸಮುದಾಯದ ಮಹಾನ್ ವ್ಯಕ್ತಿಯೇ ರಾಮಾಯಣ ಬರೆದಿದ್ದು ಎಂಬುದನ್ನು ಯಾರೂ ಮರೆಯಬಾರದು. ಮನುಷ್ಯ ಜನ್ಮ ಶೇಷ್ಠವಾಗಿದ್ದು, ಕಷ್ಟದಲ್ಲಿರುವ ಜನರಿಗೆ ಧ್ವನಿಯಾಗಿ ಸೇವೆ ಮಾಡುವ ಮೂಲಕ ಜೀವನ ಸಾರ್ಥಕ ಪಡಿಸಿ ಕೊಳ್ಳಬೇಕು. ರಾಜ್ಯದಲ್ಲಿ ಬರವಿದೆ, ಆದರೆ ಮನುಷ್ಯನ ಅನ್ನದ ಬರ ನೀಗಿಸಿದ್ದು ಸಿದ್ದರಾಮಯ್ಯ ಸರ್ಕಾರ ಮಾತ್ರ ಎಂದರು.
ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಶಾಸಕ ಬಿ.ಸತ್ಯನಾರಾಯಣ, ಸರ್ಕಾರ ಶಿರಾ ಕಸ್ತೂರಿ ರಂಗಪ್ಪ ನಾಯಕನ ಕೋಟೆ ಆಭಿವೃದ್ಧಿಗೆ 5 ಕೋಟಿ ರೂ. ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಪ್ರವಾಸಿ ತಾಣವಾಗಿ ಮಾಡುವ ಗುರಿ ಹೊಂದಿದೆ. ಶೇ.7.5 ರಷ್ಟು ಜನ ಸಂಖ್ಯೆ ಹೊಂದಿರುವ ನಾಯಕ ಸಮಾಜಕ್ಕೆ ಶೇ.3.ರಷ್ಟು ಮೀಸಲಾತಿ ನೀಡಿದೆ. ಇದರಲ್ಲಿ ಯಾವುದೇ ಪಂಗಡಗಳನ್ನು ಮರು ಸೇರ್ಪಡೆ ಮಾಡದೆ ವಾಲ್ಮೀಕಿ ಸಮಾಜದ ಹಿತ ಕಾಯಬೇಕಿದೆ. ತಾಯಂದಿರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪಿಸುವಂತಹ ಹೊಣೆ ಹೊರಬೇಕಿದೆ ಎಂದರು.ಶಿಡ್ಲೇಕೋಣ ವಾಲ್ಮೀಕಿ ಪೀಠದ ಪೀಠಾಧ್ಯಕ್ಷ ಶ್ರೀ ಸಂಜಯಕುಮಾರ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ಜಿಪಂ ಅಧ್ಯಕ್ಷೆ ಲತಾ ಕೆ.ರವಿಕುಮಾರ್, ಮಾಜಿ ಶಾಸಕ ಸಾ.ಲಿಂಗಯ್ಯ, ಜಿಪಂ ಸದಸ್ಯ ಎಸ್.ರಾಮಕೃಷ್ಣ, ಎಪಿಎಂಸಿ ಅಧ್ಯಕ್ಷ ನರಸಿಂಹೆಗೌಡ, ಬಿಜೆಪಿ ಮುಖಂಡ ಬಿ.ಕೆ.ಮಂಜುನಾಥ್, ಪ್ರಾಧ್ಯಾಪಕ ಪ್ರಶಾಂತ ನಾಯಕ, ನಿವೃತ್ತ ಬಂಧಿಖಾನೆ ಡಿಐಜಿ ವೀರೇಂದ್ರ ಸಿಂಹ, ದ್ವಾರನಕುಂಟೆ ಗ್ರಾಪಂ ಅಧ್ಯಕ್ಷ ನರಸಿಂಹಯ್ಯ, ಸದಸ್ಯೆ ಮೀನಾಕ್ಷಿ ರಾಮಕೃಷ್ಣಪ್ಪ, ಮುಖಂಡರಾದ ಮುರುಗಪ್ಪಗೌಡ, ಪ್ರಕಾಶ್‍ಗೌಡ, ಜಿ.ರವಿ, ರಾಕೇಶ್ ಬಾಬು, ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ